ಮಡಿಕೇರಿ, ಮಾ. ೧ : ಕೊಡಗು ಜಿಲ್ಲೆ ಪ್ರವಾಸೋದ್ಯಮದಲ್ಲಿ ಇತ್ತೀಚಿನ ವರ್ಷದಲ್ಲಿ ಭಾರೀ ಹೆಸರು ಮಾಡುತ್ತಿದೆ. ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ವರ್ಷಂಪ್ರತಿ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಜಿಲ್ಲಾ ಕೇಂದ್ರ ಮಡಿಕೇರಿ ರಜಾದಿನಗಳಲ್ಲಿ, ವಾರಾಂತ್ಯ, ವರ್ಷಾಂತ್ಯದ ಸಂದರ್ಭ ಜನರಿಂದ ತುಂಬಿತುಳುಕುತ್ತಿ ರುವುದನ್ನು ಕಾಣಬಹುದು.
ಇಲ್ಲಿಗೆ ಆಗಮಿಸುವ ಬಹುತೇಕ ಪ್ರವಾಸಿಗರ ಆಕರ್ಷಣೆಯ ಸ್ಥಳಗಳಲ್ಲಿ ಒಂದು ನಗರದ ಹೊರವಲಯದಲ್ಲಿರುವ ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಅಬ್ಬಿಜಲಪಾತ... ಮಡಿಕೇರಿಗೆ ಬಂದವರು ಅಬ್ಬಿಗೆ ತೆರಳದೆ ಮರಳುವುದು ಇಲ್ಲವೆನ್ನಬಹುದು. ಈ ಹಿಂದೆ ಅಬ್ಬಿಜಲಪಾತ ವೀಕ್ಷಣೆಗೆ ಅಲ್ಲಿದ್ದ ತೂಗು ಸೇತುವೆಯೊಂದು ಮುದ ನೀಡುತ್ತಿತ್ತು. ಜಲಪಾತಕ್ಕೆ ಎದುರಾಗಿ ಇದ್ದ ಈ ತೂಗು ಸೇತುವೆಯ ಮೇಲೆ ನಿಂತು ಬಹುತೇಕರು ಜಲಪಾತದ ಸೌಂದರ್ಯವನ್ನು ಅನುಭವಿಸುವದು ಸಹಜವಾಗಿತ್ತು. ಆದರೆ ಈ ತೂಗು ಸೇತುವೆಯ ಐತಿಹ್ಯ ಇದೀಗ ಮರೆಯಾಗಿ ಸುಮಾರು ೭ ವರ್ಷಗಳು ಕಳೆದಿವೆ. ಒಂದಷ್ಟು ದುರಸ್ತಿಯೊಂದಿಗೆ ಇನ್ನಷ್ಟು ಸುಭದ್ರವಾಗಿ ಈ ತೂಗುಸೇತುವೆ ಅಭಿವೃದ್ಧಿ ಕಾಣಬೇಕು ಎಂಬ ಪರಿಸ್ಥಿತಿಯ ನಡುವೆ ೨೦೧೮ರಲ್ಲಿ ಜಿಲ್ಲೆಯ ಜನರು ನಂಬಲಸಾಧ್ಯವಾದ ರೀತಿಯಲ್ಲಿ ಘಟಿಸಿಹೋದ ಪ್ರಾಕೃತಿಕ ದುರಂತದ ಸಂದರ್ಭದಲ್ಲಿ ಈ ತೂಗುಸೇತುವೆ ಸಂಪೂರ್ಣವಾಗಿ ಧರಾಶಾಹಿಯಾಗಿತ್ತು.
ಎದುರು ಭಾಗದ ಬರೆ ಕುಸಿದ ಪರಿಣಾಮವಾಗಿ ಅತ್ತ ಕಡೆಯಿಂದ ಈ ಸೇತುವೆ ಕುಸಿದು ಹೋಗಿತ್ತು. ನಂತರದಲ್ಲಿ ಇದು ಬಹುಶಃ ಜನರ ನೆನಪಿನಿಂದ ಮರೆಯಾಗಿ ಹೋದಂತಿದೆ. ಇದಕ್ಕೂ ಮುನ್ನ ಇದರ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿರುವ ಹಾಗೂ ಸವಿ ನೆನಪಾಗಿ ಇದನ್ನು ಇಟ್ಟುಕೊಂಡಿರುವ ಮಂದಿಯ ಹೊರತಾಗಿ ಈಗ ಯಾರಿಗೂ ಇಲ್ಲಿ ತೂಗು ಸೇತುವೆಯೊಂದು ಇತ್ತು ಎಂಬ ಮಾಹಿತಿಯೇ ಇಲ್ಲವಾಗುತ್ತಿದೆ ಎನ್ನಬಹುದು.
ಇದನ್ನು ಅಭಿವೃದ್ಧಿಪಡಿಸುವುದಾಗಿ ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿನೇಶ್ಗುಂಡೂರಾವ್ ಅವರು ಖಚಿತ ಭರವಸೆ ನೀಡಿದ್ದರು. ಮಡಿಕೇರಿ ಶಾಸಕರಾದ ಅಪ್ಪಚ್ಚುರಂಜನ್ ಅವರೂ ಈ ಬಗ್ಗೆ ಆಸಕ್ತಿ ತೋರಿದ್ದರು. ಆದರೆ ೨೦೧೮ರಲ್ಲಿ ಕಣ್ಮರೆಯಾದ ಈ ತೂಗುಸೇತುವೆ ಇದುವರೆಗೂ ಮತ್ತೆ ಕಾರ್ಯಗತವಾಗಲೇ ಇಲ್ಲ.
ಪ್ರವಾಸೋದ್ಯಮ ಬೆಳೆಯುತ್ತಿದೆ, ಪ್ರವಾಸಿಗರೂ ಹೆಚ್ಚಾಗುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಹೊಸ ಆಕರ್ಷಣೆಗಳು - ಅಗತ್ಯತೆಗಳು ಬೇಕಾಗುತ್ತದೆ. ಆದರೆ ಇದ್ದದ್ದೂ ಇಲ್ಲವಾದರೆ ಇದು ಸರಿಯೇ ಎಂಬದು ಪ್ರಶ್ನೆಯಾಗಿದೆ. ಕೆ. ನಿಡುಗಣೆ ಗ್ರಾ.ಪಂ. ಕೂಡ ಈ ಹಿಂದೆ ತೂಗುಸೇತುವೆಯ ಮರು ನಿರ್ಮಾಣಕ್ಕೆ ನಿರ್ಣಯ ಕೈಗೊಂಡು ಸಂಬAಧಿಸಿದವರಿಗೆ ಮನವಿ ಸಲ್ಲಿಸಿತ್ತು.
ಹಾಲಿ ಶಾಸಕರು, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಮತ್ತೆ ಗಮನ ಹರಿಸಲಿದೆಯೇ ಎಂಬದು ಈಗಿನ ನಿರೀಕ್ಷೆ.
- ಶಶಿ ಸೋಮಯ್ಯ