ಶನಿವಾರಸಂತೆ, ಫೆ. ೨೫: ಪಟ್ಟಣದ ಪೊಲೀಸ್ ಇಲಾಖೆ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಆಟೋ ಚಾಲಕರು ಮತ್ತು ಸಾರ್ವಜನಿಕರಿಗೆ “ಸಂಚಾರ ನಿಯಮಗಳ ಬಗ್ಗೆ ಅರಿವು” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶನಿವಾರಸಂತೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಮುನಿಯಪ್ಪ ಮಾತನಾಡಿ, ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡಬಾರದು. ಕಡ್ಡಾಯವಾಗಿ ವಾಹನ ಚಾಲನಾಪತ್ರ ಹೊಂದಿರಬೇಕು. ಮದ್ಯಪಾನ ಮಾಡಿ ಹಾಗೂ ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಾಲಿಸಬಾರದು. ವೀಲಿಂಗ್ ಮಾಡಬಾರದು, ಸಂಚಾರ ನಿಯಮಗಳನ್ನು ಅರಿತು ಶಾಲಾ ವಾಹನಗಳ ಚಾಲಕರು ಪರವಾನಗಿ ಹೊಂದಿದ್ದು ಜಾಗರೂಕರಾಗಿರಬೇಕು. ಸೂಚನಾ ಫಲಕಗಳ ನಿಯಮ ಪಾಲಿಸಬೇಕು ಎಂದು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣದಲ್ಲಿ ೬ ನೇ ಗ್ರಾಮ ಗಸ್ತಿಗೆ ಒಳಪಡುವ ಬೀಟ್ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಭಿತ್ತಿಪತ್ರಗಳನ್ನು ಹಂಚಿ, ರಸ್ತೆಯಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವ ಬಗ್ಗೆ ಜಾಗೃತಿ ಮೂಡಿಸಿದರು.
ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಪಿಎಸ್ಐ ಗೋವಿಂದ್ ರಾಜ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್ಐ ರವಿಶಂಕರ್, ಗ್ರಾಮ ಗಸ್ತು ಅಧಿಕಾರಿ ಪ್ರದೀಪ್ ಕುಮಾರ್, ಸಿಬ್ಬಂದಿ ಹಾಗೂ ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು.