ಸಿದ್ದಾಪುರ, ಮಾ. ೧: ಕಿಡಿಗೇಡಿಗಳು ಕಾಫಿ ತೋಟದೊಳಗಿದ್ದ ಕರಿಮೆಣಸಿನ ಬಳ್ಳಿಗಳನ್ನು ಬುಡದಿಂದಲೇ ಕತ್ತರಿಸಿ ಹಾನಿಗೊಳಿಸಿರುವ ಘಟನೆ ಮಾಲ್ದಾರೆ ಸಮೀಪದ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ವೀರಾಜಪೇಟೆಯ ಬೇಟೋಳಿ ಗ್ರಾಮದ ನಿವಾಸಿ ಪಟ್ಟಡ ಸುಬ್ಬಯ್ಯ ಎಂಬವರಿಗೆ ಸೇರಿದ ಬಾಡಗ ಬಾಣಂಗಾಲ ಗ್ರಾಮದಲ್ಲಿರುವ ಕಾಫಿ ತೋಟದಲ್ಲಿದ್ದ ಅಂದಾಜು ೨೫ಕ್ಕೂ ಅಧಿಕ ಫಸಲು ಬಂದ ಕರಿಮೆಣಸಿನ ಬಳ್ಳಿಗಳನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ. ಇದರಿಂದಾಗಿ ತೋಟದ ಮಾಲೀಕರಿಗೆ ಅಪಾರ ನಷ್ಟ ಸಂಭವಿಸಿದೆ ಎಂದು ಸಿದ್ದಾಪುರ ಪೊಲೀಸ್ ಠಾಣೆಗೆ ಸುಬ್ಬಯ್ಯ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.