ಕುಶಾಲನಗರ, ಫೆ. ೨೭: ಕುಶಾಲನಗರ ಪುರಸಭೆಯ ೨೦೨೪-೨೫ ರ ಆಯ ವ್ಯಯ ಮಂಡನೆ ಯಾಗಿದ್ದು ೯ ಲಕ್ಷ ೨೩ ಸಾವಿರ ರೂಗಳ ಉಳಿತಾಯ ಬಜೆಟ್ ಅನ್ನು ಉಪ ವಿಭಾಗಾಧಿಕಾರಿ ಹಾಗೂ ಕುಶಾಲನಗರ ಪುರಸಭೆ ಆಡಳಿತಾಧಿಕಾರಿಯಾಗಿರುವ ವಿನಾಯಕ ನಾರ್ವಡೆ ಅವರು ಮಂಡಿಸಿದರು.
ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ೨೦೨೪ -೨೫ ನೇ ಸಾಲಿಗೆ ನಿರೀಕ್ಷಿತ ಆದಾಯ ೨೯ ಕೋಟಿ ೭೩ ಲಕ್ಷ ೯೩ ಸಾವಿರ ಘೋಷಣೆ ಮಾಡಿದ್ದು ನಿರೀಕ್ಷಿತ ಖರ್ಚು ೨೯ ಕೋಟಿ ೬೪ ಲಕ್ಷ ೭೦ ಸಾವಿರ ಅಂದಾಜಿಸಲಾಗಿದೆ.
ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕಾಗಿ ಸಿ ಎ ನಿವೇಶನವನ್ನು ಒದಗಿಸಿ ತಾಲೂಕು ಗ್ರಂಥಾಲಯ ನಿರ್ಮಿಸಲು ಉದ್ದೇಶ ಹೊಂದಲಾಗಿದೆ ಎಂದು ವಿನಾಯಕ ನಾರ್ವಡೆ ತಿಳಿಸಿದ್ದಾರೆ.
ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಸಮುದಾಯ ಭವನಗಳನ್ನು ಅಭಿವೃದ್ಧಿಪಡಿಸಲು ಒಂದು ಕೋಟಿ, ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ವಾಣಿಜ್ಯ ಕಟ್ಟಡಕ್ಕೆ ಮೂರು ಕೋಟಿ ರೂಪಾಯಿ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಸ್ಮಶಾನ ಅಭಿವೃದ್ಧಿಗಾಗಿ ಮೂವತ್ತು ಲಕ್ಷ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಲಭ್ಯವಿರುವ ಜಾಗಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ೫೦ ಲಕ್ಷ ಮೀಸಲಿರಿಸಲಾಗಿದೆ ಎಂದು ಹೇಳಿದ ಉಪವಿಭಾಗಾಧಿಕಾರಿಗಳು ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಆದ್ಯತೆ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಬಜೆಟ್ ವಿವರ ನೀಡಿದ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ಕುಶಾಲನಗರ ಪುರಸಭೆಗೆ ಸೇರ್ಪಡೆಗೊಂಡ ಮುಳ್ಳುಸೋಗೆ ಪೂರ್ಣ ಕಂದಾಯ ಗ್ರಾಮ ಹಾಗೂ ಮಾದಪಟ್ಟಣ ಗ್ರಾಮದ ಭಾಗಶಃ ಪ್ರದೇಶಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
ಈ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಆದ್ಯ ಕರ್ತವ್ಯವಾಗಿದ್ದು ರಸ್ತೆ ನೀರು ಚರಂಡಿ ಬೀದಿ ದೀಪ ವ್ಯವಸ್ಥೆಯೊಂದಿಗೆ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ವೈಜ್ಞಾನಿಕ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಎಲ್ಲಾ ವ್ಯವಸ್ಥೆಗಳಿಗೆ ತಕ್ಕಂತೆ ಪುರಸಭೆಯನ್ನು ಆರ್ಥಿಕವಾಗಿ ಸದೃಢಗೊಳಿಸುವುದು, ಅದಕ್ಕೆ ತಕ್ಕ ಆದಾಯ ಮೂಲಗಳಾದ ತೆರಿಗೆ ಸಂಗ್ರಹ ಮತ್ತು ಅನುದಾನವನ್ನು ಪಡೆಯುವಲ್ಲಿ ಶ್ರಮ ವಹಿಸಲಾಗುವುದು ಎಂದು ತಿಳಿಸಿದ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್, ಬಜೆಟ್ ಒಳಗೊಂಡು ಬರುವ ಆದಾಯಗಳಲ್ಲಿ ಆಸ್ತಿ ತೆರಿಗೆ ವಾಣಿಜ್ಯ ಮಳಿಗೆ ಬಾಡಿಗೆ ಉದ್ದಿಮೆ ಪರವಾನಿಗೆ ಮಾರುಕಟ್ಟೆ ಬಾಡಿಗೆಗಳು ಹಾಗೂ ಇತರೆ ಶುಲ್ಕಗಳು ಮತ್ತು ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗಳು, ಹಣಕಾಸು ಆಯೋಗದ ಅನುದಾನ ಎಸ್ ಎಫ್ ಸಿ ವಿಶೇಷ ಅನುದಾನ ಇವೆಲ್ಲವನ್ನು ಅಂದಾಜಿಸಿ ಪಟ್ಟಣದ ಬಡಾವಣೆಗಳಲ್ಲಿ ಚರಂಡಿ ನಿರ್ಮಾಣ, ಬೀದಿ ದೀಪ ಅಳವಡಿಕೆ , ನೀರು ವಿತರಣಾ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ವಾಣಿಜ್ಯ ಮಳಿಗಳ ನಿರ್ಮಾಣ, ಸ್ಥಿರಾಸ್ತಿ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಪುರಸಭೆ ಸದಸ್ಯರಾದ ಡಿ.ಕೆ. ತಿಮ್ಮಪ್ಪ, ಪ್ರಮೋದ್ ಮುತ್ತಪ್ಪ, ಜಯವರ್ಧನ್, ಅಮೃತರಾಜ್, ರೇಣುಕಾ, ಮತ್ತಿತರರು ಈ ಬಗ್ಗೆ ಮಾತನಾಡಿ ಬಜೆಟ್‌ನಲ್ಲಿ ಪೌರ ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ, ನದಿ ಸಂರಕ್ಷಣೆ, ಸ್ವಚ್ಛತೆಗೆ ಆದ್ಯತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.