ಕಣಿವೆ, ಫೆ. ೨೩: ಮನುಷ್ಯನ ಅಂತರAಗದ ಆಲಯವಾದ ದೇವಾಲಯಗಳು ಹಾಗೂ ಸನಾತನ ಹಿಂದೂ ಧರ್ಮದ ಸಂರಕ್ಷಣೆ ಹಾಗೂ ಸಂವರ್ಧನೆ ಅತಿ ಮುಖ್ಯ ಎಂದು ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಕರ್ನಾಟಕ ದೇವಸ್ಥಾನ, ಮಠ ಹಾಗೂ ಧಾರ್ಮಿಕ ಸಂಸ್ಥೆಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಸನಾತನ ಸಂಸ್ಥೆಯ ವತಿಯಿಂದ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಎಲ್ಲಿ ಮನೋದೌರ್ಬಲ್ಯಗಳಿರುತ್ತ ವೆಯೋ ಅಲ್ಲಿ ರೋಗ ರುಜಿನಗಳು ಬಾಧಿಸುತ್ತವೆ. ಎಲ್ಲಿ ಧಾರ್ಮಿಕ ಜಾಗೃತ ಸಮಾಜ ಕರ್ತವ್ಯದಿಂದ ವಿಮುಖ ವಾದರೆ ಮತ್ತೆ ಯಥಾಸ್ಥಿತಿಗೆ ಮರಳಲು ಸಾಕಷ್ಟು ಸಮಯ ಹಿಡಿಯುತ್ತದೆ. ದೇವಾನು ದೇವತೆಗಳ ಸನ್ನಿಧಿಗಳಲ್ಲಿ ಅಧ್ಯಾತ್ಮಿಕ ಅನುಭೂತಿಯನ್ನು ಗೌರವಿಸಿದ ಸನಾತನ ರಾಷ್ಟç ನಮ್ಮದು. ಹಾಗಾಗಿ ನಮ್ಮಲ್ಲಿನ ದೇಗುಲಗಳಲ್ಲಿ ಹಿಂದೆ ಮೂಲಭೂತ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳು ದೊರಕುತ್ತಿದ್ದವು.

ಸಾವಿರಾರು ಸಂಖ್ಯೆಯಲ್ಲಿದ್ದ ದೇವಾಲಯಗಳು ಹಾಗೂ ಮಠಗಳು ರಾಜ್ಯದಲ್ಲಿಂದು ಅವನತಿಯ ಹಾದಿಯಲ್ಲಿವೆ. ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಶಿಕ್ಷಣದ ಧಾವಂತದಲ್ಲಿ ಮೂಲಭೂತವಾಗಿ ಹಾಸುಹೊಕ್ಕಾಗಿದ್ದ ಸಂಸ್ಕಾರಗಳನ್ನು ಮರೆತಿದ್ದೇವೆ ಎಂದು ಅರಮೇರಿ ಶ್ರೀ ವಿಷಾದಿಸಿದರು.

ದೇವಾಲಯಗಳ ಸಂಸ್ಕೃತಿ ವ್ಯಕ್ತಿಯನ್ನೇ ದೇಗುಲವಾಗಿ ಮಾರ್ಪಡಿಸುತ್ತವೆ. ಹಾಗಾಗಿ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ದೇಹವೇ ದೇಗುಲ ಎಂದರು. ಹಿಂದೂಗಳ ದೇವಾಲಯಗಳ ಮೇಲೆ ಸರ್ಕಾರ ಹೇರುತ್ತಿರುವ ನೀತಿ ನಿಯಮಗಳ ನಿಯಂತ್ರಣಗಳ ಬಗ್ಗೆ ನಾಡಿನಾದ್ಯಂತ ಸಾಮೂಹಿಕವಾದ ಚರ್ಚೆಗಳಾಗಬೇಕು ಎಂದು ಆಶಿಸಿದ ಶ್ರೀಗಳು, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಉಳಿವಿಗಾಗಿ ಹಾಗೂ ದೇಗುಲಗಳ ಅರ್ಚಕರ ನೆರವಿಗೆ ಸರ್ಕಾರಗಳು ಧಾವಿಸಬೇಕಿದೆ ಎಂದರು.

ಸನಾತನ ಧರ್ಮ ಪ್ರಚಾರಕ ರಮಾನಂದ ಗೌಡ ಮಾತನಾಡಿ, ಹಿಂದೆ ರಾಜರ ಆಳ್ವಿಕೆಯಲ್ಲಿ ದೇಗುಲಗಳು ಸಮೃದ್ಧವಾಗಿದ್ದವು. ಅಂದು ಜನರ ಆಚಾರ ವಿಚಾರಗಳು ಕೂಡ ಮೇಳೈಸಿದ್ದವು. ಹಿಂದೆ ೨ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂ ದೇಗುಲಗಳ ಸಂಖ್ಯೆ ಇಂದು ಕೇವಲ ೩೪,೫೦೦ಕ್ಕೆ ಇಳಿದಿದ್ದು, ಆ ದೇವಾಲಯಗಳು ಸರ್ಕಾರದ ಕಪಿಮುಷ್ಟಿಯಲ್ಲಿವೆ.

ಕೂಡಲೇ ನಾವೆಲ್ಲಾ ಒಂದಾಗಿ ಧರ್ಮ ಜಾಗೃತಿಗೊಳಿಸಿ ಸರ್ಕಾರದ ಕಪಿಮುಷ್ಟಿಯಿಂದ ದೇಗುಲಗಳನ್ನು ಮರಳಿ ಪಡೆದು ಭಕ್ತರ ಕೈಗಿಡಬೇಕಿದೆ. ದೇವಾಲಯಗಳಲ್ಲಿ ಭಾರತೀಯ ಸನಾತನ ಸಂಸ್ಕೃತಿ ಪಸರಿಸುತ್ತಿತ್ತು. ಹಿಂದೆ ಇದ್ದಂತಹ ಧರ್ಮ ಶಿಕ್ಷಣ ಮರೆಯಾಗಿ ಪಾಶ್ಚಿಮಾತ್ಯ ಸಂಸ್ಕೃತಿಗೆ ನಮ್ಮ ಮಕ್ಕಳು ಒಳಗಾಗುತ್ತಿದ್ದಾರೆ.

ದೇವಾಲಯಗಳಿಗೆ ಹೆಚ್ಚು ಹೋಗುವುದರಿಂದ ನಮ್ಮಲ್ಲಿನ ನೀಚ ಶಕ್ತಿಗಳು ದೂರವಾಗಿ ಸಾತ್ವಿಕ ಲಹರಿಗಳು ಪಸರಿಸುತ್ತವೆ. ಹಾಗಾಗಿ ಪೋಷಕರು ಮಕ್ಕಳಿಗೆ ದೇವಾಲಯಗಳ ಪ್ರಾಮುಖ್ಯತೆ ಹಾಗೂ ಉಪಯುಕ್ತತೆಗಳ ಕುರಿತು ಸಂಸ್ಕಾರಗಳನ್ನು ಒದಗಿಸಬೇಕಿದೆ ಎಂದರು. ಕರ್ನಾಟಕ ದೇವಾಲಯಗಳು, ಮಠ ಹಾಗೂ ಧಾರ್ಮಿಕ ಸಂಸ್ಥೆಗಳ ಪರಿಷತ್ತಿನ ಮೋಹನ್ ಗೌಡ ಮಾತನಾಡಿ, ಸ್ವಾತಂತ್ರ‍್ಯ ಬಂದು ೭೫ ವರ್ಷಗಳು ಕಳೆದರೂ ಕೂಡ ಹಿಂದೂಗಳಿಗೆ ನಿಜವಾದ ಸ್ವಾತಂತ್ರö್ಯ ಸಿಕ್ಕಿಲ್ಲ.

ಮುಂಗಡ ಪತ್ರದಲ್ಲಿ ಅಲ್ಪಸಂಖ್ಯಾತರಿಗೆ ಅನುದಾನ ನೀಡಿರುವ ರಾಜ್ಯ ಸರ್ಕಾರ ಹಿಂದೂಗಳು ಆರಾಧಿಸುವ ಯಾವುದೇ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಅಥವಾ ಅಭಿವೃದ್ಧಿ ಮಾಡಲು ಹಣ ಮೀಸಲಿಡದೇ ಹಿಂದೂ ವಿರೋಧಿ ನೀತಿ ಅನುಸರಿಸಿದೆ. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ದೇವಾಲಯಗಳಿಗೆ ರಾಜರು ಎಲ್ಲಾ ರೀತಿಯ ಆರ್ಥಿಕ ಸಹಕಾರ ಕೊಡುವ ಮೂಲಕ ದೇವಾಲಯಗಳ ಅಭಿವೃದ್ಧಿಗೆ ಕಾರಣರಾಗಿದ್ದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ದೇವರಲ್ಲಿ ನಂಬಿಕೆ ಇಲ್ಲದ ರಾಜಕಾರಣಿಗಳು ಅಧಿಕಾರಕ್ಕೆ ಬರುತ್ತಿದ್ದು ಹಿಂದೂಗಳು ಹಾಗೂ ಹಿಂದೂ ದೇವಾಲಯಗಳ ವಿನಾಶಕ್ಕೆ ಬೇಕಾದ ಕಾನೂನುಗಳನ್ನು ಜಾರಿ ಮಾಡುತ್ತಿರುವುದನ್ನು ಹಿಂದೂಗಳು ಪ್ರತಿರೋಧಿಸದೇ ಹಾಗೆಯೇ ಕುಳಿತರೇ ಭವಿಷ್ಯದಲ್ಲಿ ಹಿಂದೂಗಳ ಸ್ಥಿತಿ ಏನಾಗಬಹುದು ಎಂದು ಮೋಹನ್ ಗೌಡ ವಿಷಾದಿಸಿದರು. ದೇವಾಲಯಗಳ ಸಂಘಟನೆ ಮಾಡುವ ಮೂಲಕ ಒಟ್ಟಾಗಿ ಹೋರಾಟ ರೂಪಿಸಿ ನಮ್ಮ ಹಕ್ಕುಗಳನ್ನು ಪಡೆಯಬೇಕಿದೆ ಎಂದು ಮೋಹನ ಗೌಡ ಕರೆಕೊಟ್ಟರು.

ದೇವಾಲಯಗಳ ಅಭಿವೃದ್ಧಿ ಆದಲ್ಲಿ ಹರಿದು ಬರುವ ಪ್ರವಾಸಿಗರಿಂದಾಗಿ ಅಲ್ಲಿನ ಪ್ರಾಂತ್ಯ ಪ್ರವಾಸೋದ್ಯಮದಲ್ಲಿ ದಾಪುಗಾಲಿಡುತ್ತದೆ ಎಂದು ಹೇಳಿದ ಮೋಹನ್ ಗೌಡ, ೨೦೨೧ ರಲ್ಲಿ ನಿರ್ಮಾಣವಾದ ಕಾಶಿ ವಿಶ್ವನಾಥ ಮಂದಿರ ಹಾಗೂ ೨೦೨೩ ರಲ್ಲಿ ಆದ ರಾಮಮಂದಿರ ನಿರ್ಮಾಣವೇ ಸಾಕ್ಷಿ ಎಂದು ಅವರು ಹೇಳಿದರು. ಕುಶಾಲನಗರದ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್ ಮಾತನಾಡಿ, ಹಿಂದೂಗಳ ಒಗ್ಗಟ್ಟಿನ ಪ್ರದರ್ಶನ ಮುಖ್ಯವಾಗಿದೆ. ಸ್ವಾರ್ಥ ರಾಜಕಾರಣಿಗಳು ಹಿಂದೂಗಳ ಅವಸಾನ ಹಾಗೂ ಹಿಂದೂ ದೇವಾಲಯಗಳ ವಿನಾಶಕ್ಕೆ ಹುನ್ನಾರ ಮಾಡುತ್ತಿದ್ದರೂ ಕೂಡ ಹಿಂದೂಗಳು ಒಟ್ಟಾಗಿ ಪ್ರತಿರೋಧಿಸದಿರುವುದು ಮುಖ್ಯ ಕಾರಣವಾಗಿದೆ. ಇನ್ನಾದರೂ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಪ್ರತಿ ಮನೆ ಮನೆಗಳಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸುವ ಮೂಲಕ ಹಿಂದೂ ಧರ್ಮದ ರಕ್ಷಣೆ ಹಾಗೂ ಸಂವರ್ಧನೆಗೆ ಶ್ರಮಿಸಬೇಕೆಂದು ದಿನೇಶ್ ಹಿಂದೂ ಬಾಂಧವರಿಗೆ ಕರೆಕೊಟ್ಟರು.

ಕುಶಾಲನಗರದ ದೇವಾಲಯಗಳ ಒಕ್ಕೂಟದ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ಹಿಂದೂ ಜನ ಜಾಗೃತ ಸಮಿತಿಯ ಪ್ರಮುಖರಾದ ಬಿ. ಅಮೃತರಾಜು, ಪವನ್ ಬಿದ್ದಪ್ಪ, ಕೊಲ್ಲಿರ ಧರ್ಮಜ, ಚಂದ್ರ ಮೊಗವೀರ, ದೀಪ ತಿಲಕ್, ಮಮತ ದಿನೇಶ್ ಮೊದಲಾದವರಿದ್ದರು.

ಇದೇ ಸಂದರ್ಭ ಸನಾತನ ಸಂಸ್ಥೆಯ ವಿವಿಧ ಉತ್ಪನ್ನಗಳ ಮಳಿಗೆಗಳನ್ನು ತೆರೆಯಲಾಗಿತ್ತು.