ಪೊನ್ನಂಪೇಟೆ, ಫೆ. ೨೪: ಗೋಣಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ರಾಗಿ ಮಾಲ್ಟ್ ವಿತರಣಾ ಕಾರ್ಯಕ್ರಮಕ್ಕೆ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಚಾಲನೆ ನೀಡಿದರು.

ತಾಲೂಕು ಅಕ್ಷರ ದಾಸೋಹ ಉಪ ನಿರ್ದೇಶಕ ರಾಜೇಶ್ ಕೆ.ಆರ್ ಈ ಸಂದರ್ಭ ಮಾಹಿತಿ ನೀಡಿ, ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶತೆ ತುಂಬುವ ಉದ್ದೇಶದಿಂದ ಮತ್ತು ಮಕ್ಕಳಲ್ಲಿ ಆರೋಗ್ಯ ಪೂರ್ಣವಾದ ಬೆಳವಣಿಗೆಗೆ ಸಹಕಾರಿಯಾಗುವಂತೆ, ಚರ್ಮದ ಕಾಂತಿ ಹೆಚ್ಚಿಸಿ ಚರ್ಮ ರೋಗಗಳು ಹರಡದಂತೆ ತಡೆಗಟ್ಟಲು ರಾಗಿ ಮಾಲ್ಟ್ ವಿತರಣೆಯಾಗುತ್ತಿದೆ.

ಸರ್ಕಾರ ಬಿಸಿ ಊಟ, ಹಾಲು, ಮೊಟ್ಟೆ ವಿತರಣೆ ಜತೆಗೆ ರಾಗಿ ಮಾಲ್ಟ್ ವಿತರಣೆಗೂ ಮುಂದಾಗಿದೆ. ಇದರಿಂದ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸುವುದರೊಂದಿಗೆ ಮಕ್ಕಳ ಹಸಿವನ್ನು ನೀಗಿಸುವುದರಿಂದ, ತರಗತಿಯಲ್ಲಿ ಪಠ್ಯ ಚಟುವಟಿಕೆಯಲ್ಲಿ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಾಗಬಲ್ಲದು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಂ. ಪ್ರಕಾಶ್ ಮಾತನಾಡಿ, ಮಕ್ಕಳಲ್ಲಿನ ರಕ್ತಹೀನತೆ ಚರ್ಮದ ರೋಗಗಳು ನಿವಾರಣೆಗಾಗಿ ರಾಗಿ ಮಾಲ್ಟ್ ಸೇವನೆ ಬಹು ಉಪಯೋಗಿಯಾಗಿದೆ. ಪ್ರತಿಯೊಬ್ಬ ಮಗುವಿಗೂ ಸುಮಾರು ೨೦೦೦ ಕಿ.ಲೋ ಕ್ಯಾಲೋರಿಯಷ್ಟು ಆಹಾರದ ಅವಶ್ಯಕತೆ ದಿನ ನಿತ್ಯ ಇದೆ. ಅದರಲ್ಲಿ ೭೦೦ ಕಿಲೋ ಕ್ಯಾಲರಿ ಅಷ್ಟು ಆಹಾರವನ್ನ ಶಾಲೆಯಲ್ಲಿ ನೀಡಲಾಗುತ್ತಿದೆ. ಉಳಿದಿರುವ ಶೇಕಡವಾರು ಆಹಾರವನ್ನು ಮನೆಯಲ್ಲಿ ಪೋಷಕರು ಒದಗಿಸಿಕೊಟ್ಟಾಗ ಮಕ್ಕಳು ಆರೋಗ್ಯಪೂರ್ಣವಾದ ಬೆಳವಣಿಗೆಯನ್ನು ಕಾಣಬಹುದಾಗಿದೆ ಎಂದು ಸಲಹೆ ನೀಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಕೊಣಿಯಂಡ ಅಪ್ಪಣ್ಣ ಮಾತನಾಡಿ, ಮಕ್ಕಳು ಹಸಿವಿನಿಂದ ಇದ್ದರೆ ಆರೋಗ್ಯ ಹದಗೆಡುತ್ತದೆ. ಇದರಿಂದ ಸರಿಯಾದ ಕ್ರಮದಲ್ಲಿ ಪಠ್ಯ ಚಟುವಟಿಗಳತ್ತ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಈ ಉದ್ದೇಶ ದೊಂದಿಗೆ ಸರ್ಕಾರ ಶಾಲೆಗಳಲ್ಲಿ ಆಹಾರ ವಿತರಿಸಲು ಕ್ರಮ ಕೈಗೊಂಡಿದೆ. ಮಕ್ಕಳು ಹಸಿವು ನೀಗಿಸಿಕೊಂಡು ಆರೋಗ್ಯ ಪೂರ್ಣವಾಗಿದ್ದಾಗ ಓದು ಬರಹದ ಕಡೆ ಹೆಚ್ಚು ಆಸಕ್ತರಾಗಲು ಕಾರಣವಾಗುತ್ತದೆ ಎಂದು ತಿಳಿಸಿದರು.

ಗ್ರಾ.ಪಂ. ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ, ರಾಗಿ ತಿಂದವನಿಗೆ ಯಾವುದೇ ರೋಗ ಬಾಧಿಸುವುದಿಲ್ಲ ಎಂಬುದು ಸತ್ಯವಾಗಿದೆ. ಉದಾಹರಣೆ ಎಂಬAತೆ ಹಿರಿಯ ರಾಜಕಾರಣಿ ದೇವೇಗೌಡರ ಇಂದಿನ ಆರೋಗ್ಯದ ಗುಟ್ಟು ರಾಗಿ ಪದಾರ್ಥಗಳು ಸೇವನೆಯಾಗಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಎಂ., ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯಿತ್ರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್. ಕುಮಾರ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶಾಂತಿ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುರುರಾಜ್, ಗ್ರೇಡ್ ಒನ್ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ತಮ್ಮಯ್ಯ, ಗ್ರೇಡ್ ಟು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪ್ರವೀಣ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ರಮಾನಂದ್, ಸಮನ್ವಯ, ಸಂಪನ್ಮೂಲ ಅಧಿಕಾರಿಗಳು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.