ಸೋಮವಾರಪೇಟೆ, ಫೆ. ೨೯: ಮಕ್ಕಳಲ್ಲಿ ಸಾಹಿತ್ಯಾ ಸಕ್ತಿಯನ್ನು ಮೂಡಿಸಿ ಓದುವ ಅಭಿರುಚಿಯನ್ನು ಬೆಳೆಸುವ ಪ್ರಮುಖ ಗುರಿಯನ್ನು ಹೊಂದಿರುವ ಕಾರ್ಯಕ್ರಮ ಮಕ್ಕಳ ಸಾಹಿತ್ಯ ಸಂಭ್ರಮವಾಗಿದ್ದು, ಇದರ ಯಶಸ್ಸಿಗೆ ಕೈಜೋಡಿಸಬೇಕೆಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಶಿವಕುಮಾರ್ ಕೊಳ್ಳೇಗಾಲ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಭಾರತ ವಿಜ್ಞಾನ ಸಮಿತಿಯ ಸಹಯೋಗದಲ್ಲಿ ಮಾ. ೪ ರಿಂದ ೬ ರತನಕ ಪಟ್ಟಣದಲ್ಲಿ ನಡೆಯುವ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಬಗ್ಗೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚಿಸುವುದು. ಮಕ್ಕಳು ಮೊಬೈಲ್ ಬಿಟ್ಟು ಗ್ರಂಥಾಲಯದ ಕಡೆಗೆ ತೆರಳುವಂತೆ ಮಾಡುವ ಉದ್ದೇಶವನ್ನು ಸಮಿತಿ ಹೊಂದಿದೆ. ರಾಜ್ಯದ ಆಯ್ದ ೭೫ ತಾಲೂಕುಗಳಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ನಡೆಯಲಿದೆ. ಮುಂದಿನ ಸಾಲಿನಿಂದ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ಆಯೋಜಿಸಲಾಗುವುದು. ಮಕ್ಕಳ ಕಲಿಕೆಯಲ್ಲಿ ವೈಜ್ಞಾನಿಕತೆ ಮೂಡಿಸುವುದೇ ಕಾರ್ಯ ಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು.ಕಥೆ ಕಟ್ಟೋಣ, ಕವನ ಬರೆಯೋಣ, ನಾಟಕ ಮಾಡೋಣ, ನಾನು ರಿಪೋರ್ಟರ್ ಎಂಬ ವಿಷಯ ದಲ್ಲಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ, ವಿದ್ಯಾರ್ಥಿ ಗಳಿಂದಲೇ ಕಥೆ, ಕವನ, ನಾಟಕ ಬರೆಸಿ, ಆಯ್ಕೆಯಾದ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತಂದು, ಗ್ರಂಥಾಲಯಗಳಲ್ಲಿ ಇಡಲಾಗುತ್ತದೆ ಎಂದು ಜಿಲ್ಲಾ ಸಂಯೋಜಕಿ ಸುಮನ ಮ್ಯಾಥ್ಯು ಹೇಳಿದರು.
ಮಕ್ಕಳು ಬರೆದ ಪುಸ್ತಕಗಳು ಗ್ರಂಥಾಲಯದಲ್ಲಿ ಸಿಕ್ಕರೆ ಮಕ್ಕಳು ಆಕರ್ಷಿತರಾಗುತ್ತಾರೆ. ಈ ಕಾರ್ಯಕ್ರಮವನ್ನು ಮಕ್ಕಳ ಹಬ್ಬದಂತೆ ಆಚರಿಸಲಾಗುವುದು. ಇದರಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಅಭಿಪ್ರಾಯಿಸಿದರು.
ಮಕ್ಕಳ ಸಾಹಿತ್ಯ ಸಂಭ್ರಮಕ್ಕೆ ಆಯ್ಕೆಯಾಗಿರುವ ಶಾಲಾ ಶಿಕ್ಷಕರು, ಗ್ರಂಥಪಾಲಕರು, ಸ್ವಯಂಸೇವಕರುಗಳಿಗೆ ತರಬೇತಿ ಹಾಗೂ ಪೂರ್ವ ಮಾಹಿತಿ ನೀಡಲಾಯಿತು. ತಾಲೂಕು ಸಂಪನ್ಮೂಲ ವ್ಯಕ್ತಿಗಳಾದ ಗೌತಮ್ ಕಿರಗಂದೂರು, ಶರ್ಮಿಳಾ ರಮೇಶ್, ಹೇಮಂತ್ ಪಾರೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.