ಸಿದ್ದಾಪುರ, ಫೆ. ೨೬: ಹಲವಾರು ವರ್ಷಗಳಿಂದ ಸೇವೆಯಲ್ಲಿ ನಿರತವಾಗಿದ್ದ ಸಿದ್ದಾಪುರ ಠಾಣಾ ವ್ಯಾಪ್ತಿಯ ಮಾಲ್ದಾರೆ ಕಲ್ಲಳ್ಳ ಬಳಿಯ ಪೊಲೀಸ್ ತಪಾಸಣಾ ಕೇಂದ್ರಕ್ಕೆ ಇದೀಗ ಬೀಗ ಮುದ್ರೆ ಬಿದ್ದಿದೆ. ಕೊರೊನಾ, ಚುನಾವಣೆ ಸಂದರ್ಭದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿದ್ದ ಚೆಕ್ ಪೋಸ್ಟ್ ಬಂದ್ ಆಗಿದೆ.

ಹಲವಾರು ವರ್ಷಗಳ ಹಿಂದೆ ಸಿದ್ದಾಪುರ-ಪಿರಿಯಾಪಟ್ಟಣಕ್ಕೆ ತೆರಳುವ ಮಾರ್ಗದ ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಕಲ್ಲಳ್ಳ ಬಳಿಯ ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆಯು ತಪಾಸಣಾ ಕೆಂದ್ರವನ್ನು ಪ್ರಾರಂಭಿಸಿತ್ತು. ತದ ನಂತರ ಅರಣ್ಯ ಇಲಾಖೆಯ ಚೆಕ್ ಪೋಸ್ಟನ್ನು ಕೊಡಗು ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಗಡಿಗೆ ಸ್ಥಳಾಂತರಿಸಿ, ಅರಣ್ಯ ಇಲಾಖೆಯ ತಪಾಸಣಾ ಕೇಂದ್ರದ ಬದಲಾಗಿ ಸಿದ್ದಾಪುರ ಪೊಲೀಸ್ ಠಾಣೆಗೆ ಸೇರಿದ ಪೊಲೀಸ್ ಚೆಕ್‌ಪೋಸ್ಟ್ ಸ್ಥಾಪಿಸಲಾಗಿತ್ತು. ಪೊಲೀಸ್ ತಪಾಸಣಾ ಕೇಂದ್ರ ಪ್ರಾರಂಭಿಸಿದ ನಂತರ ವ್ಯಾಪ್ತಿಯ ಹಲವಾರು ಕಳ್ಳ ಸಾಗಣೆ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ನಿರಂತರ ಸೇವೆಯಲ್ಲಿ ತೊಡಗಿದ್ದ ಚೆಕ್ ಪೋಸ್ಟ್ ಕಳೆದ ಕೆಲವು ದಿನಗಳಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.

ಕೊಡಗು ಹಾಗೂ ಮೈಸೂರು ಜಿಲ್ಲೆಯ ಗಡಿ ಭಾಗದಲ್ಲಿರುವ ಮಾಲ್ದಾರೆ ಪೊಲೀಸ್ ಚೆಕ್‌ಪೋಸ್ಟ್ ಕೊರೊನಾ ಸಂದರ್ಭದಲ್ಲಿ ಸಲ್ಲಿಸಿದ್ದ ಸೇವೆ ಪ್ರಶಂಸನೀಯ. ಕೊರೊನಾ ಸಂಧರ್ಭದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಅಕ್ರಮವಾಗಿ ಜಿಲ್ಲೆಗೆ ಆಗಮಿಸುತ್ತಿದ್ದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಪ್ರವಾಸಿಗರು ಪಿರಿಯಾಪಟ್ಟಣ ಮಾರ್ಗವಾಗಿ ಜಿಲ್ಲೆಗೆ ಕಾಲಿಡುತ್ತಿದ್ದರು. ಆದರೆ ಮಾಲ್ದಾರೆ ಬಳಿಯ ಪೊಲೀಸ್ ತಪಾಸಣಾ ಕೇಂದ್ರದಲ್ಲಿ ದಿನದ ೨೪ ಗಂಟೆ ಪೊಲೀಸರು ಸೇವೆಯಲ್ಲಿದ್ದ ಹಿನ್ನೆಲೆಯಲ್ಲಿ ಅಕ್ರಮವಾಗಿ ಜಿಲ್ಲೆಗೆ ಆಗಮಿಸುವವರ ವಿರುದ್ಧ ಕ್ರಮ ಕೈಗೊಳ್ಳವ ಮೂಲಕ ಕೊರೊನಾ ಮಹಾಮಾರಿಯಿಂದ ಜಿಲ್ಲೆಯನ್ನು ರಕ್ಷಿಸಿದ್ದಾರೆ.

ಸಿದ್ದಾಪುರದಿಂದ ಪಿರಿಯಾಪಟ್ಟಣಕ್ಕೆ ತೆರಳಲು ಅರಣ್ಯದ ಮಧ್ಯದ ರಸ್ತೆ ಮಾರ್ಗ ಇರುವುದರಿಂದ ವ್ಯಾಪ್ತಿಯು ನಿರ್ಜನವಾಗಿರುತ್ತದೆ. ವಾಹನ ಸವಾರರು ಪ್ರತಿನಿತ್ಯ ಭಯದಲ್ಲೇ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸ್ ತಪಾಸಣಾ ಕೇಂದ್ರ ಸ್ಥಾಪನೆಯಾದ ಬಳಿಕ ನಿರ್ಜನ ಪ್ರದೇಶದಲ್ಲಿ ತೆರಳುವ ಪ್ರಯಾಣಿಕರು ಮಾರ್ಗಮಧ್ಯೆ ಅಹಿತಕರ ಘಟನೆ ಸಂಭವಿಸಿದರೆ ಸಹಾಯಕ್ಕೆ ಪೊಲೀಸರು ಬರಬಹುದೆಂಬ ನಿರೀಕ್ಷೆಯಲ್ಲಿ ತೆರಳುತ್ತಿದ್ದರು. ಆದರೆ ಇದೀಗ ಪೊಲೀಸ್ ಕೇಂದ್ರ ಸ್ಥಗಿತಗೊಂಡಿದ್ದು ಪ್ರಯಾಣಿಕರಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿಯಾಗಿದೆ.

ಸಿಬ್ಬಂದಿ ಕೊರತೆ ಹಿನ್ನೆಲೆ ಸ್ಥಗಿತ: ಸಿದ್ದಾಪುರ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆಯ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್ನಲ್ಲಿ ಕರ್ತವ್ಯಕ್ಕೆ ಸಿಬ್ಬಂದಿಗಳ ನೇಮಕವಾಗದೆ ಚೆಕ್‌ಪೋಸ್ಟ್ ಸ್ಥಗಿತಗೊಂಡಿದೆ. ಅರಣ್ಯದಂಚಿನಲ್ಲಿ ಹಾಡಿಗಳಿದ್ದು ಗಲಾಟೆಗಳು ಸಂಭವಿಸಿದಲ್ಲಿ ಸಮೀಪದ ಪೊಲೀಸ್ ಚೆಕ್‌ಪೋಸ್ಟ್ನಲ್ಲಿ ಕರ್ತವ್ಯದಲ್ಲಿರುವ ಪೊಲೀಸರಿಗೆ ಮಾಹಿತಿ ನೀಡಿ ಸಮಸ್ಯೆ ಪರಿಹರಿಸಬಹುದು. ಆದರೆ ಇದೀಗ ದಿಢೀರನೆ ಚೆಕ್‌ಪೋಸ್ಟ್ ಬಂದ್ ಮಾಡಿರುವುದು ಇಲ್ಲಿನ ಹಾಡಿ ನಿವಾಸಿಗಳಿಗೆ ಸಮಸ್ಯೆಯಾಗಿದೆ.

ಕಲ್ಲಳ್ಳ ಬಳಿಯ ತಪಾಸಣಾ ಕೇಂದ್ರವು ಹುಲ್ಲಿನ ಗುಡಿಸಲಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಪೊಲೀಸರಿಗೆ ಗಾಳಿ ಮಳೆಯಲ್ಲಿ ಕರ್ತವ್ಯ ನಡೆಸುವುದು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಕಾಫಿ ಬೆಳೆಗಾರರೊಬ್ಬರು ಪೊಲೀಸ್ ತಪಾಸಣಾ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೆ ಗ್ರಾಮಕ್ಕೆ ಅತ್ಯವಶ್ಯಕವಾಗಿರುವ ತಪಾಸಣಾ ಕೇಂದ್ರದಲ್ಲಿ ಶೌಚಾಲಯ, ನೀರಿನ ಟ್ಯಾಂಕ್ ವ್ಯವಸ್ಥೆಗಳನ್ನು ಮಾಲ್ದಾರೆ ಗ್ರಾಮ ಪಂಚಾಯಿತಿ ನೀಡಿದೆೆ. ವ್ಯಾಪ್ತಿಯಲ್ಲಿ ನಾಲ್ಕು ಹಾಡಿಗಳಿದ್ದು ಹಾಗೂ ಗಡಿ ಪ್ರದೇಶದ ಹಿನ್ನೆಲೆಯಲ್ಲಿ ಪೊಲೀಸರ ಸೇವೆ ಅವಶ್ಯಕತೆ ಇರುವುದರಿಂದ ಗ್ರಾಮಸ್ಥರು ಸಹಕಾರ ನೀಡಿದ್ದರು. ಆದರೆ ಗ್ರಾಮಸ್ಥರ ನೆರವಿನಿಂದ ಸ್ಥಾಪಿಸಲಾದ ಕೇಂದ್ರವನ್ನು ದಿಢೀರನೆ ಸ್ಥಗಿತಗೊಳಿಸಿರುವ ಮೂಲಕ ಗ್ರಾಮಸ್ಥರ ಕೊಡುಗೆಯನ್ನು ವ್ಯರ್ಥಗೊಳಿಸಿದ್ದಾರೆ. -ವರದಿ: ವಾಸು