ಮಡಿಕೇರಿ, ಫೆ. ೨೬ : ದೇಶದ ಕಾಫಿ ಉತ್ಪಾದನೆಯಲ್ಲಿ ಜಿಲ್ಲಾ ಮಟ್ಟದ ಅಂಕಿ ಅಂಶಗಳ ಅನ್ವಯ ಕೊಡಗು ಜಿಲ್ಲೆ ಅತ್ಯಧಿಕ ಉತ್ಪಾದನೆಯ ಪ್ರಮಾಣದಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯಮಟ್ಟದಲ್ಲಿಯೂ ಅದ್ವಿತೀಯ ಸ್ಥಾನದಲ್ಲಿ ಮುಂದುವರೆದಿದೆ. ಜಿಲ್ಲೆಯ ಕೆಲವು ಪರಿಣಿತರ ಪ್ರಕಾರ ಈ ವರ್ಷ ಜನವರಿ ಬಳಿಕದ ಅಕಾಲಿಕ ಮಳೆಯಿಂದ ಉತ್ಪಾದನೆಗೆ ಧಕ್ಕೆ ಉಂಟಾಗಿದೆ. ಆದರೆ ಕಾಫಿ ಮಂಡಳಿಯ ಅಂಕಿ ಅಂಶದಲ್ಲಿ ಪ್ರಸಕ್ತ ಸಾಲಿನಲ್ಲಿಯೂ ಕೊಡಗು ಜಿಲ್ಲೆ ಅತ್ಯುನ್ನತ ಸ್ಥಾನದಲ್ಲಿದೆ.

೨೦೨೨-೨೩ರಲ್ಲಿ ಭಾರತದಲ್ಲಿ ಕಾಫಿಯ ಒಟ್ಟು ಉತ್ಪಾದನಾ ಪ್ರಮಾಣ ೩,೫೨,೦೦೦ ಮೆಟ್ರಿಕ್ ಟನ್. ಈ ಪೈಕಿ ರೋಬಸ್ಟಾ ಉತ್ಪಾದನೆ ಅತ್ಯಧಿಕವಾಗಿದೆ. ೨,೬೨,೦೦೦ ಮೆಟ್ರಿಕ್ ಟನ್‌ನಷ್ಟು ರೋಬಸ್ಟಾ ಕಾಫಿ ಉತ್ಪಾದಿಸಲ್ಪಟ್ಟಿದ್ದು, ಅರೇಬಿಕಾ ಕೇವಲ ೧ ಲಕ್ಷ ಟನ್‌ಗಳಷ್ಟು ಉತ್ಪಾದನೆಗೊಂಡಿದೆ. ಕರ್ನಾಟಕದಲ್ಲಿ ದೇಶದ ಒಟ್ಟು ಕಾಫಿ ಉತ್ಪಾದನೆಯ ಪ್ರಮಾಣದಲ್ಲಿ ಶೇ. ೭೦ರಷ್ಟು ಪ್ರಮಾಣದ ಕಾಫಿ ಉತ್ಪತ್ತಿಯಾಗಿದೆ. ಕರ್ನಾಟಕದಲ್ಲಿ ೨,೪೮,೦೨೦ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಗೊಂಡಿದ್ದು, ಈ ಪೈಕಿ ಕೊಡಗು ಜಿಲ್ಲೆಯೊಂದರಲ್ಲಿಯೇ ೧,೨೮,೭೨೦ ಮೆಟ್ರಿಕ್ ಟನ್ ಕಾಫಿ ಫಸಲು ಕಂಡಿವೆ. ಇದು ರಾಜ್ಯದ ಉತ್ಪಾದನೆಯ ಶೇ. ೫೧ರಷ್ಟಾಗಿದ್ದು, ದೇಶದ ಉತ್ಪಾದನೆಯ ಪ್ರಮಾಣದಲ್ಲಿ ಕೊಡಗು ಜಿಲ್ಲೆಯ ಕೊಡುಗೆ ಶೇ. ೩೭ರಷ್ಟು ಎಂಬುದು ಗಮನಾರ್ಹವಾಗಿದೆ. ಕರ್ನಾಟಕದಲ್ಲಿ ಕೂಡ ರೋಬಸ್ಟಾ ಬೆಳೆ ಪ್ರಮಾಣ ಹೆಚ್ಚಿದೆ. ೧,೭೬,೦೦೦ ಮೆಟ್ರಿಕ್ ಟನ್ ರೋಬಸ್ಟಾ ಬೆಳೆಯಾಗಿದ್ದರೆ, ೭೨,೦೨೦ ಮೆಟ್ರಿಕ್ ಟನ್ ಅರೇಬಿಕಾ ಬೆಳೆಯಾಗಿದೆ. ಕೊಡಗಿನಲ್ಲಿಯೂ ರೋಬಸ್ಟಾ ಬೆಳೆ ಅತ್ಯಧಿಕವಾಗಿದೆ. ೧,೦೯,೬೦೦ ಮೆಟ್ರಿಕ್ ಟನ್ ರೋಬಸ್ಟಾ ಕೊಡಗಿನಲ್ಲಿ ಬೆಳೆಯಲ್ಪಟ್ಟಿದ್ದು, ಅರೇಬಿಕಾದ ಪ್ರಮಾಣ ೧೯,೧೨೦ ಮೆಟ್ರಿಕ್ ಟನ್‌ಗಳಾಗಿದೆ. ಕರ್ನಾಟಕದಲ್ಲಿ ಕೊಡಗು ಸೇರಿದಂತೆ ಒಟ್ಟು ೩ ಜಿಲ್ಲೆಗಳಲ್ಲಿ ಮಾತ್ರ ಕಾಫಿ ಬೆಳೆಯಲಾಗುತ್ತಿದೆ. ಕೊಡಗು ಪ್ರಥಮ ಸ್ಥಾನದಲ್ಲಿದ್ದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ೭೨,೪೫೦ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಗೊಂಡಿದ್ದು ದ್ವಿತೀಯ ಸ್ಥಾನದಲ್ಲಿದೆ. ಹಾಸನದಲ್ಲಿ ೩೬,೮೬೦ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಗೊಂಡು ತೃತೀಯ ಸ್ಥಾನದಲ್ಲಿದೆ.

ದೇಶದಲ್ಲಿ ಕರ್ನಾಟಕದ ಬಳಿಕ ಕೇರಳ ರಾಜ್ಯವು ಅಧಿಕ ಉತ್ಪಾದನಾ ಪ್ರಮಾಣವನ್ನು ಹೊಂದಿದೆ. ಕೇರಳ ರಾಜ್ಯದಲ್ಲಿ ೨೦೨೨-೨೩ರಲ್ಲಿ ೭೨,೪೨೫ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಗೊಂಡಿದ್ದು, ಅಲ್ಲಿಯೂ ರೋಬಸ್ಟಾ ಬೆಳೆ ೭೦,೪೬೦ ಮೆಟ್ರಿಕ್ ಟನ್‌ಗಳಾಗಿದ್ದು, ಆ ರಾಜ್ಯದಲ್ಲಿಯೂ ಅತ್ಯಲ್ಪ ಪ್ರಮಾಣದಲ್ಲಿ ಅರೇಬಿಕಾ ಬೆಳೆಯಲಾಗುತ್ತಿದೆ.

ದೇಶದಲ್ಲಿ ಮೂರನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ೧೮,೭೦೦ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಗೊಂಡಿದೆ. ಆದರೆ ಆ ರಾಜ್ಯದಲ್ಲಿ ಅರೇಬಿಕಾ ಬೆಳೆಯನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಅದರ ಉತ್ಪಾದನಾ ಪ್ರಮಾಣ ೧೩,೨೫೦ ಮೆಟ್ರಿಕ್ ಟನ್. ಅದೇ ರೀತಿ ನಾಲ್ಕನೇ ಸ್ಥಾನ ಹೊಂದಿರುವ ಆಂಧ್ರಪ್ರದೇಶದಲ್ಲಿಯೂ ಅಲ್ಲಿನ ಒಟ್ಟು ಕಾಫಿ ಉತ್ಪಾದನಾ ಪ್ರಮಾಣವಾದ ೧೨,೨೬೫ ಮೆಟ್ರಿಕ್ ಟನ್‌ಗಳ ಪೈಕಿ ಅರೇಬಿಕಾ

(ಮೊದಲ ಪುಟದಿಂದ) ಬೆಳೆಯು ೧೨,೨೨೫ ಮೆಟ್ರಿಕ್ ಟನ್ ಹೊಂದಿದೆ. ಒರಿಸ್ಸಾದಲ್ಲಿ ಅರೇಬಿಕಾ ಬೆಳೆ ಮಾತ್ರ ಬೆಳೆಯುತ್ತಿದ್ದು, ಅಲ್ಲಿನ ಪ್ರಮಾಣ ೪೬೫ ಮೆಟ್ರಿಕ್ ಟನ್. ಈಶಾನ್ಯ ಪ್ರದೇಶದಲ್ಲಿ ಒಟ್ಟು ಕೇವಲ ೧೨೫ ಮೆಟ್ರಿಕ್ ಟನ್ ಬೆಳೆÀಯುತ್ತಿದ್ದು, ಅದರಲ್ಲಿ ಬಹುತೇಕ ಅರೇಬಿಕಾ ಬೆಳೆಯಾಗಿದೆ.

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ (ಸಿಪಿಎ) ಅಧ್ಯಕ್ಷ ನಂದಾ ಬೆಳ್ಯಪ್ಪ ಅವರ ಪ್ರಕಾರ ಜನವರಿ ಬಳಿಕ ಬಂದ ಅಕಾಲಿಕ ಮಳೆಯಿಂದಾಗಿ ಈ ಬಾರಿ ಕೊಡಗಿನ ಉತ್ಪಾದನಾ ಪ್ರಮಾಣದಲ್ಲಿ ಇಳಿಮುಖಗೊಳ್ಳಬಹುದು ಎನ್ನುವ ಆತಂಕ ವ್ಯಕ್ತಪಡಿಸಿದರು. ಅಲ್ಲದೆ ಇತ್ತೀಚೆಗೆ ಕಾಫಿ ಕಣದಿಂದಲೇ ಒಣಗಲು ಹಾಕಿರುವಂತಹ ಕಾಫಿಯನ್ನು ದುಷ್ಕರ್ಮಿಗಳು ಕಳವು ಮಾಡುತ್ತಿರುವ ಪ್ರಕರಣದಿಂದಾಗಿಯೂ ಬೆಳೆಯ ಪ್ರಮಾಣಕ್ಕೆ ಧಕ್ಕೆ ಉಂಟಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಈಗಾಗಲೇ ಸಂಸ್ಥೆಯಿAದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಲಾಗಿದ್ದು, ಅವರು ಈ ಬಗ್ಗೆ ಸ್ಪಂದಿಸಿದ್ದಾರೆ ಎಂದು ನಂದಾ ಮಾಹಿತಿಯಿತ್ತರು.

ಅಂದಾಜು ಕಾಫಿ ಉತ್ಪಾದನೆ

ಕಾಫಿ ಮಂಡಳಿಯು ೨೦೨೩-೨೪ರಲ್ಲಿ ಕಾಫಿ ಉತ್ಪಾದನಾ ಪ್ರಮಾಣದ ಸಮೀಕ್ಷೆ ನಡೆಸಿದೆ. ಅದರನ್ವಯ ದೇಶದಲ್ಲಿ ಪ್ರಸಕ್ತ ಸಾಲಿನಲ್ಲಿ ೩,೭೪,೨೦೦ ಟನ್ ಕಾಫಿ ಉತ್ಪಾದನೆಯಾಗಲಿದ್ದು, ಈ ಪೈಕಿ ೨,೬೧,೨೦೦ ಮೆಟ್ರಿಕ್ ಟನ್ ರೋಬಸ್ಟಾ ಹಾಗೂ ೧,೧೩,೦೦೦ ಮೆಟ್ರಿಕ್ ಟನ್ ಅರೇಬಿಕಾ ಆಗಿದೆ. ಕರ್ನಾಟದಲ್ಲಿಯೂ ಪ್ರಸಕ್ತ ಸಾಲಿನಲ್ಲಿ ೧,೯೪,೯೨೫ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಗೊಳ್ಳಲಿದೆ. ಈ ಪೈಕಿ ೧,೮೪,೯೨೫ ಮೆಟ್ರಿಕ್ ಟನ್ ರೋಬಸ್ಟಾ ಹಾಗೂ ೮೧,೯೬೦ ಮೆಟ್ರಿಕ್ ಟನ್ ಅರೇಬಿಕಾ ಆಗಿದೆ. ಇದು ದೇಶದ ಒಟ್ಟು ಉತ್ಪಾದನೆಯ ಶೇ. ೭೧ರಷ್ಟಾಗಿದೆ. ಕೊಡಗು ಜಿಲ್ಲೆಯಲ್ಲಿಯೂ ಪ್ರಸಕ್ತ ಸಾಲಿನಲ್ಲಿ ೯೩,೦೫೦ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಗೊಳ್ಳಲಿದ್ದು, ಇದು ರಾಜ್ಯದ ಪ್ರಮಾಣದಲ್ಲಿ ಶೇ. ೪೮ರಷ್ಟಾಗಿದೆ. ಪ್ರಸಕ್ತ ಸಾಲಿನಲ್ಲಿ ದೇಶದ ಪ್ರಮಾಣದಲ್ಲಿ ಶೇ ೩೪ರಷ್ಟಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಕೊಡಗಿನಲ್ಲಿ ಕಾಫಿ ಉತ್ಪಾದನಾ ಪ್ರಮಾಣ ತುಸು ಕಡಿಮೆ ಯಾಗಲಿರುವುದು ಕಂಡುಬAದಿದೆ.

ಕೆಲವು ಪರಿಣಿತರ ಅನಿಸಿಕೆಯಂತೆ ಇದೀಗ ಕಾಫಿಗೆ ಉತ್ತಮ ದರ ಲಭ್ಯವಾಗುತ್ತಿದ್ದು, ಬೆಳೆಗಾರರು ಮಾರಾಟಗೊಳಿಸಲು ಸಕಾಲಿಕವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಗೊಂಡಿದೆ.