ಮಡಿಕೇರಿ, ಫೆ. ೨೩: ದಕ್ಷಿಣ ಕೊಡಗಿನ ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ (ಪ್ಯಾಕ್ಸ್) ಚುನಾವಣೆ ನಡೆಸುವಂತೆ ಆಗ್ರಹಿಸಿ ನಗರದ ಸಹಕಾರ ಸಂಘಗಳ ನಿಬಂಧಕರ ಕಚೇರಿ ಎದುರು ಮಾಜಿ ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮುಂದಿನ ೧೫ ದಿನದೊಳಗೆ ಚುನಾವಣೆ ನಡೆಸಬೇಕು. ಅದೇ ರೀತಿ ಸುಳ್ಳು ಆರೋಪದಡಿ ಅಮಾನತ್ತುಗೊಂಡಿರುವ ಸಂಘದ ಕಾರ್ಯನಿರ್ವಾಹಣಾಧಿಕಾರಿಯನ್ನು ಕೂಡಲೇ ಮರುನೇಮಕಗೊಳಿಸುವಂತೆ ಪಟ್ಟುಹಿಡಿದರು.
ಹುದಿಕೇರಿ ಭಾಗದ ಸಹಕಾರಿಗಳು, ಜಿಲ್ಲಾ, ಮಂಡಲ ಬಿಜೆಪಿ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರಕಾರ, ಸಹಕಾರಿ ಇಲಾಖೆ, ಹಾಗೂ ವೀರಾಜಪೇಟೆ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ವಿಜಯೇಂದ್ರ ಅವರ ಆಗಮನಕ್ಕೆ ಪಟ್ಟುಹಿಡಿದ ಪ್ರತಿಭಟನಾನಿರತರು ಸಂಘದಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ವದಂತಿ ಹಬ್ಬಿಸಿ ರಾಜಕೀಯ ಹಸ್ತಕ್ಷೇಪ ಮಾಡಲಾಗುತ್ತಿದೆ. ಅಧಿಕಾರವನ್ನು ಹಾಲಿ ಶಾಸಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಮಾಡಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ರಾಜ್ಯದಲ್ಲಿ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಅಕ್ಟೋಬರ್ನಲ್ಲಿ ಮುಗಿಸಬೇಕಿತ್ತು. ಇದಕ್ಕಾಗಿ ಪ್ರತ್ಯೇಕ ಚುನಾವಣಾ ಆಯೋಗವಿದೆ. ಹುದಿಕೇರಿ ಸಂಘಕ್ಕೂ ಚುನಾವಣಾ ಪ್ರಕ್ರಿಯೆ ನಡೆದಿತ್ತು. ‘೧೩ ಡಿ’ ಅಡಿ ಅನರ್ಹತೆ ಕುರಿತು ಮತದಾರರಿಗೆ ನೋಟೀಸ್ ಕೂಡ ಜಾರಿಯಾಗಿದೆ. ಹಾಲಿ ಆಡಳಿತ ಮಂಡಳಿ ಅವಧಿ ಮುಗಿದ ನಂತರ ದ್ವಿತೀಯ ದರ್ಜೆ ಗುಮಾಸ್ತನನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಕಾನೂನು ದುರಪಯೋಗ ಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸಹಕಾರ ಸಂಘ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಹಿನ್ನೆಲೆ ಕಾಂಗ್ರೆಸ್ ಕುತಂತ್ರ ಮಾಡುತ್ತಿದೆ. ಇಲ್ಲಸಲ್ಲದ ಆರೋಪಗಳನ್ನು ಹಬ್ಬಿಸಿ ಸ್ವಂತ ಊರಿನಲ್ಲಿ ವರ್ಚಸು ಉಳಿಸಿ ಕೊಳ್ಳಲು ಶಾಸಕರು ಪ್ರಯತ್ನಿಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಿಂದ ಯಾವುದೇ ಅವ್ಯವಹಾರ
(ಮೊದಲ ಪುಟದಿಂದ) ಆಗಿಲ್ಲ ಎಂದು ಸ್ಪಷ್ಟವಾಗಿದೆ. ಉದ್ದೇಶ ಪೂರ್ವಕವಾಗಿ ಚುನಾವಣೆ ಮಾಡದೆ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಸಂಚು ಇದಾಗಿದ್ದು. ಸ್ವಾರ್ಥ ಸಾಧನೆಗೆ ಈ ರೀತಿ ಮಾಡಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಅಕ್ರಮ ಮಾಡಲಾಗಿದೆ ಎಂಬ ಆರೋಪದಡಿ ವಿಶೇಷಾಧಿಕಾರಿ ಎಂಬ ಸ್ಥಾನ ಸೃಷ್ಟಿಸಿ ಸಂಘದ ಕಾರ್ಯನಿರ್ವಹಣಾ ಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ. ನೀವು ತೋಳು, ಹಣ ಬಲ ತೋರಿಸಿ ನಾವು ಜನಶಕ್ತಿಯಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಕಾಂಗ್ರೆಸ್ಗೆ ಸವಾಲು ಹಾಕಿದರು.
ಸಂಘದ ಮಾಜಿ ಅಧ್ಯಕ್ಷ ಅಜ್ಜಿಕುಟ್ಟಿರ ಪ್ರವೀಣ್ ಮಾತನಾಡಿ, ಗೊಬ್ಬರ ಮಾರಾಟದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತದೆ. ಕಾಲಮಿತಿಯೊಳಗೆ ಗೊಬ್ಬರ ಮಾರಾಟ ಮಾಡಬೇಕು. ಇಲ್ಲದಿದ್ದಲ್ಲಿ ಆರ್ಥಿಕ ಸಂಕಷ್ಟ ಬರುತ್ತದೆ. ಹೆಚ್ಚುವರಿ ಗೊಬ್ಬರವನ್ನು ಹೊರ ಜಿಲ್ಲೆಗೆ ಮಾರಾಟ ಮಾಡಲಾಗಿದೆ. ಇದರಿಂದ ರೂ. ೭ ಲಕ್ಷ ಲಾಭ ಸಂಘಕ್ಕೆ ಬಂದಿದೆ. ಕೃಷಿ ಇಲಾಖೆಗೆ ಮಾಹಿತಿ ಇಲ್ಲದೆ ಗೊಬ್ಬರ ಮಾರಾಟ ಮಾಡಲು ಆಗುವುದಿಲ್ಲ. ಆದರೆ, ಈ ಸಂಬAಧ ಮೂರು ವರ್ಷ ನಂತರ ಕೃಷಿ ಇಲಾಖೆ ನೋಟೀಸ್ ನೀಡಿದೆ. ಇದಕ್ಕೆ ಸಿಇಓ ಅವರನ್ನು ಹೊಣೆಗಾರಿಕೆ ಮಾಡಿರುವುದು ಸರಿಯಲ್ಲ. ಸಂಘದಲ್ಲಿ ಯಾವುದೇ ಹಣ ದುರ್ಬಳಕೆಯಾಗಿಲ್ಲ. ಸಿಇಓ ಅವರನ್ನು ಮರುನೇಮಕ ಮಾಡಿ ಚುನಾವಣೆ ಪ್ರಕ್ರಿಯೆ ನಡೆಸಬೇಕೆಂದು ಒತ್ತಾಯಿಸಿದ ಅವರು, ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ನೀತಿ ಸಂಹಿತೆ ಬರುವ ಹಿನ್ನೆಲೆ ಉದ್ದೇಶಪೂರ್ವಕವಾಗಿ ಸಂಘದ ಚುನಾವಣೆೆಯನ್ನು ವಿಳಂಬ ಮಾಡುವ ವ್ಯವಸ್ಥಿತ ಕೆಲಸವಾಗುತ್ತಿದೆ. ಇದರಿಂದ ಸಂಘಕ್ಕೆ ನಷ್ಟವಾಗುತ್ತಿದೆ. ೭ ಕೋಟಿ ಚಿನ್ನಾಭರಣ ಅಡಮಾನ ಸಾಲ ಇದೆ. ಕೋಟ್ಯಂತರ ರೂಪಾಯಿ ಠೇವಣಿ ಇದೆ. ಮುಂದಿನ ೧೫ ದಿನಗಳಲ್ಲಿ ಚುನಾವಣೆ ನಡೆಯಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಮಾತನಾಡಿ, ಯಾರ ಅನುಮತಿ ಇಲ್ಲದೆ, ಸದಸ್ಯರ ಗಮನಕ್ಕೆ ತಾರದೆ ಸಂಘದ ದಾಖಲೆಗಳನ್ನು ಅಧಿಕಾರಿ ಕೊಂಡೊಯ್ದಿದ್ದಾರೆ. ಇದಕ್ಕೆ ಕಾರಣವೇನು? ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಪೊಲೀಸ್ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ಇಡೀ ವಿಚಾರ ರಾಜಕೀಯ ಪ್ರೇರಿತವಾಗಿದೆ. ಇದರಿಂದ ಸಹಕಾರ ಸಂಘಗಳಿಗೆ ಸಮಸ್ಯೆಯಾಗುತ್ತದೆ. ಜನರಿಗೆ ತಪ್ಪು ನಂಬಿಕೆ ಮೂಡುತ್ತದೆ. ಸಂಘದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿದರು.
ಮತದಾರರ ಪಟ್ಟಿ ಅಕ್ರಮದ ಕುರಿತು ನೋಟೀಸ್ ನೀಡದೆ ಅಮಾನತ್ತು ಮಾಡಿರುವುದು ಸರಿಯಲ್ಲ. ವಿಶೇಷಾಧಿಕಾರಿ ನೇಮಕಾತಿಯೇ ಕಾನೂನು ಬಾಹಿರ. ಚುನಾವಣೆ ಆಗದಿದ್ದಲ್ಲಿ ಉಗ್ರಹೋರಾಟ ಮಾಡಲಾಗುತ್ತದೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಸಹಕಾರಿ ಇಲಾಖೆ ಜವಾಬ್ದಾರಿಯಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್, ಸಹಕಾರಿ ಭಾರತಿ ರಾಜ್ಯ ಉಪಾಧ್ಯಕ್ಷ ರವಿ ಬಸಪ್ಪ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾ ವಕ್ತಾರ ಸುಬ್ರಮಣ್ಯ ಉಪಾಧ್ಯಯ, ಪ್ರಮುಖರಾದ ಪಳೆಯಂಡ ರಾಬಿನ್ ದೇವಯ್ಯ, ಮಾಪಂಗಡ ಯಮುನಾ ಚಂಗಪ್ಪ, ಬಿ.ಬಿ. ಭಾರತೀಶ್, ಗುಮ್ಮಟ್ಟೀರ ಕಿಲನ್ ಗಣಪತಿ, ಹುದಿಕೇರಿ ಸಂಘದ ಮಾಜಿ ಅಧ್ಯಕ್ಷರುಗಳಾದ ಚೇಂದಿರ ರಘು ತಿಮ್ಮಯ್ಯ, ಮಾಜಿ ನಿರ್ದೇಶಕರುಗಳಾದ ಕೋಳೇರ ನರೇಂದ್ರ, ಬಲ್ಯಮಾಡ ಪ್ರಶಾಂತ್, ಮಿದೇರಿರ ಸವಿನಾ, ಕುಪ್ಪಣಮಾಡ ಸೀತಮ್ಮ, ಬೊಳ್ಳಿಮಾಡ ದೇವಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.