ಮುಳ್ಳೂರು, ಫೆ. ೨೮: ‘ಸರಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಬಹುಮುಖ್ಯವಾಗುತ್ತದೆ’ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅಭಿಪ್ರಾಯಪಟ್ಟರು.

ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಇಲಾಖೆಯಿಂದ ೨೦೨೨-೨೩ನೇ ಸಾಲಿನಲ್ಲಿ ರೂ. ೨೭.೫೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿವೇಕ ಶಾಲಾ ಕೊಠಡಿಗಳ ಉದ್ಘಾಟನೆ, ಉದ್ಯೋಗ ಖಾತ್ರಿ ಯೋಜನೆಯಿಂದ ನಿರ್ಮಾಣ ವಾಗಿರುವ ಶೌಚಾಲಯಗಳ ಉದ್ಘಾಟನೆ ಮತ್ತು ಅಕ್ಷರ ದಾಸೋಹದಿಂದ ನಿರ್ಮಾಣವಾಗಿರುವ ದಾಸೋಹ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸರ್ಕಾರಿ ಶಾಲೆಗಳ ಬೆಳವಣಿಗೆಗಾಗಿ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿದರೆ ಹಾಗೂ ಶಿಕ್ಷಣ ಇಲಾಖೆಯ ಯೋಜನೆಯನ್ನು ಸದ್ಬಳಕೆ ಮಾಡಿದರೆ ಖಾಸಗಿ ಶಾಲೆಗಳಿಗಿಂತÀ ಕಡಿಮೆ ಇಲ್ಲದಂತೆ ಬೆಳವಣಿಗೆಯಾಗುತ್ತದೆ. ಈ ದಿಸೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರಕಾರಿ ಶಾಲೆಗಳ ಉನ್ನತ್ತಿಗೆ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಸ್ವಚ್ಛತೆಗೆ ಗ್ರಾ.ಪಂ.ಯವರು ಹೆಚ್ಚಿನ ಆದ್ಯತೆ ಕೊಡಬೇಕು ಶನಿವಾರಸಂತೆಯಲ್ಲಿ ಕಸ ವಿಲೇವಾರಿ ಸಮಸ್ಯೆ ಕಾಣಿಸುತ್ತಿದ್ದು ಈ ನಿಟ್ಟಿನಲ್ಲಿ ಗ್ರಾ.ಪಂ.ಯವರು ನೂತನವಾಗಿ ನಿರ್ಮಿಸಿರುವ ಕಸ ವಿಲೇವಾರಿ ಘಟಕದ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಅಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಸ್ವಚ್ಚತ್ತೆಯನ್ನು ಕಾಪಾಡಿಕೊಳ್ಳುವಂತೆ ಪರೋಕ್ಷವಾಗಿ ಗ್ರಾ.ಪಂ.ಗೆ ಸಲಹೆ ನೀಡಿದರು.

ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಗೀತ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಗ್ರಾ.ಪಂ.ಉಪಾಧ್ಯಕ್ಷ ಸರ್ದಾರ್ ಆಹಮ್ಮದ್, ಸದಸ್ಯರಾದ ಎಸ್.ಸಿ.ಶರತ್ ಶೇಖರ್, ಎಸ್.ಎನ್.ರಘು, ಎನ್.ಎ.ಆದಿತ್ಯ ಗೌಡ, ಸರೋಜ ಶೇಖರ್, ಸರಸ್ವತಿ, ಪಿಡಿಒ ಹರೀಶ್, ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ್, ಶನಿವಾರಸಂತೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಿ.ಕೆ.ದಿನೇಶ್, ಎಸ್‌ಡಿಎಂಸಿ ಅಧ್ಯಕ್ಷ ಚರಣ್, ಸುಜಿತ್, ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಮುಂತಾದವರು ಹಾಜರಿದ್ದರು.