ಸೋಮವಾರಪೇಟೆ, ಫೆ. ೨೮: ಕುಶಾಲನಗರ-ಸೋಮವಾರಪೇಟೆ ಗಡಿಯನ್ನು ಹಂಚಿಕೊAಡಿರುವ ಯಡವನಾಡು ಮೀಸಲು ಅರಣ್ಯದಲ್ಲಿ ಬೆಂಕಿ ಹರಡಿಕೊಂಡಿದ್ದು, ೫೦ಕ್ಕೂ ಅಧಿಕ ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ.

ಅಗ್ನಿಯ ನರ್ತನಕ್ಕೆ ಅಂಕೆಯಿಲ್ಲದAತಾಗಿದ್ದು, ಸ್ಥಳೀಯರು, ಅರಣ್ಯ ಇಲಾಖಾ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳ ಹರಸಾಹಸಕ್ಕೂ ಬೆಂಕಿ ಹತೋಟಿಗೆ ಬಾರದಂತಾಗಿದೆ.

ಇAದು ಮಧ್ಯಾಹ್ನದ ವೇಳೆಗೆ ಕಾಣಿಸಿಕೊಂಡ ಬೆಂಕಿ ಸಂಜೆಯಾಗುತ್ತಲೇ ತನ್ನ ರುದ್ರಪ್ರತಾಪ ತೋರಿದ್ದು, ಬಿಸಿಲಿಗೆ ಒಣಗಿದ್ದ ತರಗೆಲೆಗಳನ್ನೇ ಅಸ್ತçವಾಗಿಸಿಕೊಂಡು ೫೦ ಎಕರೆಗೂ ಅಧಿಕ ಪ್ರದೇಶಕ್ಕೆ ತನ್ನ ಕೆನ್ನಾಲಿಗೆ ತೋರಿದೆ.

ಕಳೆದ ೩ ದಿನಗಳ ಹಿಂದೆ ಭುವನಳ್ಳಿ ಭಾಗದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚನ್ನು ಸ್ಥಳೀಯರ ನೆರವಿನೊಂದಿಗೆ ನಂದಿಸಲಾಗಿತ್ತು. ಆದರೆ ಇಂದು ಮತ್ತೆ ಯಡವನಾಡು ಭಾಗದಲ್ಲಿ ಬೆಂಕಿ ಆವರಿಸಿ ಅರಣ್ಯ ಪ್ರದೇಶ ಬೆಂಕಿಯ ತಾಣವಾಗಿ ಮಾರ್ಪಟ್ಟಿದೆ. ಎಷ್ಟೇ ಹರಸಾಹಸಪಟ್ಟರೂ ಸಹ ತಹಬದಿಗೆ ಬಾರದ ಬೆಂಕಿಯ ಕೆನ್ನಾಲಿಗೆ, ರಾತ್ರಿಯ ವೇಳೆಯಲ್ಲಿ ತನ್ನ ರೌದ್ರಾವತಾರವನ್ನು ಹೆಚ್ಚಿಸಿದೆ. ಮೇಲ್ನೋಟಕ್ಕೆ ಕಿಡಿಗೇಡಿಗಳ ಕೃತ್ಯ ಎಂದೇ ಸಂಶಯಿಸಲಾಗಿದ್ದು, ಲಕ್ಷಾಂತರ ಕ್ರಿಮಿಕೀಟಗಳು, ವನ್ಯಪ್ರಾಣಿಗಳು, ಕೋಟ್ಯಂತರ ಮೌಲ್ಯದ ಅರಣ್ಯ ಸಂಪತ್ತು ಅಗ್ನಿಗೆ ಆಹುತಿಯಾದಂತಾಗಿದೆ.

ಯಡವನಾಡು ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಬೆಂಕಿ ಇದಕ್ಕೆ ಒತ್ತಿಕೊಂಡಿರುವ ಹೊಸಳ್ಳಿ, ಆಡಿನಾಡೂರು ಭಾಗಕ್ಕೂ ವಿಸ್ತರಿಸಿಕೊಂಡಿರುವ ಸಾಧ್ಯತೆಯಿದೆ. ಸದ್ಯಕ್ಕೆ ಬೆಂಕಿ ಕಾಣಿಸಿಕೊಂಡಿರುವ ಪ್ರದೇಶದಲ್ಲಿ ‘ಫೈರ್ ರೋಡ್' (ತರಗೆಲೆಗಳನ್ನು ದಾರಿಯಂತೆ ಗುಡಿಸಿ ಬೆಂಕಿ ಹರಡುವುದನ್ನು ತಪ್ಪಿಸುವ ಪ್ರಯತ್ನ) ನಿರ್ಮಿಸಲಾಗಿದೆ.

ಅರಣ್ಯದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿಗೆ ಕಿಡಿಗೇಡಿಗಳೇ ಕಾರಣವಿರಬಹುದು ಎಂದು ಸ್ಥಳೀಯರು ಸಂಶಯಿಸಿದ್ದು, ಬಿರು ಬೇಸಿಗೆಯಾದ್ದರಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಕಿಡಿಗೇಡಿಗಳಿಂದ ಅರಣ್ಯವನ್ನು ರಕ್ಷಿಸಬೇಕೆಂದು ಆಗ್ರಹಿಸಿದ್ದಾರೆ.