ನಾಪೋಕ್ಲು, ಮಾ. ೫: ಕೋಕೇರಿ ಗ್ರಾಮದ ಅಂಬಾಡಿ ಪೈಸಾರಿಯಲ್ಲಿ ಕೂಲಿ ಕಾರ್ಮಿಕ ಕುಟುಂಬ ವಾಸವಾಗಿದ್ದ ಮನೆಯೊಂದು ಭಾನುವಾರ ಧರೆಗುರುಳಿ ಕಾರ್ಮಿಕ ಕುಟುಂಬ ನಿರಾಶ್ರಿತರಾಗಿದೆ.
ಚೈಯಂಡಾಣೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೋಕೇರಿ ಗ್ರಾಮದ ಅಂಬಾಡಿ ಪೈಸಾರಿಯಲ್ಲಿ ಸುಮಾರು ಎಂಟು ವರ್ಷಗಳಿಂದ ಕೂಲಿ ಕಾರ್ಮಿಕ ಲೋಕೇಶ್ - ಭವಾನಿ ದಂಪತಿ ಕುಟುಂಬ ನೆಲೆಸಿತ್ತು.
ಆಕಸ್ಮಿಕ ವಾಗಿ ಮನೆ ಸಂಪೂರ್ಣ ಮುರಿದು ಬಿದ್ದು ಛಾವಣಿಗೆ ಅಳವಡಿಸಿದ್ದ ಹಂಚುಗಳು, ಗೃಹಪಯೋಗಿ ವಸ್ತುಗಳು ನಜ್ಜುಗುಜ್ಜಾಗಿ ನಷ್ಟ ಸಂಭವಿಸಿದೆ. ಮನೆಯ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಭವಾನಿ ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮೀಪದ ಬಂಧುಗಳ ಮನೆಯಲ್ಲಿ ಲೋಕೇಶ್ - ಭವಾನಿ ದಂಪತಿ ಕುಟುಂಬ ಆಶ್ರಯ ಪಡೆದಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಗೆ ದೂರನ್ನು ನೀಡಲಾಗಿದ್ದು ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್ ಸ್ಪಂದಿಸಿದ್ದಾರೆ. ಕುಟುಂಬಕ್ಕೆ ಸೂಕ್ತ ಪರಿಹಾರದ ಭರವಸೆಯನ್ನು ನೀಡಿದ್ದಾರೆ.