ಮಡಿಕೇರಿ, ಮಾ. ೧ : ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರ ಮೇಲೆ ಕಾಂಗ್ರೆಸ್ಸಿಗರು ಆಗಾಗ್ಗೆ ಮುನಿಸಿಕೊಳ್ಳುತ್ತಿರುವದು ಕಂಡು ಬರುತ್ತಿದೆ. ಪಕ್ಷದ ಹಿರಿಯ ಕಾರ್ಯ ಕರ್ತರನ್ನು ಕಡೆಗಣಿಸ ಲಾಗುತ್ತಿದೆ ಎಂಬ ಅಸಮಾಧಾನ ದೊಂದಿಗೆ ಇತ್ತೀಚೆಗಷ್ಟೇ ಕಾಂಗ್ರೆಸ್ ಕಾರ್ಯಕರ್ತರು ಸಭೆ ನಡೆಸಿ ಅಸಮಾಧಾನ ಹೊರ ಹಾಕಿರುವ ಪ್ರಸಂಗ ಮರೆಯುವ ಮುನ್ನವೇ ಇದೀಗ ಪರಿಶಿಷ್ಟ ಘಟಕದ ಪದಾಧಿಕಾರಿಗಳು ಸಭೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಟಸ್ಥ ನಿಲುವು ತಳೆಯಲು ನಿರ್ಧರಿಸಿದ್ದಾರೆ.
ಪರಿಶಿಷ್ಟ ಘಟಕದ ಜಿಲ್ಲಾಧ್ಯಕ್ಷ ಬಿ.ಈ. ಜಯೇಂದ್ರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದ ಶಾಸಕರಾಗಿರುವ ಡಾ. ಮಂತರ್ ಗೌಡ ಅವರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪಕ್ಷದ ಪದಾಧಿಕಾರಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕಾರ್ಯಕರ್ತರಿಗೆ ಸೂಕ್ತ ಸ್ಥಾನ ಮಾನ ನೀಡುತ್ತಿಲ್ಲ, ಕಾರ್ಯಕ್ರಮಗಳಿಗೆ ಆಹ್ವಾನಿಸಿದರೂ ಭಾಗವಹಿಸುವದಿಲ್ಲ ಎಂದು ಪದಾಧಿಕಾರಿಗಳು, ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರ ಈ ರೀತಿಯ ಧೋರಣೆಯಿಂದಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಯಾವದೇ ಕೆಲಸ ಮಾಡದೆ ತಟಸ್ಥವಾಗಿರಲು ತೀರ್ಮಾನ ಕೈಗೊಂಡಿದ್ದಾರೆ.
ಸಭೆಯಲ್ಲಿ ಪಕ್ಷದ ರಾಜ್ಯ ಸಮಿತಿ ಪದಾಧಿಕಾರಿ, ಜಿ.ಪಂ. ಮಾಜಿ ಅಧ್ಯಕ್ಷೆ ಹೆಚ್.ಬಿ.ಜಯಮ್ಮ, ಪರಿಶಿಷ್ಟ ಘಟಕದ ಮಾಜಿ ಜಿಲ್ಲಾಧ್ಯಕ್ಷರುಗಳಾದ ಪಾಪು ಸಣ್ಣಯ್ಯ, ವಿ.ಕೆ. ಸತೀಶ್ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.