ಅನಿಲ್ ಹೆಚ್.ಟಿ.
ಸುಡುಬಿಸಿಲಿನಲ್ಲಿ ನೂರಾರು ವಿದ್ಯಾರ್ಥಿಗಳೊಂದಿಗೆ.. ಹೆಜ್ಜೆ ಹಾಕುತ್ತಾ. ಕಾಡ್ಗಿಚ್ಚಿನಿಂದ ಕಾಡನ್ನು ರಕ್ಷಿಸಿ, ಅರಣ್ಯದಲ್ಲಿ ಬೆಂಕಿಗೆ ಅವಕಾಶ ಮಾಡಬೇಡಿ ಎಂಬ ಸಂದೇಶ ನೀಡುತ್ತಿದ್ದ ಎತ್ತರದ ಜೀವಿಯನ್ನು ಪ್ರತೀವರ್ಷದಂತೆ ಈ ವರ್ಷ ಕೊಡ ಗಿನ ಜನತೆ ಕಾಣಲು ಸಾಧ್ಯವಿಲ್ಲ.
ನೀಳಕಾಯದ ಕೊಟ್ರಂಗಡ ಚಿಣ್ಣಪ್ಪ ಎಂಬ ಕಾಡಿನ ಜೀವಿ ಕಾಡಿ ನಿಂದ ಮತ್ತೆ ಮರಳಿ ಬಾರದ ಲೋಕಕ್ಕೆ.. ತೆರಳಿಬಿಟ್ಟಿದ್ದಾರೆ. ಜೀವ ಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ನಾಗರಹೊಳೆಗೆ ಚಿಣ್ಣಪ್ಪ ವಿದಾಯ ಹೇಳಿಬಿಟ್ಟಿದ್ದಾರೆ.
ನಾಗರಹೊಳೆ ಸರಹದ್ದಿಗೆ ಹೊಂದಿ ಕೊಂಡAತಿರುವ ಕುಮಟೂರು ಗ್ರಾಮದಲ್ಲಿ ೧೯೪೧ರಲ್ಲಿ ಜನಿಸಿದ ಕೆ.ಎಂ. ಚಿಣ್ಣಪ್ಪ ಪ್ರಕೃತ್ತಿಯ ಮಡಿಲಲ್ಲೇ ಬೆಳೆದವರು. ಕಾಡಿನಂತೆ ಹುಲಿ, ಚಿರತೆ ಆನೆಗಳು ಚಿಣ್ಣಪ್ಪ ಅವರಿಗೆ ಹೊಸದ್ದೇ ನಲ್ಲ. ಅದರೊಂದಿಗೆ ಬೆಳೆದವರು ಚಿಣ್ಣಪ್ಪ.
ಸೇನೆಯಲ್ಲಿದ್ದ ತಂದೆಯ ಬಳಿ ಯಿದ್ದ ಕೋವಿಯನ್ನು ನೋಡಿಯೇ ಚಿಣ್ಣಪ್ಪ ಅವರಲ್ಲಿಯೂ ಕೋವಿ ಬಗ್ಗೆ ಒಲವು ಮೂಡಿರಬೇಕು. ಹೀಗಾಗಿಯೇ ಕಾಲೇಜು ಶಿಕ್ಷಣ ಪಡೆಯಲಾಗದ ಚಿಣ್ಣಪ್ಪ ತಂದೆಯAತೆ ಕೋವಿ ಕೈಗೆತ್ತಿ ಕೊಂಡರು. ವ್ಯತ್ಯಾಸ ಇಷ್ಟೇ. ತಂದೆ ದೇಶ ರಕ್ಷಣೆಗೋಸ್ಕರ ಕೋವಿ ಹಿಡಿದಿ ದ್ದರೆ ಮಗ ಚಿಣ್ಣಪ್ಪ ಕಾಡಿನ ಸಂರಕ್ಷ ಣೆಗಾಗಿ ಕೋವಿ ಹಿಡಿದುಕೊಂಡರು.
೧೯೬೭ರಲ್ಲಿ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಪಡೆದ ಚಿಣ್ಣಪ್ಪ ಅಂದಿ ನಿಂದಲೇ ಕಾಡಿನ ಜೀವವಾಗಿಬಿಟ್ಟರು. ಸರಿಸಮಾರು ಹಲವು ವರ್ಷಗಳ ಕಾಲ ನಾಗರಹೊಳೆಯ ಸಂರ ಕ್ಷಣೆಗಾಗಿ ಚಿಣ್ಣಪ್ಪ ತನ್ನ ಜೀವನ ಮುಡಿ ಪಾಗಿಟ್ಟರು.
ಅರಣ್ಯಾಧಿಕಾರಿಯಾಗಿದ್ದುಕೊಂಡು ನಾಗರಹೊಳೆ ಕಾಡನ್ನು ಬೇಟೆಗಾರ ರಿಂದ, ಮರಗಳ್ಳರಿಂದ, ಮರ ಕಡಿತದಿಂದ, ಭೂ ಅತಿಕ್ರಮಣ ಕಾರರಿಂದ ದೂರವಿಟ್ಟರು. ವನ್ಯ ಜೀವಿಗಳನ್ನು ಹಂತಕರಿAದ ರಕ್ಷಿಸಲು ವಿವಿಧ ಕಾರ್ಯಯೋಜನೆ ಹಮ್ಮಿ ಕೊಂಡರು. ಕಾಡಿನ ವ್ಯಾಪ್ತಿಯ ಆದಿವಾಸಿಗಳೂ ಸೇರಿದಂತೆ ಅನೇಕರು ನಾಗರಹೊಳೆ ಕಾನನದೊಳಕ್ಕೆ ನುಗ್ಗಿ ಜಾಗ ಅತಿಕ್ರಮಣ ಮಾಡುವುದನ್ನು ತಪ್ಪಿಸಿದರು. ಈ ನಾಗರಹೊಳೆ.. ಕಾಡಿನ ಪ್ರಾಣಿಗಳಿಗೆ ಸೇರಿದ್ದೇ ಹೊರತು ಮನುಷ್ಯ ಪ್ರಾಣಿಗಳದ್ದಲ್ಲ ಎಂದು ಅಬ್ಬರಿಸಿದರು.
ಯಾರೂ ಕೂಡ ಕಾಡಿನ ವಿಚಾರದಲ್ಲಿ ಚಿಣ್ಣಪ್ಪ ಅವರೊಂದಿಗೆ ವಾದ ಮಾಡಲಾಗುತ್ತಿರಲಿಲ್ಲ. ಯಾಕೆಂ ದರೆ, ಕಾಡಿನ ಬಗ್ಗೆ ಅಷ್ಟೊಂದು ಸಮಗ್ರ ಮಾಹಿತಿ ಅವರಲ್ಲಿತ್ತು. ವಿದ್ಯಾರ್ಥಿಗಳು, ಆಸಕ್ತರು ನಾಗರಹೊಳೆಗೆ ತೆರಳಿ ಮಾಹಿತಿ ಕೇಳಿದರೆ ಸಾಕು. ಯಾವುದೇ ಪ್ರೊಫೆಸರ್ಗೆ ಕಮ್ಮಿಯಿಲ್ಲದಂತೆ ವನ ಮತ್ತು ವನ್ಯಜೀವಿಗಳ ಬಗ್ಗೆ ಗಂಟೆಗಟ್ಟಲೆ ಮಾಹಿತಿ ನೀಡುತ್ತಿದ್ದರು.
ವನ ಮತ್ತು ವನವಾಸಿ ಪ್ರಾಣಿಗ ಳನ್ನು ಹೊರತುಪಡಿಸಿ ಚಿಣ್ಣಪ್ಪ ಬೇರೆ ಯಾವುದೇ ವಿಚಾರದ ಬಗ್ಗೆಯೂ ಮಾತನಾಡಿದ್ದಿಲ್ಲ. ಅಂಥ ವಿಚಾರಗಳ ಬಗ್ಗೆ ಅವರಿಗೆ ಆಸಕ್ತಿಯೂ ಇರಲಿಲ್ಲ.
ಚಿಣ್ಣಪ್ಪ ಅವರ ಈ ಕರ್ತವ್ಯ ನಿಷ್ಟೆಗಾಗಿಯೇ ಅವರಿಗೆ ಮುಖ್ಯ ಮಂತ್ರಿಗಳ ಪ್ರತಿಷ್ಠಿತ ಪದಕ ೧೯೮೨ ರಲ್ಲಿ ದೊರಕಿತು. ನ್ಯಾಷ ನಲ್ ಜಿಯಾಗ್ರಫಿ ಪ್ರಶಸ್ತಿಯೂ ಕಾಡಿನ ಸಂರಕ್ಷಣೆಗಾಗಿ ದೊರ ಕಿತು. ಪ್ರಶಸ್ತಿಯಿಂದ ದೊರಕಿದ ಹಣವನ್ನು ಮತ್ತೆ ಕಾಡಿನ ಸಂರಕ್ಷಣೆಯ ಕಾರ್ಯಕ್ಕಾಗಿಯೇ ಬಳಸಿದರು.
ಚಿಣ್ಣಪ್ಪ ಅವರಿಗೆ ಶತ್ರು ಪಡೆ ಬಹಳ ದೊಡ್ಡದಾಗಿಯೇ ಇತ್ತು. ಪ್ರಾಣಿ ಬೇಟೆಗಾರರು, ಅರಣ್ಯ ಒತ್ತುವರಿದಾರರ ಕಿರುಕುಳ, ಮಾನಸಿಕ ಮತ್ತು ದೈಹಿಕ ಹಿಂಸೆಗಳನ್ನು ಚಿಣ್ಣಪ್ಪ ಸಹಿಸಿಕೊಂಡೇ ಜೀವಿಸಿದ್ದರು. ಹೇಗಾದರೂ ಮಾಡಿ ಚಿಣ್ಣಪ್ಪ ಅವರನ್ನು ನಾಗರಹೊಳೆ ಯಿಂದ ಹೊರದಬ್ಬಲು ಷಡ್ಯಂತ್ರಗಳು ಸಾಕಷ್ಟು ರೀತಿಯಲ್ಲಿ ನಡೆದವು. ಇವುಗಳಿಗೆ ಎದೆಗುಂದದ ಚಿಣ್ಣಪ್ಪ ಧೈರ್ಯ ವಾಗಿಯೇ ಎಲ್ಲಾ ಹಿಂಸೆಗಳನ್ನು, ಸವಾಲುಗಳನ್ನು ಎದುರಿಸಿದರು.
ಇದೆಲ್ಲದರ ಪರಿಣಾಮ ಎಂಬAತೆ ಕ್ಷುಲ್ಲಕ ವಿಚಾರಗಳಿಗೆ ನಾಗರಹೊಳೆ ಬೆಂಕಿಗೆ ಆಹುತಿಯಾಗಿತ್ತು. ಅದರ ಹೊಣೆಯನ್ನು ಚಿಣ್ಣಪ್ಪ ತಲೆಗೆ ಕಟ್ಟುವ ಪ್ರಯತ್ನಗಳು ನಡೆದವು. ಚಿಣ್ಣಪ್ಪ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಸುಳ್ಳು ದೂರಿನಿಂದಾಗಿ ಕೆ.ಎಂ. ಚಿಣ್ಣಪ್ಪ ಎಂಬ ಕಾಡಿನ ಸಂರಕ್ಷಕ ೧೨ ದಿನಗಳ ಕಾಲ ಸೆರೆಮನೆ ವಾಸವನ್ನೂ ಅನುಭವಿಸುವಂಥ ಘಟನಾವಳಿಗಳು ನಾಗರಹೊಳೆಯಲ್ಲಿ ೮೦ರ ದಶಕದಲ್ಲಿ ಸಂಭವಿಸಿದ್ದವು. ನಿರಪರಾಧಿ ಎಂದು ನ್ಯಾಯಾಲಯ ಆದೇಶಕ್ಕೆ ಹೆಚ್ಚು ದಿನ ಬೇಕಾಗಲಿಲ್ಲ. ಆದರೂ ಸಾಲು ಸಾಲಾದ ಹಿಂಸೆಯಿAದ ಚಿಣ್ಣಪ್ಪ ಬೇಸತ್ತ ಚಿಣ್ಣಪ್ಪ ಕೊನೆಗೂ ಮಾನಸಿಕವಾಗಿ ಜರ್ಜರಿತರಾಗಿ ಅರಣ್ಯ ಇಲಾಖೆಯ ಸೇವೆಗೆ ವಿದಾಯ ಹೇಳಲು ಮುಂದಾದರು.
ಸರ್ಕಾರಿ ಕರ್ತವ್ಯದಿಂದ ದೂರ ವಾದರೂ ನಾಗರಹೊಳೆ ವ್ಯಾಪ್ತಿಯಿಂದ ಚಿಣ್ಣಪ್ಪ ಹೊರಹೋಗಲಿಲ್ಲ. ಅಲ್ಲಿದ್ದು ಕೊಂಡೇ ಪ್ರಾಣಿಹಂತಕರನ್ನು ಕಾಡಿನೊ ಳಕ್ಕೆ ಬಾರದಂತೆ ನೋಡಿಕೊಂಡರು. ನಾಗರಹೊಳೆಯ ಸಂರಕ್ಷಣೆಯೇ ಅವರ ಮುಖ್ಯ ಕಾಯಕವಾಗಿತ್ತು.
ವೈಲ್ಡ್ ಲೈಫ್ ಫಸ್ಟ್ ಎಂಬ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷರಾದ ಚಿಣ್ಣಪ್ಪ ಈ ಸಂಸ್ಥೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಕಾಡು ಸಂರಕ್ಷಣೆಯ ನಿಟ್ಟಿನಲ್ಲಿ ಹಮ್ಮಿಕೊಂಡು ಅದರಲ್ಲಿ ಯಶಸ್ವಿಯಾದರು.
ಪ್ರಾಣಿಗಳನ್ನು ಕೊಲ್ಲುವುದನ್ನೇ ವಿರೋಧಿಸುತ್ತಿದ್ದ ಚಿಣ್ಣಪ್ಪ ಸಸ್ಯಾಹಾರಿ ಯಾಗಿಯೇ ಜೀವಿಸಿದ್ದರು. ಕಾಡಿನ ರಕ್ಷಣೆಗೆ ಏನು ಮಾಡಬೇಕು ಎಂದು ಚಿಣ್ಣಪ್ಪ ಅವರನ್ನು ಪ್ರಶ್ನಿಸಿದ್ದೆ. ಮೊದಲು ಮಾನವನ ಹಸ್ತಕ್ಷೇಪ ಬಿಟ್ಟುಬಿಡಿ, ಕಾಡನ್ನು ಕಾಡಾಗಿಯೇ ನೋಡಿ. ಕಾಡು ನೋಡಲು ಬನ್ನಿ. ಕಾಡನ್ನು ಕಾಡಲು ಬರಬೇಡಿ ಎಂದು ಬಹಳ ಸರಳವಾಗಿ ಚಿಣ್ಣಪ್ಪ ಹೇಳಿದ್ದರು.
ಕೋಪಿಷ್ಠ ಚಿಣ್ಣಪ್ಪ ಅವರ ಜತೆ ಮಾತನಾಡುತ್ತಿದ್ದವರಿಗೆ ಸಾಕಷ್ಟು ಸಹನೆ ಅಗತ್ಯವಾಗಿತ್ತು. ಮಾತು ಕೊಂಚ ತಪ್ಪಿದರೂ ಉರಿದುಬೀಳುತ್ತಿದ್ದರು. ಕಾಡನ್ನು ಕಾಪಾಡಲಾಗದ ಸರ್ಕಾರ, ರಾಜಕಾರಣಿಗಳು, ಜನರ ಬಗ್ಗೆ ಅವರಿಗೆ ಸಾತ್ವಿಕ ಕೋಪವಿತ್ತು.
ಆನೆ ಮತ್ತು ಮಾನವನ ಸಂಘರ್ಷ ಖಂಡಿತವಾಗಿಯೂ ನಮ್ಮ ಜನರನ್ನು ಹೈರಾಣ ಮಾಡುತ್ತದೆ ಎಂದು ಚಿಣ್ಣಪ್ಪ ಹೇಳಿದ್ದು ೧೯೯೦ ರ ಸುಮಾರಿಗೆ. ಕಾಡಿನಲ್ಲಿ ಆಹಾರ ಸಿಗದೆ ಆನೆಗಳು ಬೇರೊಂದು ಕಾಡಿಗೆ ಹೆಜ್ಜೆ ಹಾಕುವ ಎಲಿಫೆಂಟ್ ಕಾರಿಡಾರ್ನ್ನು ನಮ್ಮ ಸ್ವಾರ್ಥ ಜನ ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ. ಕಾಡಾನೆಗಳು ಊರಿಗೆ ನುಗ್ಗಿ ಜನರನ್ನು ಕೊಲ್ಲುವ ದಿನಗಳನ್ನು ನಾವು ನೋಡಬೇಕಾಗುತ್ತದೆ ಎಂದು ಅಂದೇ ಚಿಣ್ಣಪ್ಪ ಎಚ್ಚರಿಸಿದ್ದರು. ಈ ಎಚ್ಚರಿಕೆ ಆಗ ಯಾರಿಗೂ ಅರ್ಥವಾಗಲಿಲ್ಲ.
ಕಾಡನ್ನು ಕಡಿಯಬೇಡಿ. ಮತ್ತೆ ಕಾಡು ಸೃಷ್ಟಿಸಲು ನಮಗೆ ಯಾರಿಗೂ ಆಗುವುದಿಲ್ಲ. ದೇವರನ್ನು ಪೂಜಿಸುತ್ತೀರಿ. ದೇವರ ಸೃಷ್ಟಿಯಾದ ಕಾಡನ್ನು ಕಡಿದು ಹಿಂಸೆ ಮಾಡಬೇಡಿ, ನಾಶವಾಗುತ್ತೀರಿ ಎಂದು ಚಿಣ್ಣಪ್ಪ ಖಡಕ್ ಆಗಿ ಹೇಳಿದಾಗ ನಕ್ಕವರೇ ಹೆಚ್ಚು. ಅವರ ಮುನ್ನೆಚ್ಚರಿಕೆಯ ಮಾತು ಯಾರಿಗೂ ಅರ್ಥವಾಗಲಿಲ್ಲ.
ಈಗ ಚಿಣ್ಣಪ್ಪ ನಮ್ಮನ್ನು ಅಗಲಿದ್ದಾರೆ. ನಾಗರಹೊಳೆ ಕಾಡಿನಲ್ಲಿ ಮೌನ ಆವರಿಸಿದೆ. ಪ್ರಾಣಿಗಳು ಮೂಕವಾಗಿ ರೋಧಿಸುತ್ತಿರಬಹುದು. ನಾಗರಹೊಳೆಗೆ ಒಬ್ಬರೇ ಚಿಣ್ಣಪ್ಪ, ಅಂಥ ಕಾಡಿನ ಜ್ಞಾನಿ ಮತ್ತೋರ್ವರು ಬರುವುದು ಕಷ್ಟ ಕಷ್ಟ.
ಮನುಷ್ಯನಿಲ್ಲದೇ ಕಾಡು ಉಳಿದುಕೊಳ್ಳುತ್ತದೆ. ಆದರೆ ಕಾಡಿಲ್ಲದೇ ಮನುಷ್ಯನ ಉಳಿವಿಲ್ಲ ಎಂಬ ಚಿಣ್ಣಪ್ಪ ಅವರ ಅತ್ಯಮೂಲ್ಯ ಸಂದೇಶ ಮಾತ್ರ ಸದಾ ಜೀವಂತವಾಗಿರುತ್ತದೆ.