ಚೆಯ್ಯಂಡಾಣೆ, ಫೆ. ೨೮: ವೀರಾಜಪೇಟೆ ನಾಪೋಕ್ಲು ಮುಖ್ಯ ರಸ್ತೆಯ ಕರಡ ಸೇತುವೆ ಸಮೀಪ ತೋಟದಲ್ಲಿದ್ದ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದ ಘಟನೆ ನಡೆದಿದೆ.
ಪೊನ್ನಂಪೇಟೆಯ ಹಳ್ಳಿಗಟ್ಟು ನಿವಾಸಿಗಳಾದ ನವೀನ ಹಾಗೂ ಸುಬ್ರಮಣಿ ಬೈಕ್ನಲ್ಲಿ ಕಕ್ಕಬ್ಬೆ ಇಗ್ಗುತಪ್ಪ ದೇವಸ್ಥಾನಕ್ಕೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭ ಕರಡ ಸೇತುವೆ ಸಮೀಪದಲ್ಲಿ ಮರ ಬಿದ್ದಿದ್ದು, ಅದೃಷ್ಟವಶಾತ್ ಇಬ್ಬರೂ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ,
ಒಂದು ವಿದ್ಯುತ್ ಕಂಬ ತುಂಡಾಗಿದ್ದು, ವಿದ್ಯುತ್ ಸರಬರಾಜು ಇಲ್ಲದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ೧ ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತಗೊಂಡು ವಾಹ ನಗಳು ಕಡಂಗ, ಎಡಪಾಲ, ಚೆಯ್ಯಂ ಡಾಣೆ ಮಾರ್ಗವಾಗಿ ಸಾಗಿದವು.
ವಿಚಾರ ತಿಳಿದ ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಸ್ಥಳಕ್ಕಾಗಮಿಸಿ ಜೆಸಿಬಿ ಹಾಗೂ ಸಲಕರಣೆಗಳನ್ನು ಒದಗಿಸಿ ಕೂಡಲೇ ಮರವನ್ನು ತೆರವುಗೊಳಿಸಿ ಬೈಕ್ ಅನ್ನು ಹೊರತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಮತ್ತಿತರರು ಇದ್ದರು. -ಅಶ್ರಫ್.