ನ್ಯಾಯಪಾಲನೆ ನಮ್ಮ ಯುಕ್ತಿ - ನ್ಯಾಯದರ್ಶನ ನಮ್ಮ ಶಕ್ತಿ...
ಹೀಗೊಂದು ಅದ್ಭುತ ವಾಕ್ಯ ‘ಶಕ್ತಿ’ಯ ಟ್ಯಾಗ್ಲೈನ್ ಆಗಿ ಕಂಗೊಳಿಸಿದ್ದು ಹೇಗೆ?
‘ಶಕ್ತಿ’ಯ ಸ್ಥಾಪಕರಾದ ದಿ. ಬಿ.ಎಸ್. ಗೋಪಾಲಕೃಷ್ಣ ಅವರನ್ನು ಕೆಲವು ವರ್ಷಗಳ ಹಿಂದೆ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಹೀಗೆ ಪ್ರಶ್ನಿಸಿದ್ದೆ.
ನಸುನಗುತ್ತಾ ಅವರು ಹೇಳಿದರು... ‘ಜನಸಾಮಾನ್ಯ ಒಂದು ಪತ್ರಿಕೆಯಿಂದ ಸುದ್ದಿಯನ್ನು ನಿರೀಕ್ಷಿಸುತ್ತಾನೆ. ಸತ್ಯವಾದ, ನಿಖರವಾದ ಸುದ್ದಿ ಜನರಿಗೆ ನೀಡಲು ಪತ್ರಿಕೆಗಳೇ ಮುಖ್ಯವಾಗಿರುತ್ತವೆ. ಆದರೆ, ನನ್ನ ಪ್ರಕಾರ ಜನರಿಗೆ ಸತ್ಯವಾದ ಸುದ್ದಿಗಳ ಜತೆಗೇ ನ್ಯಾಯಯುತವಾದ ಸುದ್ದಿ ಮತ್ತು ನ್ಯಾಯಯುತವಾದ ಸಮಾಜ ಕೂಡ ದೊರಕುವಲ್ಲಿ ಪತ್ರಿಕೆಗಳು ಪ್ರಧಾನ ಪಾತ್ರ ವಹಿಸಬೇಕಾಗುತ್ತದೆ. ಸುದ್ದಿಗಳನ್ನು ಎಲ್ಲಾ ಪತ್ರಿಕೆಗಳೂ ನೀಡುತ್ತವೆ. ಆದರೆ ಸಮಾಜದ ಜನರಿಗೆ ನ್ಯಾಯ ನೀಡುವಲ್ಲಿ ಪತ್ರಿಕೆಯೊಂದು ಮುಖ್ಯ ಪಾತ್ರ ವಹಿಸಿದ್ದೇ ಆದಲ್ಲಿ ಖಂಡಿತವಾಗಿಯೂ ಅಂಥ ಪತ್ರಿಕೆ ಜನರಿಗೆ ಹತ್ತಿರವಾಗುತ್ತದೆ. ನಿಜವಾಗಿಯೂ ಪತ್ರಿಕಾ ನೀತಿಯನ್ನು ಪರಿಪಾಲಿಸಿದಂತಾಗುತ್ತದೆ. ಶಕ್ತಿ - ಒಂದು ಪತ್ರಿಕೆಯಾಗಿ ಜನರಿಗೆ ನ್ಯಾಯ ನೀಡಬೇಕು. ಶಕ್ತಿ ನ್ಯಾಯಪಾಲನೆ ಜತೆಗೇ ನ್ಯಾಯದ ದರ್ಶನ ನೀಡಬೇಕೆಂಬ ಚಿಂತನೆ ನನ್ನದಾಗಿತ್ತು. ಹೀಗಾಗಿಯೇ ಶಕ್ತಿ ಮಾಸ್ಟ್ ಹೆಡ್ ಜತೆಗೇ ನ್ಯಾಯಪಾಲನೆ ನಮ್ಮ ಯುಕ್ತಿ, ನ್ಯಾಯದರ್ಶನ ನಮ್ಮ ಶಕ್ತಿ ಎಂಬ ಪದಗಳನ್ನು ಜೋಡಿಸಿದೆ’.
ಶಕ್ತಿ ಓದುಗರ ಪಾಲಿಗೆ ಸುದ್ದಿಯನ್ನಷ್ಟೇ ನೀಡುವ ಮಾಧ್ಯಮ ಆಗಿಲ್ಲ. ಆಗಬಾರದು. ಆಗುವುದಿಲ್ಲ ಎಂಬ ನಂಬಿಕೆ ನನಗಿದೆ. ಶಕ್ತಿ ಪತ್ರಿಕೆಯು ಜನರ ಧ್ವನಿಯಾಗಬೇಕು. ಸಮಾಜದಲ್ಲಿ ಅನ್ಯಾಯಗಳು ನಡೆದಾಗ ಧ್ವನಿ ಎತ್ತಲಾರದ ಜನತೆಯ ಧ್ವನಿಯಾಗಿ ‘ಶಕ್ತಿ’ ಕಾರ್ಯನಿರ್ವಹಿಸಬೇಕು. ಶಕ್ತಿ ಪತ್ರಿಕೆ ತನಗೆ ಸುದ್ದಿಯ ರೂಪದಲ್ಲಿ ನ್ಯಾಯ ನೀಡುತ್ತದೆ ಎಂಬ ನಂಬಿಕೆ ಜನರಲ್ಲಿ ಉಂಟಾಗಬೇಕು.
ಪತ್ರಿಕೆ ನಡೆಸುವುದು ಖಂಡಿತಾ ಸುಲಭವಲ್ಲ ಎಂದು ತಿಳಿದಿದೆ. ಪತ್ರಿಕೆ ನಡೆಸಲಾಗದೇ ಜೀವ ಕಳೆದುಕೊಳ್ಳುವ ಹಂತಕ್ಕೂ ನಾನು ಹೋಗಿದ್ದೆ. ಆದರೆ ಅದೃಶ್ಯ ಶಕ್ತಿ ನನ್ನನ್ನು ತಡೆದು ಮತ್ತೆ ಜೀವ ನೀಡಿದ್ದಾಯಿತು. ಹೀಗಾಗಿಯೇ ಮತ್ತೆ ಪ್ರಬಲವಾಗಿ ಶಕ್ತಿಯನ್ನು ಕಟ್ಟಿದೆ. ಮುಂದೆ ನನ್ನ ಮಕ್ಕಳು ಕೂಡ ನ್ಯಾಯಪರವಾಗಿ, ಜನರ ಧ್ವನಿಯಾಗಿ ಶಕ್ತಿಯನ್ನು ಮುನ್ನಡೆಸುತ್ತಾರೆ ಎಂಬ ನಂಬಿಕೆ ನನಗಿದೆ. ಯಾವಾಗ ಜನರ ವಿಶ್ವಾಸವನ್ನು ಶಕ್ತಿ ಸೇರಿದಂತೆ ಯಾವುದೇ ಪತ್ರಿಕೆ ಕಳೆದುಕೊಳ್ಳುತ್ತದೆಯೋ ಅಂದೇ ಅಂತಹ ಪತ್ರಿಕೆ ಜನರ ಪಾಲಿಗೆ ಅಂತ್ಯವಾಗುತ್ತದೆ.
ಈ ಎಚ್ಚರಿಕೆಯಿಂದಲೇ ಪತ್ರಿಕೆಯನ್ನು ಸದಾ ಮುಂದುವರೆಸಬೇಕು. ಪತ್ರಕರ್ತನಾದವನಿಗೆ ಸುದ್ದಿ ಎಂಬುದು ಒಂದು ದಿನಕ್ಕೆ ಸೀಮಿತವಲ್ಲ. ಪ್ರತೀ ನಿತ್ಯ ಯುದ್ಧ ಭೂಮಿಯಲ್ಲಿ ಹೋರಾಡುವಂತೆ ಪತ್ರಕರ್ತ ತನ್ನ ಪತ್ರಿಕೆಯನ್ನು ನ್ಯಾಯ, ನೀತಿ, ಸತ್ಯದ ಹೋರಾಟದಲ್ಲಿ ಗೆಲ್ಲಿಸಿಕೊಂಡು ಬರಬೇಕು. ಆಗಲೇ ಪತ್ರಿಕೆ ವಿಜಯಶಾಲಿಯಾಗುತ್ತದೆ. ಇದನ್ನು ಸಂದೇಶವಾಗಿಯಾದರೂ ತೆಗೆದುಕೊಳ್ಳಿ, ಎಚ್ಚರಿಕೆಯಾಗಿಯಾದರೂ ಗಮನಿಸಿ, ಆದರೆ ಪತ್ರಿಕೋದ್ಯಮದಲ್ಲಿ ಇಂದಿಗೂ ಎಂದೆAದಿಗೂ ಈ ವಾಕ್ಯವೇ ಧ್ಯೇಯವಾಗಿ ಉಳಿದುಕೊಳ್ಳುತ್ತದೆ.’
ಹೀಗೆಂದು.. ಪತ್ರಿಕೋದ್ಯಮದ ದಿಗ್ಗಜ ಉಸಿರೆಳೆದುಕೊಂಡರು. ಎದುರಿಗಿದ್ದ ನಾನು ಹೆಮ್ಮೆಯಿಂದ ನಿಟ್ಟುಸಿರು ಬಿಟ್ಟಿದ್ದೆ. ಎಂತಹ ಅದ್ಭುತ ವಾಕ್ಯಗಳಿವು.!
ಬಿ.ಎಸ್. ಗೋಪಾಲಕೃಷ್ಣ ಅವರು ಪ್ರಾರಂಭಿಸಿದ ‘ಶಕ್ತಿ’ಗೆ ೬೭ ವರ್ಷಗಳಾಯಿತು ಎನ್ನುವುದೇ ಸಂಭ್ರಮದ ವಿಚಾರ. ಸಂಯುಕ್ತ ಕರ್ನಾಟಕದಂತಹ ಹೆಸರಾಂತ ಪತ್ರಿಕೆಗೆ ಸಂಪಾದಕರಾಗಿ, ರಾಜಕಾರಣಿಗಳ ಒತ್ತಾಯಕ್ಕೆ ಮಣಿಯದೇ ಅಲ್ಲಿಂದ ಹೊರಬಂದು ‘ಶಕ್ತಿ’ ಎಂಬ ರಾಜ್ಯಮಟ್ಟದ ವಾರಪತ್ರಿಕೆಯನ್ನು ಪ್ರಾರಂಭಿಸುವ ವಿನೂತನ ಪ್ರಯತ್ನಕ್ಕೆ ಕಾರಣರಾಗಿದ್ದ ಗೋಪಾಲಕೃಷ್ಣರ ಪತ್ರಿಕೋದ್ಯಮವೇ ಪಿಎಚ್ಡಿಗೆ ಹೇಳಿ ಮಾಡಿಸಿದ ವಸ್ತುವಾಗಬಲ್ಲದು. ಯಾವುದೇ ಮೂಲಸೌಕರ್ಯಗಳಿಲ್ಲದ ಕಾಲದಲ್ಲಿ, ಸಾಮಾಜಿಕ ಜಾಲತಾಣಗಳ ಕಲ್ಪನೆಯೇ ಇಲ್ಲದ ದಿನಗಳಲ್ಲಿ ಟೆಲಿಫೋನ್ಗಿಂತ ಟೆಲಿಗ್ರಾಮ್ಗಳನ್ನು, ವಾಟ್ಸಾö್ಯಪ್ಗಳಿಗಿಂತ ಪೋಸ್ಟ್ ಕಾರ್ಡ್ಗಳೇ ಪ್ರಚಲಿತದಲ್ಲಿದ್ದ ಕಾಲದಲ್ಲಿ, ಟಿವಿ ಮಾಧ್ಯಮ ಪ್ರಭಾವಿಯಾಗಿಲ್ಲದ ಸಂದರ್ಭ ಪತ್ರಿಕೆಗಳೇ ಜನರಿಗೆ ಸುದ್ದಿಗೆ ಆಧಾರವಾಗಿದ್ದ ಸಂದರ್ಭ ಕೊಡಗಿನಂತಹ ಮಲೆನಾಡಿನ ಗಿರಿಕಂದರಗಳ ಜಿಲ್ಲೆಯಲ್ಲಿ ಅತ್ಯಂತ ಸಾಹಸಪಟ್ಟು, ಅನೇಕ ಸವಾಲುಗಳನ್ನು ಎದುರಿಸಿ, ಬೆದರಿಕೆಗಳಿಗೆ ಜಗ್ಗದೇ, ಆರ್ಥಿಕ ಸಂಕಷ್ಟಗಳ ನಡುವೇ ಶಕ್ತಿಯುತವಾಗಿ ಶಕ್ತಿಯನ್ನು ಗೋಪಾಲಕೃಷ್ಣ ಬೆಳೆಸಿದ್ದರು. ಎಂಥಹದ್ದೇ ಒತ್ತಡಗಳಿರಲಿ, ಸುದ್ದಿ ವಿಚಾರದಲ್ಲಿ ‘ಶಕ್ತಿ’ ಅಂದು ಮತ್ತು ಇಂದು ‘ಕಾಂಪ್ರಮೈಸ್’ ಮಾಡಿಕೊಂಡದ್ದೇ ಇಲ್ಲ. ಹೀಗಾಗಿಯೇ ಇಂದಿಗೂ ಅಂದಿನAತೆ ‘ಶಕ್ತಿ’ ಕೊಡಗಿನ ಜನತೆಯ ಪಾಲಿನ ಧ್ವನಿಯಾಗಿದೆ. ಶಕ್ತಿಯುತ ಸುದ್ದಿ ಮಾಧ್ಯಮವಾಗಿದೆ.
ಕಾಸಿಗಾಗಿ ಸುದ್ದಿ ಇಂದು ಕನ್ನಡ ಸೇರಿದಂತೆ ಭಾರತದಾದ್ಯಂತ ರಾಜಕಾರಣಿಗಳ ಕಬಂಧಬಾಹುಗಳನ್ನು ಚಾಚಿ, ರಾಜಕಾರಣಿಗಳ ಕೈಗೊಂಬೆಯಾಗುತ್ತಿರುವಾಗ, ಯಾವುದು ಸುದ್ದಿ, ಯಾವುದು ಜಾಹೀರಾತು ಎಂಬ ಗೊಂದಲವೇ ಅನೇಕ ಪತ್ರಿಕೆಗಳನ್ನು ಓದುವ ಸಂದರ್ಭ ಕಾಡುತ್ತಿರುವಾಗ ಕೊಡಗಿನ ‘ಶಕ್ತಿ’ ಮಾತ್ರ ನೈಜ ಸುದ್ದಿ, ವಾಸ್ತವಾಂಶಗಳನ್ನೇ ಓದುಗರ ಮುಂದಿಡುತ್ತಾ ಬಂದಿದೆ. ಯಾವುದೇ ಪ್ರಲೋಭಗಳಿಗೆ ಶಕ್ತಿ ಮಣಿದಿಲ್ಲ ಎನ್ನುವುದೇ ಕೊಡಗಿನ ಜನತೆಯ ಪಾಲಿಗೆ ಹರ್ಷದಾಯಕ ವಿಚಾರ.
ಶಕ್ತಿ ಪತ್ರಿಕೆಯ ಓದುಗರು ನಾವಾಗಿದ್ದೇವೆ ಎಂಬುದೇ ಜನತೆಯ ಪಾಲಿಗೆ ಹೆಮ್ಮೆ, ಪ್ರತಿಷ್ಠೆಯಾಗಿರುವುದು ಕಣ್ಣೆದುರಿನ ಸತ್ಯ.
ಒಂದು ಪತ್ರಿಕೆಯನ್ನು ರೂಪಿಸುವುಲ್ಲಿ ಸಂಪಾದಕರ ಜತೆ ನಾನಾ ರೀತಿಯಲ್ಲಿ ಕಾಣದ ಕೈಗಳು ಕೆಲಸ ಮಾಡಿರುತ್ತವೆ. ‘ಶಕ್ತಿ’ಯನ್ನು ಜನಪ್ರಿಯಗೊಳಿಸಿದ್ದ ದಿ. ಜಿ. ಯದುಮಣಿ, ದಿ. ಸಂಧ್ಯಾಪ್ರಕಾಶ್ ಇಂದು ಸ್ಮರಣೀಯರಾಗಿದ್ದಾರೆ.
‘ಶಕ್ತಿ’ಯ ಶಕ್ತಿಯಾಗಿ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ, ಸಂಪಾದಕರಾಗಿ ಜಿ. ಚಿದ್ವಿಲಾಸ್, ಸಲಹಾ ಸಂಪಾದಕರಾಗಿ ಅನಂತಶಯನ ಕಂಗೊಳಿಸಿದ್ದಾರೆ. ಇವರೊಂದಿಗೆ ‘ಶಕ್ತಿ’ಯನ್ನು ದಿನನಿತ್ಯ ತಾಜಾತನದಿಂದ ರೂಪಿಸುವಲ್ಲಿ ಶಕ್ತಿಯ ಸಂಪಾದಕೀಯ ಬಳಗ, ಸಹಾಯಕ ಸಂಪಾದಕರು, ಉಪಸಂಪಾದಕರು, ವರದಿಗಾರರು, ಸುದ್ದಿ ಸಂಗ್ರಾಹಕರು, ಬರಹಗಾರರು, ಅಂಕಣಕಾರರು, ಆಹ್ವಾನಿತ ಲೇಖಕರು, ಪುಟ ವಿನ್ಯಾಸಕರು, ವ್ಯವಸ್ಥಾಪಕರು, ಆಡಳಿತ ವಿಭಾಗದ ಸಿಬ್ಬಂದಿಗಳು, ಪ್ರಸಾರ, ಜಾಹೀರಾತು ವಿಭಾಗದ ಸಿಬ್ಬಂದಿಗಳು, ಪತ್ರಿಕೆಯ ಮುದ್ರಣ ವಿಭಾಗದಲ್ಲಿನ ಸಿಬ್ಬಂದಿಗಳು, ಪತ್ರಿಕೆಯನ್ನು ಬೆಳಕು ಹರಿಯುವ ಮುನ್ನವೇ ಜಿಲ್ಲೆಯಾದ್ಯಂತಲಿನ ವಿತರಕರಿಗೆ ತಲುಪಿಸುವ ವಾಹನ ಚಾಲಕರು, ಬಸ್ ಚಾಲಕರು, ನಿರ್ವಾಹಕರು, ಪತ್ರಿಕಾ ವಿತರಕರು.. ಹೀಗೆ ನೂರಾರು ಮಂದಿಯ ಪ್ರಯತ್ನದಿಂದಲೇ ‘ಶಕ್ತಿ’ ಕೊಡಗಿನಲ್ಲಿ ಶಕ್ತಿಯುತ ಪತ್ರಿಕಾ ಮಾಧ್ಯಮವಾಗಿ ಮುಂದುವರೆದಿದೆ. ಎಲ್ಲಕ್ಕಿಂತ ಮುಖ್ಯವಾಗಿ ‘ಶಕ್ತಿ’ಯನ್ನು ತಮ್ಮದೇ ಪತ್ರಿಕೆ ಎಂಬAತೆ ಒಪ್ಪಿಕೊಂಡಿರುವ, ಅಪ್ಪಿಕೊಂಡಿರುವ ಸಹಸ್ರಾರು ಓದುಗರಿಂದಾಗಿಯೇ ‘ಶಕ್ತಿ’ ಅಂದು, ಇಂದೂ ಶಕ್ತಿಯುತವಾಗಿ ಸಾಗಿದೆ. ಜಾಹೀರಾತುದಾರರೂ ‘ಶಕ್ತಿ’ಯ ಶಕ್ತಿಯಾಗಿ ಬೆಂಬಲಿಸುತ್ತಿದ್ದಾರೆ.
‘ಶಕ್ತಿ’ಗೆ ೬೭ನೇ ವರ್ಷವಾಗುತ್ತಿರುವ ಸಂದರ್ಭ ಈ ಎಲ್ಲರಿಗೂ ಓದುಗನಾದ ನನ್ನ ಹೃದಯಪೂರ್ವಕ ಅಭಿನಂದನೆಗಳು ಸಲ್ಲುತ್ತವೆ.
ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ‘ಶಕ್ತಿ’ಯ ಕೊಡುಗೆ ಅವಿಸ್ಮರಣೀಯ. ವಿಶೇಷ ಲೇಖನಗಳು, ವಿವಿಧ ಅಂಕಣ ಬರಹಗಳು ‘ಶಕ್ತಿ’ಯ ವಿಶೇಷ ಆಕರ್ಷಣೆ, ಪ್ರತೀ ನಿತ್ಯ ಶಕ್ತಿಯ ೨ನೇ ಪುಟ ವಿಶೇಷತೆಗಳಿಂದ ಗಮನ ಸೆಳೆಯುತ್ತಿರುತ್ತದೆ. ಕೊಡಗಿನ ಸಾಹಿತ್ಯ ಲೋಕಕ್ಕೆ ‘ಶಕಿ’್ತ ಮೂಲಕ ನೂರಾರು ಲೇಖಕರು ಪರಿಚಿತಗೊಂಡಿದ್ದಾರೆ. ಸಾಹಿತ್ಯ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೋದಾಗ ‘ಶಕ್ತಿ’ಯ ಲೇಖಕ, ಲೇಖಕಿಯರು, ಸಾಹಿತಿಗಳು, ಕವಿಗಳು, ಕಥೆಗಾರರು, ಹಾಡುಗಾರರು ‘ಶಕ್ತಿ’ ಮೂಲಕ ತಾವು ಸಾಂಸ್ಕೃತಿಕಲೋಕಕ್ಕೆ ಪರಿಚಿತರಾದೆವು ಎಂದು ಹೆಮ್ಮೆಯಿಂದ ಹೇಳುತ್ತಾರೆ. ಹೀಗಾಗಿ ಆಧುನಿಕ ದಿನಮಾನಗಳಲ್ಲಿ ಸಂಸ್ಕೃತಿ, ಸಂಪ್ರದಾಯಗಳು ನಶಿಸಿಹೋಗುತ್ತಿವೆ, ಅಪಾಯದಲ್ಲಿವೆ ಎಂಬ ಆತಂಕದ ಕೂಗಿರುವಾಗಲೇ ಕೊಡಗಿನಲ್ಲಿ ಮಾತ್ರ ಈ ಸಮಸ್ಯೆ ಬಾರದಂತೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಶಕ್ತಿ, ಸಾಂಸ್ಕೃತಿಕ, ಸಾಹಿತ್ಯ ಲೋಕವನ್ನು ಉತ್ತೇಜಿಸುತ್ತಾ ಅವುಗಳಿಗೆ ಶಕ್ತಿ ತುಂಬಿದೆ. ವಿಶೇಷವಾಗಿ ಇಂದಿನ ಮಕ್ಕಳು ಪತ್ರಿಕೆಗಳನ್ನು ಓದುತ್ತಿಲ್ಲ. ಮೊಬೈಲ್ನಲ್ಲಿಯೇ ಕಳೆದುಹೋಗುತ್ತಿದ್ದಾರೆ ಎಂಬ ದೂರಿನ ದಿನಗಳಲ್ಲಿ, ಮಕ್ಕಳನ್ನು ಓದಿಗೆ ಪ್ರೇರಿಪಿಸುವಂತೆ ಪುಟಾಣಿಗಳಲ್ಲಿ ಇರುವ ಸಾಹಿತ್ಯ, ಕಲೆಯ ಅಭಿರುಚಿ ಪ್ರೋತ್ಸಾಹಿಸಲು ಮಕ್ಕಳಿಗಾಗಿ ಆಗಿಂದಾಗ್ಗೆ ವಿವಿಧ ವಿಚಾರಗಳನ್ನು ನೀಡಿ ಬರಹಗಾರರನ್ನಾಗಿ, ಕಲಾವಿದರನ್ನಾಗಿ ರೂಪಿಸುತ್ತಿರುವ ಕಾರ್ಯವೂ ‘ಶಕ್ತಿ’ಯಿಂದ ನಡೆದಿದೆ.
ಸಮಾಜಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡಲು ಶಕ್ತಿ ಪ್ರತಿಷ್ಠಾನ ರೂಪಿಸಿದ್ದು ಕೂಡ ‘ಶಕ್ತಿ’ ಎಂಬ ಪತ್ರಿಕೆಯ ಸಾಮಾಜಿಕ ಹೊಣೆಗಾರಿಕೆಗೆ ಸಾಕ್ಷಿಯಾಗಿದೆ. ಈ ಎಲ್ಲಾ ಹಿರಿಮೆಗಳಿಂದಾಗಿಯೇ ಇಂದು ಯಾವುದೇ ಪತ್ರಿಕಾ ವಿತರಣಾ ಅಂಗಡಿಗಳಲ್ಲಿ ಜನರಿಂದ ಕೇಳಿಬರುವ ಬೇಡಿಕೆಯ ಮೊದಲ ಪದವೇ..
ನಂಗೊAದು ಶಕ್ತಿ ಪೇಪರ್ ಕೊಡಿ...!
? ಅನಿಲ್ ಎಚ್.ಟಿ., ಪತ್ರಕರ್ತ