ಪ್ರಿಯ ಓದುಗ ಬಂಧು,

ಕೊರೊನಾ ಹೋಗಿ ದಶಕಗಳೇನು ಕಳೆದಿಲ್ಲ. ಆ ಅವಧಿಯ ಮಾನಸಿಕ ಹಾಗೂ ದೈಹಿಕ ಹಿಂಸೆ, ವ್ಯಾಪಾರ ವಹಿವಾಟಿನ ನಷ್ಟ, ಆತಂಕ ಮತ್ತು ಅಭದ್ರತೆಯ ಭಯ, ಸಾವು ನೋವಿನ ಭೀಕರತೆಗಳ ಹಸಿ ಚಿತ್ರಣ ಇನ್ನೂ ಎಲ್ಲರ ಮನಸ್ಸುಗಳಿಂದ ಮಾಸಿಹೋಗಿಲ್ಲ.

ದೂರ ಸರಿದಿರುವುದು ಒಂದೇ..

ಅದು ಆ ಸಂದರ್ಭದಲ್ಲಿ ನಿತ್ಯ ನಾವುಗಳೆಲ್ಲ ಮಾತನಾಡುತ್ತಿದ್ದ ಒಂದೇ ಒಂದು ವಿಷಯವಷ್ಟೇ. "ಛೆ..ಜೀವನ ಅಂದರೆ ಇಷ್ಟೇ ಅಲ್ಲವೇ.. ಸುಮ್ಮನೆ ದ್ವೇಷ ಅಸೂಯೆಗಳಲ್ಲಿ ಬದುಕು ಸವೆಸುವ ಬದಲು ಪ್ರೀತಿಯಿಂದ ಬಾಳಿ ತೆರಳೋಣ" ಎನ್ನುತ್ತಿದ್ದ ಆದರ್ಶಪ್ರಾಯವಾದ ಚಿಂತನೆ ಮಾತ್ರ.

ಸಾವು ಮತ್ತು ಹೆರಿಗೆ ನೋವಿನ ಸಂದರ್ಭಗಳಲ್ಲೂ ಇಂತಹದ್ದೇ ಭಾವನೆಗಳನ್ನು ಎಲ್ಲರೂ ಹೊರಗೆಡವುತ್ತಾರೆ.

ಇಡೀ ದೇಶದಲ್ಲಿ ಕೊರೊನಾ ಬಳಿಕ ಜನರ ಮಾನಸಿಕ ಸ್ಥಿತಿಯಲ್ಲಿ, ಬದುಕಿನ ರೀತಿಯಲ್ಲಿ, ಪರಸ್ಪರ ಒಡನಾಟದಲ್ಲಿ, ಸಾಮಾಜಿಕ ಪರಿಸರದಲ್ಲಿ ಭಾರಿ ಬದಲಾವಣೆಗಳು ಆಗಬಹುದು ಎಂಬ ನಿರೀಕ್ಷೆಯಲ್ಲಿ ಪ್ರತಿಯೊಬ್ಬರೂ ಇದ್ದೆವು. ಆದರೆ ಯಾರ ಮನಸ್ಥಿತಿಗಳೂ ಬದಲಾಗಿಲ್ಲ.

ಒಂದೇ ರಕ್ತ, ಒಂದೇ ನೀರು, ಒಂದೇ ಗಾಳಿ ಸೇವಿಸುವ ನಮ್ಮಲ್ಲಿ ಜಾತೀಯತೆ ಯಾವುದೂ ದೂರವಾಗಿಲ್ಲ. ಧರ್ಮಾಂಧ ದುರುಳರ ಹೃದಯದ ಆಳದಲ್ಲಿ ಹುದುಗಿರುವ ದ್ವೇಷಕ್ಕೆ ಏನೂ ಕಡಿವಾಣ ಬಿದ್ದಿಲ್ಲ. ಸತ್ತ ಮೇಲೆ ಏನಿದೆ? ಎಂದು ಅಧ್ಯಾತ್ಮ ಬೋಧಿಸುವ ನಾಟಕ ಆಡುತ್ತಿದ್ದವನಿಗೆ ಜನರ ರಕ್ತ ಹೀರಿಯೂ ಸಂಪಾದಿಸುವ ಆಸೆಗೇನೂ ಕುಂದು ಬಂದಿಲ್ಲ. ಆಸ್ತಿಗಾಗಿ ರಕ್ತ ಸಂಬAಧಿಯನ್ನೇ ಕೊಚ್ಚಿಕೊಲ್ಲುವ ಕ್ರೌರ್ಯವೇನೂ ಕಡಿಮೆಯಾಗಿಲ್ಲ. ಅನಿಷ್ಟ ಪದ್ಧತಿಗಳಿಂದ ಇತರರಿಗೆ ನೋವಾಗಬಾರದು ಎನ್ನುವ ಚಿಂತನೆ ಏನೂ ಕಂಡುಬAದಿಲ್ಲ.

ಯಾವ ಶತಮಾನದಲ್ಲಿ ಇದ್ದೇವೆ ನಾವು ಎಂಬುದನ್ನು ಒಮ್ಮೆ ಮೆಲುಕು ಹಾಕಿಕೊಳ್ಳೋಣ.

ಜಾತಿಯಲ್ಲಿ ಕೆಳವರ್ಗದವ ಎನ್ನುವ ಕಾರಣಕ್ಕೆ ಇನ್ನೂ ದೇವಾಲಯ ಪ್ರವೇಶ ನಿರಾಕರಿಸುತ್ತಿದ್ದೇವಲ್ಲ? ಬಾವಿಯ ನೀರಿಗೆ ನಿರ್ಬಂಧ ಹೇರುತ್ತಿದ್ದೇವಲ್ಲ? ನಮ್ಮ ವಠಾರಕ್ಕೆ ಬಂದ ಎಂಬ ಕಾರಣಕ್ಕೆ ಆ ಜಾಗವನ್ನು ಶುದ್ಧ ಮಾಡುತ್ತಿದ್ದೇವಲ್ಲ? ಬಡತನದಲ್ಲಿರುವವನನ್ನು ಜರಿಯುವ, ಶ್ರೀಮಂತನನ್ನು ಓಲೈಸುವ ಜಾಯಮಾನ ಇನ್ನೂ ಕಡಿಮೆಯಾಗಿಲ್ಲವಲ್ಲ? ದೇಶ ಒಪ್ಪಿಕೊಂಡ, ಸಮಾಜ ಪೂಜಿಸಬೇಕಾದ, ಗೌರವಿಸಬೇಕಾದ ವ್ಯಕ್ತಿಗಳು ಇಂದು ಆಯಾ ಜಾತಿಗೆ ಸೀಮಿತವಾಗಿ ಬಿಟ್ಟಿದ್ದಾರಲ್ಲ? ಚುನಾವಣೆ ಬಂದಾಗ ನಮ್ಮ ಜಾತಿಯವನಿಗೆ ಸೀಟು ಕೊಡಿ ಎಂದು ರಸ್ತೆಯಲ್ಲೇ ಪ್ರತಿಭಟನೆ ಮಾಡುತ್ತಿದ್ದೇವಲ್ಲ? ಚುನಾವಣೆ ಆದ ಮೇಲೆ ನಮ್ಮ ಜಾತಿಯವನಿಗೆ ಸ್ಥಾನಮಾನ ನೀಡಿ ಎಂದು ಒತ್ತಾಯಿಸಿ ಯಾವ ಜಾತಿಯವನಿಗೆ ಎಷ್ಟು ಸ್ಥಾನ ಎಂದು ಚರ್ಚೆ ಆರಂಭಿಸುತ್ತೇವಲ್ಲ?

ಛೆ, ಕೊರೊನಾ ಇನ್ನೂ ಯಾಕೆ ಯಾರಿಗೂ ಪಾಠ ಕಲಿಸಲಿಲ್ಲ?

ಕಷ್ಟಕಾಲದಲ್ಲಿ ಯಾವ ಧರ್ಮದವರು ಎನ್ನುವ ಬೇಧ ಭಾವ ಇಲ್ಲದೆ ನೆರವು ಸ್ವೀಕರಿಸಿದೆವಲ್ಲ? ಇಂದು ಮತ್ತೆ ಅದೇ ಹಿಂದಿನ ವೈಷಮ್ಯವನ್ನು ಮೆರೆಯುತ್ತಿದ್ದೆವಲ್ಲ? ಯಾವ ಕ್ಷಣದಲ್ಲಿ ಎಲ್ಲಿ ಧರ್ಮಾಂಧ ದುರುಳರು ಏನು ಮಾಡುತ್ತಾರೋ ಎನ್ನುವ ಆತಂಕದಲ್ಲಿ ಬದುಕುತ್ತಿದ್ದೇವಲ್ಲ? ಬಣ್ಣ ಬಣ್ಣದ ಧ್ವಜಕ್ಕಾಗಿ ಎಲ್ಲರ ಮನಗಳು ಬೆಂಕಿ ಉಂಡೆಗಳಾಗಿ, ಊರೆಲ್ಲಾ ಬೆಂಕಿಯಾಗಿ, ಮತ್ತೊಬ್ಬರನ್ನು ವಿಶ್ವಾಸದಿಂದ ನೋಡದ ಪರಿಸ್ಥಿತಿ ಮುಂದುವರಿದಿದೆಯಲ್ಲ?

ಇಲ್ಲಿಯ ಮಣ್ಣಲ್ಲಿ ಹುಟ್ಟಿ, ಇಲ್ಲಿಯೇ ಮಣ್ಣಾಗುವ ಜೀವಗಳು ಇದೇ ಮಣ್ಣಿನ ವಿರೋಧಿಗಳಾಗಿ ಪರಿವರ್ತನೆಗೊಂಡಿವೆಯಲ್ಲ?

ಛೆ, ಕೊರೊನಾ ಇನ್ನೂ ಯಾಕೆ ಯಾರಿಗೂ ಪಾಠ ಕಲಿಸಲಿಲ್ಲ?

ಮಗು ಗಲಾಟೆ ಮಾಡುತ್ತಿದೆ ಎಂದು ಮಗುವನ್ನೇ ನೆಲಕ್ಕೆ ಬಡಿದು ದುರುಳನೊಬ್ಬ ಕೊಲ್ಲುತ್ತಾನಲ್ಲ? ತವರು ಮನೆಯ ಆಸ್ತಿ ತರಲಿಲ್ಲವೆಂದು ಹೆಂಡತಿಯನ್ನೇ ಕೊಚ್ಚಿ ಹಾಕುತ್ತಾನಲ್ಲ? ಹೆಂಡ ನೀಡದ ಮಗನಿಗೆ ಗುಂಡು ಹಾರಿಸಿ ಹತ್ಯೆ ಮಾಡುತ್ತಾನಲ್ಲ? ಜ್ಯೋತಿಷಿಯ ಮಾತು ಕೇಳಿ ನಿಧಿಗಾಗಿ ಕಂದಮ್ಮಗಳನ್ನೇ ಬಲಿ ನೀಡುತ್ತಿದ್ದಾರಲ್ಲ? ಸರಣಿ ಸ್ಫೋಟ ನಡೆಸಿ ಅಮಾಯಕರ ಜೀವದ ರಕ್ತದೋಕುಳಿಯಲ್ಲಿ ಮಿಂದು ಸಂತೋಷ ಪಡುತ್ತಿದ್ದಾರಲ್ಲ? ಬದುಕನ್ನು ಒತ್ತೆಗಿಟ್ಟು, ಉಸಿರನ್ನು ಒತ್ತಿ ಹಿಡಿದು ನಮ್ಮನ್ನು ರಕ್ಷಿಸುತ್ತಿರುವ ಸಹೋದರರ ಉಸಿರನ್ನೇ ಕಸಿದುಕೊಳ್ಳುತ್ತಿದ್ದಾರಲ್ಲ? ಮದ್ಯದ ಅಮಲಿನಲ್ಲಿ ವಾಹನ ಚಾಲಿಸಿ ಮುಗ್ಧ ಜೀವಿಗಳ ಸಾವಿಗೆ ಕಾರಣರಾಗುತ್ತಿದ್ದಾರಲ್ಲ? ಭವಿಷ್ಯದ ಕನಸನ್ನು ಹೊತ್ತ ಪುಟ್ಟ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಹಿಂಸಿಸುತ್ತಿದ್ದಾರಲ್ಲ?

ಛೆ, ಕೊರೊನಾ ಇನ್ನೂ ಯಾಕೆ ಯಾರಿಗೂ ಪಾಠ ಕಲಿಸಲಿಲ್ಲ?

ಧಾರ್ಮಿಕ ಶ್ರದ್ಧಾ ಕೇಂದ್ರಗಳು ಭಯೋತ್ಪಾದನೆಯನ್ನು ಬೋಧಿಸುತ್ತಿವೆಯಲ್ಲ? ಹದಿಹರೆಯದ ಮನಸ್ಸುಗಳಲ್ಲಿ ಭ್ರಾತೃತ್ವದ ನೆಲೆಗಿಂತ ದ್ವೇಷದ ಬೀಜಗಳೇ ಚಿಗುರೊಡೆಯುತ್ತಿವೆಯಲ್ಲ? ದೇಶದ ಮುಂದಿನ ಪ್ರಜೆಗಳು ಎನ್ನುವ ಕುಡಿಗಳು ಮಾದಕ ವ್ಯಸನಿಗಳಾಗಿ ಮಾರ್ಪಾಡಾಗುತ್ತಿವೆಯಲ್ಲ? ತಲೆಗೆ ಧರಿಸುವ ವಸ್ತçಕ್ಕೂ, ಕುತ್ತಿಗೆಗೆ ಬಳಸುವ ವಸ್ತçಕ್ಕೂ ಹಾದಿ ಬೀದಿಗಳಲ್ಲಿ ಜಗಳವಾಗುತ್ತಿದೆಯಲ್ಲ? ಆಯಾ ಧರ್ಮಗಳ ಆಳವಾದ ಸಂದೇಶವನ್ನು ಅರಿಯುವ ಬದಲು ಸಂಘರ್ಷದ ದಾರಿ ತುಳಿಯುತ್ತಿದ್ದೇವಲ್ಲ? ಹೆತ್ತು ಹೊತ್ತು ಸಲಹಿದ ಪೋಷಕರ ನಗುವಿನ ಪಾಲುದಾರರಾಗಬೇಕಾದವರು ಅವರ ನೋವಿಗೆ ಕಾರಣರಾಗುತ್ತಿದ್ದಾರಲ್ಲ? ಒಂದಾಗಿ ಬಾಳಬೇಕಾದ ಯುವ ದಂಪತಿಗಳು ಕ್ಷುಲ್ಲಕ ಕಾರಣಕ್ಕೆ ಬೇರಾಗಿ ಬದುಕುತ್ತಿದ್ದಾರಲ್ಲ? ಸುಖೀ ಮನೆಯಲ್ಲಿ ಸಂಭ್ರಮಿಸಬೇಕಾದ ಮನಗಳು ಕಾದಾಟದ ಕೇಂದ್ರಗಳಾಗಿ, ಮಕ್ಕಳ ಮನಸ್ಸುಗಳಲ್ಲಿ ವೈವಾಹಿಕ ಬದುಕಿನ ಬಗ್ಗೆ ತಾತ್ಸಾರದ ಮನೋಭಾವವನ್ನು ಸೃಷ್ಟಿಸುತ್ತಿವೆಯಲ್ಲ?

ಛೆ.. ಕೊರೊನಾ ಇಂತಹವರಿಗೆ ಏಕೆ ಪಾಠ ಕಲಿಸಲಿಲ್ಲ?

ಜನರ ಸೇವೆ ಮಾಡಲು ಅವಕಾಶ ನೀಡಿ ಎಂದು ಗೋಗರೆದು ಬರುವ ರಾಜಕಾರಣಿಗಳು ಭಂಡರAತೆಯೇ ಇದ್ದಾರಲ್ಲ? ಮಕ್ಕಳು, ಮರಿ ಮಕ್ಕಳು, ಅಳಿಯಂದಿರು, ಹೆಂಡತಿಗೆ ಚುನಾವಣೆಯಲ್ಲಿ ಅವಕಾಶ ನೀಡದಿದ್ದರೆ ಬೇರೆ ಪಕ್ಷಕ್ಕೆ ಹೋಗುತ್ತೇವೆಂದು ಲಜ್ಜೆ ಇಲ್ಲದವರಂತೆ ವರ್ತಿಸುತ್ತಿದ್ದಾರಲ್ಲ? ಜನರ ಸೇವೆಗೆ ಶಾಸಕನಾದರೆ ಸಾಲದು, ಮಂತ್ರಿ ಸ್ಥಾನ ಬೇಕು ಎಂದು, ಹಲವು ಜಾತಿ ಧರ್ಮದ ಸ್ವಾಮೀಜಿಗಳ ಕಾಲಿಗೆ ಬಿದ್ದು ಶಿಫಾರಸ್ಸು ಮಾಡಿಸುತ್ತಿದ್ದಾರಲ್ಲ? ಸ್ವಾಮೀಜಿಗಳು ತಮ್ಮ ಸ್ಥಾನದ ಗೌರವವನ್ನು ನೀರು ಪಾಲು ಮಾಡಿ ತನ್ನ ಜಾತಿಯವರಿಗೆ ಅವಕಾಶಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರಲ್ಲ? ಜಾತಿ ವ್ಯವಸ್ಥೆ ದೂರವಾಗಬೇಕಾದ ಈ ಕಾಲಘಟ್ಟದಲ್ಲೂ ಜಾತಿ ಜಾತಿಗಳನ್ನು ಅಳೆದು ತೂಕ ಹಾಕಿ ಸ್ಥಾನಮಾನಗಳನ್ನು ನೀಡಲಾಗುತ್ತಿದೆಯಲ್ಲ?

ಛೆ.. ಕೊರೊನಾ ಇಂತಹವರಿಗೆ ಏಕೆ ಪಾಠ ಕಲಿಸಲಿಲ್ಲ?

ಓದುಗ ಬಂಧು...

ಭಾವನೆಗಳ ಅಕ್ಷರರೂಪಕ್ಕೆ ಅಂತ್ಯವಿಲ್ಲ. ಬರಹಕ್ಕೆ ವಿರಾಮ ನೀಡುವ ಮುನ್ನ ಪ್ರಾರ್ಥನೆ ಇಷ್ಟೆ...

ಹಿಂದೆ ಕೊರೊನಾ ಆವರಿಸಿಕೊಂಡಿದ್ದಾಗ, ನೋವುಂಡಾಗ, ಆರ್ಥಿಕವಾಗಿ - ಮಾನಸಿಕವಾಗಿ- ಸಾಮಾಜಿಕವಾಗಿ ಬಳಲಿಹೋದಾಗ ನಮ್ಮೆಲ್ಲರ ಮನಸ್ಸುಗಳಲ್ಲಿ ಆಗಾಗ್ಗೆ ಮೂಡುತ್ತಿದ್ದ ಭಾವನೆ ಇತ್ತಲ್ಲ...

"ಛೆ ಜೀವನ ಇಷ್ಟೇ..ಇರುವಷ್ಟು ದಿನ ಸರಳ ಸಜ್ಜನಿಕೆಯಿಂದ, ಪ್ರೀತಿ ನಂಬಿಕೆಯಿAದ ಬಾಳೋಣ." ಇದು ಎಲ್ಲರ ಬದುಕಿನಲ್ಲಿ ಪ್ರಾಯೋಗಿಕವಾಗಿ ಮೂಡಿಬರಲಿ.

ಇಂದು ‘ಶಕ್ತಿ’ಯ ೬೭ನೇ ಹುಟ್ಟುಹಬ್ಬ. ‘ಶಕ್ತಿ’ಯ ಎಲ್ಲ ಶ್ರೇಯಸ್ಸು ಓದುಗರಿಗೆ, ಚಂದಾದಾರರಿಗೆ, ಜಾಹೀರಾತುದಾರರಿಗೆ, ವರದಿಗಾರರಿಗೆ, ಬರಹಗಾರರಿಗೆ, ಸುದ್ದಿ ಒದಗಿಸುವ ಸಹೃದಯರಿಗೆ, ತಾಂತ್ರಿಕವಾಗಿ ಎಲ್ಲಾ ಸಂದರ್ಭಗಳಲ್ಲೂ ನೆರವು ನೀಡುತ್ತಿರುವ ಸ್ನೇಹಿತರಿಗೆ, ಸಿಬ್ಬಂದಿ ವರ್ಗಕ್ಕೆ, ಅಭಿಮಾನಿ ಏಜೆಂಟರಿಗೆ ಸಲ್ಲುತ್ತದೆ.

‘‘ಸರ್ವೇ ಜನಾಃ ಸುಖಿನೋ ಭವಂತು’’

-ಜಿ. ಚಿದ್ವಿಲಾಸ್

ಸಂಪಾದಕ