ಕಣಿವೆ, ಫೆ. ೨೯: ಕೊಡಗು ಜಿಲ್ಲೆಯ ಎರಡನೆಯ ಸಾಕಾನೆ ಶಿಬಿರ ಹಾರಂಗಿ ಜಲಾಶಯದ ಬಲಬದಿಯ ನೂರು ಎಕರೆ ವಿಶಾಲ ವ್ಯಾಪ್ತಿಯಲ್ಲಿ ಕಳೆದ ಒಂದು ಹದಿನಾರು ತಿಂಗಳ ಹಿಂದೆ ನಿರ್ಮಿಸಿರುವ ಸಾಕಾನೆ ಶಿಬಿರದಲ್ಲಿ ಹೆಣ್ಣಾನೆಗಳೇ ಇಲ್ಲ.
ಹಾಗಾಗಿ ಇರುವ ಗಂಡಾನೆಗಳು ಮದವೇರಿದಾಗ ತಮ್ಮ ನಿಸರ್ಗದತ್ತವಾದ ಬಯಕೆ ತೀರಿಸಿಕೊಳ್ಳಲು ಹೆಣ್ಣಾನೆಗಳ ಹುಡುಕಾಟದಲ್ಲಿ ದಿನಗಳೆಯುತ್ತಿವೆ. ಮದವೇರಿದ ಸಾಕಾನೆಗಳನ್ನು ನಿರ್ಜನ ಪ್ರದೇಶದಲ್ಲಿ ಬಂಧಿಯಾಗಿಸುವ ಮಾವುತರು ಹಾಗೂ ಕಾವಾಡಿಗಳ ಕ್ರಮ ಈ ಮದವೇರಿದ ಸಲಗಗಳಿಗೆ ಒಂದು ರೀತಿಯ ಶಿಕ್ಷೆಯಂತಾಗಿದೆ.
ಹಾರAಗಿ ಸಾಕಾನೆ ಶಿಬಿರದಲ್ಲಿ ಏಕದಂತ, ರಾಮ, ಕರ್ಣ, ವಿಕ್ರಮ, ಈಶ್ವರ, ಲಕ್ಷ್ಮಣ ಎಂಬ ಆರು ಗಂಡಾನೆಗಳಿದ್ದು, ಕೇವಲ ವಿಜಯ ಎಂಬ ೬೫ ವಯಸ್ಸು ದಾಟಿರುವ ಹೆಣ್ಣಾನೆ ಇದೆ. ಅದೂ ಕೂಡ ವಯಸ್ಸಾಗಿದ್ದು ಮದ ವೇರಿದ ಸಲಗಗಳ ಬಯಕೆಗಳನ್ನು ಪೂರೈಸುವ ಸ್ಥಿತಿಯಲ್ಲಂತೂ ಈ ವಿಜಯ ಇಲ್ಲ. ಶಿಬಿರದಲ್ಲಿನ ಏಕದಂತ ಹಾಗೂ ರಾಮ ಎಂಬ ಸಾಕಾನೆಗಳಿಗೆ ಮದ ಬಂದಿದ್ದು ಮದ ಇಳಿಯುವವರೆಗೂ ಇವುಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತಿದೆ.
ವರದಿ : ಕೆ.ಎಸ್.ಮೂರ್ತಿ