ಸಿದ್ದಾಪುರ, ಮಾ. ೧: ಮಳೆಗಾಲದಲ್ಲಿ ಪ್ರವಾಹದ ಭೀತಿ ಎದುರಾಗುವ ಸಿದ್ದಾಪುರ ಕಾವೇರಿ ನದಿಯಲ್ಲಿ ಇದೀಗ ಬಿಸಿಲಿನ ತಾಪಕ್ಕೆ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ವರ್ಷಂಪ್ರತಿ ಮಳೆಗಾಲದಲ್ಲಿ ಜೀವನದಿ ಕಾವೇರಿ ಹರಿಯುತ್ತಿರುವ ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದ್ದು, ಬಂಡೆಕಲ್ಲುಗಳು ಎದ್ದು ಕಾಣುತ್ತಿವೆ.

ಜನಸಾಮಾನ್ಯರು ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಕಳೆದ ಎರಡು ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಕಾವೇರಿ ನದಿಯ ಒಡಲು ತುಂಬಿದರೆ ಮಾತ್ರ ಇತರ ಜಲಮೂಲಗಳಿಗೆ ಅನುಕೂಲವಾಗುತ್ತದೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಂದಿನ ದಿನಗಳಲ್ಲಿ ನೀರಿಲ್ಲದೇ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದೆಂಬ ಹಿರಿಯರಾದ ಮಲ್ಲಣ್ಣ ತಿಳಿಸಿದ್ದಾರೆ. ಕರಡಿಗೋಡು ಗುಹ್ಯ ಗ್ರಾಮಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಪ್ರವಾಹಕ್ಕೆ ಸಿಲುಕಿ ನದಿತೀರದವರು ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಆದರೆ ಇದೀಗ ಬಿಸಿಲಿನ ಬೇಗೆಯಿಂದಾಗಿ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖಗೊಂಡಿದೆ. ಕೆಲವು ಕಾಫಿ ಬೆಳೆಗಾರರು ಕಾವೇರಿ ನದಿಯಿಂದ ಪಂಪ್‌ಸೆಟ್ ಮೂಲಕ ತೋಟಕ್ಕೆ ನೀರು ಹಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೀರಿನ ಹರಿವು ಕ್ಷೀಣಿಸಿದೆ. ಇದೇ ರೀತಿ ಬಿಸಿಲಿನ ಧಗೆ ಮುಂದುವರಿದಲ್ಲಿ ಮತ್ತಷ್ಟು ಸಮಸ್ಯೆಗಳು ಎದುರಾಗಬಹುದೆಂಬ ಅಭಿಪ್ರಾಯ ಕೇಳಿ ಬಂದಿದೆ. -ಎ.ಎಸ್. ವಾಸು