ಪೊನ್ನಂಪೇಟೆ, ಫೆ. ೨೪: ಗೋಣಿಕೊಪ್ಪಲು ಪಟ್ಟಣದಲ್ಲಿರುವ ಟ್ರಾಫಿಕ್ ಸಮಸ್ಯೆಯನ್ನು ಸುಲಲಿತವಾಗಿ ಬಗೆಹರಿಸಲು ಸ್ಥಳೀಯ ವರ್ತಕರ ಸಹಕಾರ ಬಹು ಮುಖ್ಯವಾಗಿದೆ. ಟ್ರಾಫಿಕ್ ಸಮಸ್ಯೆಯಿಂದ ಪ್ರತಿಯೊಬ್ಬರು ಜಾಗೃತರಾಗಿ, ವಾಹನಗಳನ್ನು ನಿಯಮಬದ್ಧವಾಗಿ ನಿಲ್ಲಿಸಿದಾಗ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುಧೋಳ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೋಣಿಕೊಪ್ಪ ಆರಕ್ಷಕ ಠಾಣೆಯಲ್ಲಿ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ಸಮಿತಿಯವರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಪಟ್ಟಣದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದ್ದಂತೆಯೇ ಸಮಸ್ಯೆ ಬಿಗಡಾಯಿಸುತ್ತಿದೆ. ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ರಸ್ತೆಯ ಬದಿಗಳಲ್ಲಿ ನಿಲ್ಲಿಸಿದ ವಾಹನಗಳು ಅಡ್ಡ-ದಿಡ್ಡಿ ನಿಲ್ಲಿಸಿ ನಿಯಮಪಾಲಿಸದೆ ಇರುವುದರಿಂದ ಸಮಸ್ಯೆ ಹೆಚ್ಚಾಗ ತೊಡಗಿದೆ. ಈ ನಿಟ್ಟಿನಲ್ಲಿ ಜಾಗೃತಿ ವಹಿಸಬೇಕಾಗಿದ್ದು, ವಾಹನ ಸವಾರರಲ್ಲಿ ವಾಹನ ನಿಲುಗಡೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಈ ಸಂಬAಧ ಚೇಂಬರ್ ಆಫ್ ಕಾಮರ್ಸ್ ಸಮಿತಿ ಸಹಕಾರದ ಮನೋಭಾವವನ್ನು ವ್ಯಕ್ತಪಡಿಸಿದರೆ, ಸೂಕ್ತ ರೀತಿಯಲ್ಲಿ ವ್ಯವಸ್ಥೆಯನ್ನು ನಿಭಾಯಿಸಬಹುದು ಎಂದು ಮನವಿ ಮಾಡಿದರು. ಉಮಾ ಮಹೇಶ್ವರಿ ದೇವಸ್ಥಾನದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದವರೆಗೆ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ರೂಪಿಸಲಾಗುವುದು. ಈ ಹಿನ್ನೆಲೆಯಲ್ಲಿ ನೋ ಪಾರ್ಕಿಂಗ್ ನಾಮಫಲಕಗಳನ್ನು ಅಳವಡಿಸುವುದರ ಜೊತೆಗೆ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥಿತವಾಗಿ ಅನುಕೂಲ ಕಲ್ಪಿಸಲಾಗುವುದು. ಈ ಸಂಬAಧ ಗ್ರಾಮ ಪಂಚಾಯಿತಿ ಜೊತೆಗೆ ಸಹಕಾರವನ್ನು ಬಯಸಿರುವುದಾಗಿ ತಿಳಿಸಿದರು.
ಈ ಸಂದರ್ಭ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ಮಾತನಾಡಿ, ವಾಹನಗಳನ್ನು ಕ್ರಮಬದ್ಧವಾಗಿ ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ಶೇ. ೬೦ರಷ್ಟು ನಿಯಂತ್ರಿಸಲು ಸಾಧ್ಯ. ಆಟೋ ಚಾಲಕರು ಚಾಲನೆಯ ನಿಯಮವನ್ನು ಪರಿಗಣಿಸಿ ಆಟೋ ಚಲಾಯಿಸಿದಾಗ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ. ಗೋಣಿಕೊಪ್ಪದಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಆಟೋಗಳು ನೋಂದಾವಣೆಯಾಗಿದ್ದರೂ, ಕೇವಲ ನೂರರಷ್ಟು ಆಟೋಗಳಷ್ಟೇ ಕ್ರಮಬದ್ಧವಾದ ಸಂಚಾರ ನಡೆಸುತ್ತಿವೆೆ ಎಂದು ಹೇಳಿದರು.
ಬಸ್ ನಿಲ್ದಾಣದಲ್ಲೆ ಬಸ್ಸುಗಳ ನಿಲುಗಡೆಗೆ ಅವಕಾಶವಿದ್ದರೂ ಅದನ್ನು ರಸ್ತೆಯ ಮತ್ತೊಂದು ಬದಿಯಲ್ಲಿ ನಿಲ್ಲಿಸುವುದರಿಂದ ಸಮಸ್ಯೆಯಾಗುತ್ತಿದೆ. ಅಲ್ಲದೆ ಪೊನ್ನಂಪೇಟೆ ರಸ್ತೆ ತಿರುವು ಮತ್ತು ಪಾಲಿಬೆಟ್ಟ ರಸ್ತೆ ತಿರುವಿನಲ್ಲಿ ಬಸ್‌ಗಳ ನಿಲುಗಡೆಗೆ ಅವಕಾಶ ನೀಡಬಾರದು ಮತ್ತು ಬಸ್ ನಿಲ್ದಾಣ ಹಾಗೂ ಉಮಾಮಾಹೇಶ್ವರಿ ದೇವಸ್ಥಾನದ ಬಳಿ, ಬಸ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು. ಪಾಲಿಬೆಟ್ಟ ತಿರುವಿನಲ್ಲಿ ಟ್ರಾö್ಯಕ್ಟರ್‌ಗಳ ನಿಲುಗಡೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಆ ಭಾಗದಲ್ಲಿ ರಸ್ತೆ ಕಿರಿದಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ.
ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ವೃತ್ತ ನಿರೀಕ್ಷಕರಿಗೆ ಚೇಂಬರ್ ಆಫ್ ಕಾಮರ್ಸ್ ತಿಳಿಸಿತು. ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಗ್ರಾ.ಪಂ. ಸದಸ್ಯ ಬಿ.ಎನ್. ಪ್ರಕಾಶ್, ಪ್ರಮುಖರಾದ ಕೊಳ್ಳಿಮಡ ಅಜಿತ್ ಆಯಪ್ಪ, ಪೊನ್ನಿಮಾಡ ಸುರೇಶ್, ಪ್ರಭಾಕರ್ ನೆಲ್ಲಿತ್ತಾಯ, ಗಣೇಶ್ ರೈ, ಕೃಷ್ಣಪ್ಪ, ರಾಜಶೇಖರ್, ಸುಮಿ ಸುಬ್ಬಯ್ಯ, ಉಮ್ಮರ್ ಸೇರಿದಂತೆ ಹಲವರು ಹಾಜರಿದ್ದರು.