ಕುಶಾಲನಗರ, ಫೆ. ೨೫: ಕುಶಾಲನಗರ ಸಮೀಪದ ಬೈಲುಕೊಪ್ಪೆ ನಿರಾಶ್ರಿತ ಶಿಬಿರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ವಿಶ್ವದ ಅತಿ ದೊಡ್ಡ ಪರದೆ ಎನ್ನುವ ಖ್ಯಾತಿ ಹೊಂದಿರುವ ಅಮಿತಾಯುಶ್ ಚಿತ್ರಪರದೆಯನ್ನು ಕೆಲವೇ ಸಮಯಗಳ ಕಾಲ ಪ್ರದರ್ಶಿಸುವ ಮೂಲಕ ಪೂಜೆ ಸಲ್ಲಿಸಲಾಯಿತು.

ಟಿಬೆಟಿಯನ್ ನಾಗರಿಕರ ಹೊಸ ವರ್ಷದ ಅಂಗವಾಗಿ ಈ ವಿಶೇಷ ಚಿತ್ರಪಟ ಪ್ರದರ್ಶನ ಸಂದರ್ಭ ಸಾವಿರಾರು ಸಂಖ್ಯೆಯ ಟಿಬೆಟಿಯನ್ ಬೌದ್ಧ ಭಿಕ್ಷುಗಳು ಮತ್ತು ನಾಗರಿಕರು ಪೂಜೆ ಸಲ್ಲಿಸಿದರು.

ಸುಮಾರು ೨೦೦ ಅಡಿ ಎತ್ತರ ಹಾಗೂ ೧೭೦ ಅಗಲದ ಈ ಬೃಹತ್ ಚಿತ್ರಪರದೆಯನ್ನು ಆವರಣದಲ್ಲಿರುವ ಏಳು ಅಂತಸ್ತಿನ ಕಟ್ಟಡದ ಮೇಲೆ ಅಳವಡಿಸಿರುವ ಗೋಪುರದಲ್ಲಿ ಕೇವಲ ೩೦ ನಿಮಿಷಗಳ ಕಾಲ ಪ್ರದರ್ಶನ ಮಾಡಲಾಯಿತು.

ಗೋಲ್ಡನ್ ಟೆಂಪಲ್ ನಿಂಗ್ಮಾಫ ದೇವಾಲಯದ ಧರ್ಮ ಗುರುಗಳ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.

ಬೈಲುಕೊಪ್ಪೆ ಸೇರಿದಂತೆ ವಿಶ್ವದ ಎಲ್ಲೆಡೆ ಇರುವ ಟಿಬೆಟಿಯನ್ ನಾಗರಿಕರು ಸೇರಿದಂತೆ ಸುಮಾರು ೫ ಸಾವಿರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ ೭.೩೦ ರಿಂದ ೮ ಗಂಟೆ ತನಕ ಚಿತ್ರಪಟ ಪ್ರದರ್ಶಿಸಲಾಯಿತು. ಟಿಬೆಟಿಯನ್ ನಾಗರಿಕರು ತಮ್ಮ ಸಾಂಪ್ರದಾಯಿಕ ಉಡುಗೆ ಕೊಡುಗೆ ಉಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.

ಈ ಬಾರಿ ಟಿಬೇಟ್ ನೂತನ ವರ್ಷ ಫೆಬ್ರವರಿ ೧೦ ರಿಂದ ಆರಂಭಗೊAಡಿದ್ದು ಪದ್ಮ ಶಾಂಭವ ಹಾಗೂ ಅಮಿತಾಯುಶ್ ಚಿತ್ರ ಪಟಗಳನ್ನು ಪ್ರದರ್ಶನ ಮಾಡಲಾಗುತ್ತದೆ.

ಧರ್ಮ ಗುರುಗಳಾದ ಪದ್ಮಶಾಂಭವ ಅವರ ಚಿತ್ರಪಟ ವೀಕ್ಷಿಸಿದಲ್ಲಿ ಆಶೀರ್ವಾದ ಲಭಿಸುತ್ತದೆ. ಅಮಿತಾಯುಶ್ ಚಿತ್ರಪರದೆ ವೀಕ್ಷಿಸಿ ಪೂಜೆ ಸಲ್ಲಿಸಿದಲ್ಲಿ ಅಮಿತ ಆಯುಷ್ಯ ಲಭಿಸುತ್ತದೆ ಎನ್ನುವುದು ಟಿಬೆಟಿಯನ್ ನಾಗರಿಕರ ನಂಬಿಕೆಯಾಗಿದೆ. ಸುಮಾರು ೨೪ ವರ್ಷಗಳಿಂದ ಗೋಲ್ಡನ್ ಟೆಂಪಲ್ ಆವರಣದಲ್ಲಿ ಈ ಚಿತ್ರಪಟ ಪ್ರದರ್ಶನ ವರ್ಷಂಪ್ರತಿ ನಡೆಯುತ್ತಿದೆ.

ಚಿತ್ರ ವರದಿ: ವನಿತಾ ಚಂದ್ರಮೋಹನ್