ಸೋಮವಾರಪೇಟೆ, ಫೆ. ೨೪: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚೌಡ್ಲು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು.

ವಾರ್ಷಿಕೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿವಿಧ ಆಟೋ ಸ್ಪರ್ಧೆಗಳು ನಡೆದವು. ಸಮಾರೋಪ ಸಮಾರಂಭದಲ್ಲಿ ಈವರೆಗೆ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂತು.

ಶಾಲಾ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ಗೀತಾ ಶಶಿಕುಮಾರ್, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭಿಸುತ್ತಿದ್ದು, ಪೋಷಕರು ಸ್ಥಳೀಯವಾಗಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುವ ಮನಸ್ಸು ಮಾಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ರಾಜ್ಯ ಶಿಕ್ಷಕರ ಸಂಘದ ನಿರ್ದೇಶಕ ಯೋಗೇಶ್, ಪ್ರಸ್ತುತ ಇರುವ ಸರ್ಕಾರಿ ಶಾಲೆಗಳ ೧ ಕಿ.ಮೀ. ಅಂತರದಲ್ಲಿ ಬೇರೆ ಶಾಲೆಗಳನ್ನು ತೆರೆಯಬಾರದು ಎಂಬ ಆದೇಶವಿದ್ದರೂ ಸಹ ಸರ್ಕಾರ, ಇಲಾಖೆಯ ಇಚ್ಛಾಶಕ್ತಿಯ ಕೊರತೆಯಿಂದ ಅದು ಅನುಷ್ಠಾನಕ್ಕೆ ಬರುತ್ತಿಲ್ಲ. ಇದರ ಪ್ರತಿಕೂಲ ಪರಿಣಾಮ ಸರ್ಕಾರಿ ಶಾಲೆ ಹಾಗೂ ಶಿಕ್ಷಕರ ಮೇಲೆ ಬೀಳುತ್ತಿದೆ ಎಂದು ವಿಷಾದಿಸಿದರು.

ನಿವೃತ್ತ ಮುಖ್ಯಶಿಕ್ಷಕಿ ತಂಗಮ್ಮ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಇದೀಗ ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅವಕಾಶಗಳು ಲಭಿಸುತ್ತಿವೆ. ಸರ್ಕಾರಿ ಶಾಲೆಗಳ ಉಳಿವಿಗೆ ಪೋಷಕರು ಮನಸ್ಸು ಮಾಡಬೇಕು ಎಂದರು.

ಮುಖ್ಯ ಶಿಕ್ಷಕಿ ಪ್ರೇಮಾ, ನಿವೃತ್ತ ಮುಖ್ಯೋಪಾಧ್ಯಾಯಿನಿ ವಿಶಾಲಾಕ್ಷಿ ಅವರುಗಳು ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ರಾಜಣ್ಣ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಮಂಜುಳಾ ಸುಬ್ರಮಣಿ, ಪ್ರವೀಣ್, ಅಭಿವೃದ್ಧಿ ಅಧಿಕಾರಿ ಪೂರ್ಣಕುಮಾರ್, ಶಿಕ್ಷಕರುಗಳಾದ ಶಶಿಕಲಾ, ಮಮತ, ಸ್ವರ್ಣಲತ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮುಂದಿನ ತಿಂಗಳು ನಿವೃತ್ತರಾಗಲಿರುವ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಆನಂದ್ ಅವರನ್ನು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಭಾರತೀಯ ಯುವಕ ಸಂಘದ ಸತೀಶ್, ಕೃಷ್ಣಮೂರ್ತಿ, ಶಶಿ ಸೇರಿದಂತೆ ಪದಾಧಿಕಾರಿಗಳು ಸನ್ಮಾನಿಸಿದರು. ಶಾಲಾ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚೌಡ್ಲು ಗ್ರಾ.ಪಂ. ಮೂಲಕ ಕ್ರೀಡಾ ಪರಿಕರಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು.