ಕಣಿವೆ, ಫೆ. ೨೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ರಸ್ತೆಯಲ್ಲಿರುವ ಆನೆಕೆರೆ ಸುಡುವ ಬೇಸಿಗೆಯ ಭರದ ಛಾಯೆಯಲ್ಲೂ ಸಮೃದ್ಧವಾದ ನೀರನ್ನು ಹೊಂದುವ ಮೂಲಕ ಕೃಷಿಕರ ಕಣ್ಣು ಅರಳಿಸಿದೆ.

ಅಂದರೆ, ಕೆರೆಯ ಆಸುಪಾಸಿನಲ್ಲಿರುವ ರೈತರು ತಮ್ಮ ಜಮೀನುಗಳಿಗೆ ಅಳವಡಿಸಿಕೊಂಡಿರುವ ಕೊಳವೆ ಬಾವಿಗಳಲ್ಲಿ ಹೇರಳವಾದ ನೀರು ಸಿಗುತ್ತಿರುವ ಕಾರಣ ನಿತ್ಯವೂ ಈ ಆನೆಕೆರೆಗೆ ವಂದಿಸುತ್ತಿದ್ದಾರೆ.

ಬೇಸಿಗೆಯ ಆರಂಭದ ಈ ದಿನಗಳಲ್ಲಿ ಕೃಷಿಕರ ಅನೇಕ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದರೆ, ಕೆಲವೊಂದು ಕೊಳವೆ ಬಾವಿಗಳು ನೀರಿಲ್ಲದೆ ಕೈ ಚೆಲ್ಲಿವೆ. ಹಾಗಾಗಿ ನೀರು ಇರುವ ಕೊಳವೆ ಬಾವಿಗಳ ರೈತರಿಗೆ ಈ ಆನೆ ಕೆರೆ ಸಂಜೀವಿನಿಯಾಗಿದೆ.

ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಮೀನು ಸಾಕಣೆಯ ಮೂಲಕ ಪ್ರತೀ ವರ್ಷವೂ ಆದಾಯ ತಂದುಕೊಡುತ್ತಿರುವ ಈ ಕೆರೆ ಕಳೆದ ಮೂರು ವರ್ಷಗಳ ಹಿಂದೆ ನೀರಿಲ್ಲದೇ ಸೊರಗಿತ್ತು.

ಆದರೆ ಇದೀಗ ತನ್ನ ಗರ್ಭದೊಳಗೆ ಸಮೃದ್ಧವಾದ ನೀರನ್ನು ಸಂಗ್ರಹಿಸಿಟ್ಟುಕೊAಡಿರುವ ಈ ಆನೆಕೆರೆ ಈ ಮಾರ್ಗದಲ್ಲಿ ತೆರಳುವ ಮಂದಿಯ ಕಣ್ಣುಗಳನ್ನು ಅರಳಿಸುವಂತಿದೆ. ಅಂದರೆ ಅಷ್ಟರಮಟ್ಟಿಗೆ ಈ ಕೆರೆ ನೀರನ್ನು ಹಿಡಿದಿಟ್ಟುಕೊಂಡಿದೆ.

ಮೀನು ಸಾಕಣೆ : ಆನೆಕೆರೆ ಮೀನು ಸಂತಾನೋತ್ಪತ್ತಿಯ ಕೇಂದ್ರವೂ ಆಗಿದ್ದು, ಖಾಸಗಿ ವ್ಯಕ್ತಿಗಳು ಪ್ರತೀ ೫ ವರ್ಷಗಳಿಗೊಮ್ಮೆ ಕೂಡುಮಂಗಳೂರು ಗ್ರಾಮ ಪಂಚಾಯಿತಿಯಿAದ ಹರಾಜಿನಲ್ಲಿ ರೂ. ೩.೨೦ ಲಕ್ಷಕ್ಕೆ ಈ ಕೆರೆಯನ್ನು ನಿರ್ವಹಿಸುತ್ತಿದ್ದಾರೆ. ಕಾಕತಾಳೀಯ ಎಂಬAತೆ ಮೀನು ಮರಿಗಳಿಗಾಗಿಯೋ ಏನೋ ಈ ಕೆರೆಯಲ್ಲಿ ಈಗಲೂ ನೀರು ಸಮೃದ್ಧವಾಗಿದೆ.

ಸಮತೋಲಿತ ಅಂತರ್ಜಲ: ಆನೆಕೆರೆಯಲ್ಲಿನ ಸಮೃದ್ಧವಾದ ನೀರು ಸುತ್ತಲಿನ ಹತ್ತಾರು ಕೊಳವೆ ಬಾವಿಗಳಿಗೆ ಜೀವ ಚೈತನ್ಯ ನೀಡಿದೆ. ಬರಡು ನೆಲದಲ್ಲಿನ ಕೊಳವೆ ಬಾವಿಗಳು ನೀರೆತ್ತದೆ ಕೈಚೆಲ್ಲಿದ್ದರೆ ಇಲ್ಲಿನ ಕೊಳವೆ ಬಾವಿಗಳು ನವಚೈತನ್ಯದಿಂದ ನೀರನ್ನು ಹೊರಸೂಸುತ್ತಿವೆ.

ಪ್ರಮುಖ ಪ್ರವಾಸಿ ತಾಣ ಹಾರಂಗಿ ಜಲಾಶಯದ ರಸ್ತೆಯ ಮಾರ್ಗದಲ್ಲಿನ ಈ ಆನೆಕೆರೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಒತ್ತುವರಿದಾರರಿಂದ ತೆರವುಗೊಳಿಸಿದೆ. ಪಂಚಾಯಿತಿಗೆ ಸರ್ಕಾರದಿಂದ ಸೂಕ್ತ ಅನುದಾನ ಬಂದಲ್ಲಿ ಈ ಕೆರೆಯನ್ನು ಪ್ರಮುಖ ಪ್ರವಾಸಿ ಕೆರೆಯಾಗಿ ಮಾರ್ಪಡಿಸುವ ದಿಸೆಯಲ್ಲಿ ಯೋಜನೆಗಳನ್ನು ಹಾಕಿಕೊಳ್ಳಬಹುದು ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್.

ಒಟ್ಟಾರೆ, ಬೇಸಿಗೆಯ ಧಗೆಯಲ್ಲೂ ಸುತ್ತಲಿನ ಕೆರೆಗಳಲ್ಲಿ ನೀರು ಕಡಿಮೆಯಾಗುತ್ತಾ ಒಣಗುವ ಹಂತ ತಲುಪಿದರೆ ಈ ಆನೆಕೆರೆಯಲ್ಲಿನ ನೀರು ಮಾತ್ರ ಸಮೃದ್ಧವಾಗಿದ್ದು ಕೆರೆಯ ಏರಿಯ ಮೇಲಿನ ರಸ್ತೆಯಲ್ಲಿ ತೆರಳುವ ಮಂದಿಯ ಕಣ್ಣುಗಳಿಗೆ ಇಂಪು ನೀಡುತ್ತಿದೆ.

- ಕೆ.ಎಸ್. ಮೂರ್ತಿ