ವೀರಾಜಪೇಟೆ, ಮಾ. ೧: ವೀರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯಲ್ಲಿ ಸಕಾಲದಲ್ಲಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಎಂದು ಆರೋಪಿಸಿ ಕಲ್ಲುಬಾಣೆ ಬದ್ರಿಯಾ ಜುಮ್ಮಾ ಮಸೀದಿ ಜಂಕ್ಷನ್ ಎದುರು ಕಲ್ಲುಬಾಣೆ ಗ್ರಾಮಸ್ಥರು ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು.

ಸಮರ್ಪಕವಾಗಿ ಕುಡಿಯುವ ನೀರನ್ನು ಜನತೆಗೆ ಒದಗಿಸಬೇಕು. ಆದರೆ ಕಳೆದ ನಾಲ್ಕು ದಿನಗಳಿಂದ ಪಂಚಾಯಿತಿಯಿAದ ಗ್ರಾಮಸ್ಥರಿಗೆ ನೀರು ಸರಬರಾಜು ಅಗಿಲ್ಲ. ಇದರಿಂದಾಗಿ ಗ್ರಾಮಸ್ಥರಿಗೆ ಬಹಳ ತೊಂದರೆಯಾಗಿದೆ. ಕುಡಿಯಲು ಸಹ ಮನೆಯಲ್ಲಿ ನೀರಿಲ್ಲದ ಪರಿಸ್ಥಿರಿ ತಲೆದೋರಿದೆ. ಏಕಾಏಕಿ ನೀರು ಸರಬರಾಜು ಸ್ಥಗಿತಗೊಳಿಸಿದರೆ ನಾವು ಏನು ಮಾಡುವುದು. ಪಂಚಾಯಿತಿ ನೀರು ಹೊರತುಪಡಿಸಿ ನಮಗೆ ಬೇರೆ ಯಾವುದೇ ನೀರಿನ ಮೂಲಗಳಿಲ್ಲ. ಮನೆಯಲ್ಲಿ ಪುಟ್ಟ ಮಕ್ಕಳು ವಯಸ್ಸಾದ ವೃದ್ಧರು, ಬಾಣಂತಿಯರು ಸೇರಿದಂತೆ ಎಲ್ಲಾ ವರ್ಗದ ಜನ ಇದ್ದಾರೆ. ಹೀಗಿರುವಾಗ ನೀರು ಪೂರೈಕೆ ಮಾಡದೆ ಇದ್ದಲ್ಲಿ ಹೇಗೆ? ಎಂದು ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ಮೂರು ದಿನಗಳ ಹಿಂದೆ ಪಂಚಾಯಿತಿ ವತಿಯಿಂದ ಕರೆಯಲಾಗಿದ್ದ ನೀರಿಗೆ ಸಂಬAಧಿಸಿದ ಸಭೆಗೆ ಎಲ್ಲ ಗ್ರಾಮಸ್ಥರು ಹಾಜರಾಗದ ಹಿನ್ನೆಲೆಯಲ್ಲಿ ಒಂದೆರಡು ದಿನಗಳ ಕಾಲ ನೀರು ಪೂರೈಕೆ ಮಾಡುವುದು ಬೇಡ ಎನ್ನುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿ ಗ್ರಾಮಸ್ಥರು ಆಕ್ರೋಶಭರಿತರಾಗಿ ಪ್ರತಿಭಟನೆ ನಡೆಸಿದರು. ಅಧ್ಯಕ್ಷರು ಹಾಗೂ ಸದಸ್ಯರುಗಳು ಪ್ರತಿಭಟನೆ ನಿರತ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರೂ ಗ್ರಾಮಸ್ಥರು ಅವರನ್ನು ತೀವ್ರವಾಗಿ ತರಾಟಗೆ ತೆಗೆದುಕೊಂಡರು.

ನೀರು ಸರಬರಾಜು ಸ್ಥಗಿತಗೊಳಿಸುವ ಮೊದಲೇ ಮಾಹಿತಿ ನೀಡಿದ್ದರೇ ಮೊದಲೇ ನೀರು ಶೇಖರಣೆ ಮಾಡಬಹುದಿತ್ತು. ಪಂಚಾಯಿತಿ ವತಿಯಿಂದ ಯಾವ ಮಾಹಿತಿ ನೀಡದೇ ಏಕಾಏಕಿ ಸ್ಥಗಿತಗೊಳಿಸಿರುವ ಕಾರಣವೇನು ಎಂದು ಪ್ರಶ್ನಿಸಿದರು.

ಪಂಚಾಯಿತಿ ವತಿಯಿಂದ ಕಲ್ಲುಬಾಣೆ ವಾರ್ಡ್ಗೆ ಸಂಬAಧಿಸಿದAತೆ ನೀರು ಮತ್ತು ನೈರ್ಮಲ್ಯ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಬೆರಳೆಣಿಕೆ ಮಂದಿ ಗ್ರಾಮಸ್ಥರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದರು. ಈ ಬಾರಿಯ ಸಭೆಯಲ್ಲಿ ನೀರಿನ ಸಂಸ್ಕರಣೆ, ನೈರ್ಮಲ್ಯ ಹಾಗೂ ನೀರಿನ ದರ ಏರಿಕೆ ಮಾಡುವ ಕುರಿತು ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಬೇಕಾಗಿತ್ತು. ಆದರೆ ಗ್ರಾಮಸ್ಥರು ಸಭೆಗೆ ಹಾಜರಾಗಿಲ್ಲ. ನೀರಿನ ಪೈಪ್ ಕಾಮಗಾರಿ ನಡೆಯುತ್ತಿರುವುದರಿಂದ ಎರಡು ದಿನ ನೀರು ಪೂರೈಕೆ ಮಾಡಲಾಗಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷೆ ಫಾತೀಮ ತಿಳಿಸಿದ್ದಾರೆ.