ಕೂಡಿಗೆ, ಮಾ. ೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷಚೇತನರ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ಯಕ್ಷ ಭಾಸ್ಕರ್ ನಾಯಕ್ ನೆರವೇರಿಸಿದರು. ವಿಶೇಷಚೇತನರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಅವರ ಬೇಡಿಕೆಯ ಅನುಗುಣವಾಗಿ ಕುಡಿಯುವ ನೀರಿನ ವ್ಯವಸ್ಥೆ, ಗ್ರಾಮ ಪಂಚಾಯಿತಿ ಅನುದಾನದ ಶೇ. ೫ ರ ಅನುದಾನದಲ್ಲಿ ಬೀದಿ ದೀಪಗಳು, ದೂರವಿರುವ ಮನೆಗಳಿಗೆ ಮನೆಯ ಸಮೀಪದಲ್ಲೇ ಸೋಲಾರ್ ವಿದ್ಯುತ್ ದೀಪ ಅಳವಡಿಕೆ ಮಾಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಸರಕಾರದ ಯೋಜನೆಯ ಅನುಗುಣವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷಚೇತನರಿಗೆ ಹಂತ ಹಂತವಾಗಿ ಯೋಜನೆಯ ಸೌಲಭ್ಯಗಳನ್ನು ಒದಗಿಸ ಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಸರಕಾರದÀ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಂಜು, ಸೋಮವಾರಪೇಟೆ ತಾಲೂಕಿನ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಹರೀಶ್ ಮತ್ತು ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತೆ ಗೀತಾಂಜಲಿ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ಹಲವು ಮಂದಿ ವಿಶೇಷಚೇತನರು ಹಾಜರಿದ್ದು, ತಮ್ಮ ಬೇಡಿಕೆಗಳನ್ನು ಮನವಿಯ ಮೂಲಕ ಸಲ್ಲಿಸಿದರು. ಗೀತಾಂಜಲಿ ಸ್ವಾಗತಿಸಿ, ವಂದಿಸಿದರು.