ವರದಿ: ಎಂ.ಎನ್. ಚಂದ್ರಮೋಹನ್

ಕುಶಾಲನಗರ, ಫೆ.೨೯: ಕುಶಾಲನಗರ - ಮಡಿಕೇರಿ ರಸ್ತೆಯ ಬಸವನಹಳ್ಳಿ ಬಳಿ ಸುಮಾರು ೭.೫ ಕೋಟಿ ವೆಚ್ಚದ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಮಡಿಕೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದರು.

ಸುಮಾರು ನಾಲ್ಕು ಎಕರೆ ಜಾಗದಲ್ಲಿ ಬಸ್ ಡಿಪೋ ನಿರ್ಮಾಣ ಹಿನ್ನೆಲೆಯಲ್ಲಿ ಸಂಪೂರ್ಣ ಕಾಡು ಮತ್ತು ಪೊದೆಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ.

ಈ ಪ್ರದೇಶದಲ್ಲಿ ಬೆಳೆದು ನಿಂತಿರುವ ಮರಗಳನ್ನು ತೆರವು ಗೊಳಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದ ಅಧಿಕಾರಿಗಳ ಮನವಿ ಮೇರೆಗೆ ಈಗಾಗಲೇ ಅರಣ್ಯ ಇಲಾಖೆ ಎಲ್ಲಾ ಸಿದ್ಧತೆ ನಡೆಸಿದೆ. ಸುತ್ತಲು ಆವರಣ ಗೋಡೆ ನಿರ್ಮಾಣಕ್ಕೆ ಅವಶ್ಯವಿರುವ ಸಾಮಗ್ರಿಗಳು ಮತ್ತು ಕಟ್ಟಡದ ತಳಪಾಯಕ್ಕೆ ಅಗತ್ಯವಿರುವ ಕಬ್ಬಿಣದ ಸರಳು ಮತ್ತಿತರ ವಸ್ತುಗಳು ಈಗಾಗಲೇ ಬಂದಿದ್ದು ಇಡೀ ಪ್ರದೇಶವನ್ನು ಸಮತಟ್ಟು ಗೊಳಿಸಲಾಗುತ್ತಿದೆ.

ಸದ್ಯದಲ್ಲೇ ಕಾಮಗಾರಿ ಚಾಲನೆ ಗೊಳ್ಳಲಿದೆ ಎಂದು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣ ಅಧಿಕಾರಿ ಬಿ. ಜಯಕರ ಶೆಟ್ಟಿ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಕಾಮಗಾರಿ ಮೈಸೂರು ಗುತ್ತಿಗೆದಾರರಿಗೆ ಟೆಂಡರ್ ಆಗಿದ್ದು, ನಿರ್ದಿಷ್ಟ ಅವಧಿ ಒಳಗೆ ಕಾಮಗಾರಿ ಮುಗಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಆದಷ್ಟು ಬೇಗನೆ ಕಾಮಗಾರಿಯನ್ನು ಪೂರ್ಣಗೊಳಿಸಿ ಡಿಪೋವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ವಿಶೇಷವಾಗಿ ನೂತನ ಬಸ್ ಡಿಪೋದಲ್ಲಿ ವಿದ್ಯುತ್ ಚಾಲಿತ ಬಸ್ ಗಳಿಗೆ ಅಗತ್ಯವಿರುವ ಪವರ್ ಬ್ಯಾಂಕ್ ಕೂಡ ಸ್ಥಾಪನೆಗೊಳ್ಳಲಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ. ಮೈಸೂರು ಕುಶಾಲನಗರ ನಾಲ್ಕು ಪಥಗಳ ಹೈವೇ ಕಾಮಗಾರಿ ಪ್ರಾರಂಭಗೊAಡಿದ್ದು ಇದು ಪ್ರಸಕ್ತ ಬಸ್ ಡಿಪೋ ನಿರ್ಮಾಣಗೊಳ್ಳುತ್ತಿರುವ ಜಾಗದ ಬಳಿ ಸಂಪರ್ಕ ಪಡೆಯಲಿದೆ.

ಮುಂದಿನ ದಿನಗಳಲ್ಲಿ ಬಹುತೇಕ ಎಕ್ಸ್ಪ್ರೆಸ್ ಬಸ್ಸುಗಳು ಮಡಿಕೇರಿ ಕಡೆಯಿಂದ ಬಸವನಹಳ್ಳಿ ಮೂಲಕ ನೇರವಾಗಿ ಹೈವೇ ಬಳಸಿ ಮೈಸೂರು ಕಡೆಗೆ ಸಂಚರಿಸಲು ಪ್ರಸಕ್ತ ನಿರ್ಮಾಣ ಗೊಳ್ಳುತ್ತಿರುವ ಬಸ್ ಡಿಪೋದಿಂದ ಅನುಕೂಲವಾಗಲಿದೆ ಎಂದು ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.