ಮಡಿಕೇರಿ, ಫೆ. ೨೩: ರಾಜ್ಯ ಕಾಂಗ್ರೆಸ್ ಸರಕಾರ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಜಿಲ್ಲಾ ಬಿಜೆಪಿಯ ಎಸ್.ಸಿ. ಹಾಗೂ ಎಸ್.ಟಿ. ಮೋರ್ಚಾ ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿತು.

ದಲಿತರಿಗಾಗಿ ಮೀಸಲಿಟ್ಟ ಹಣ ಗ್ಯಾರಂಟಿಗೆ ವ್ಯಯ ಮಾಡಲಾಗುತ್ತಿದೆ. ಮೊರಾರ್ಜಿ ಶಾಲೆಯ ಅಭಿವೃದ್ಧಿ, ಹೊಸ ಶಾಲೆ ಆರಂಭಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಹಿಂದುಳಿದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಪರಿಶಿಷ್ಟ ವರ್ಗದವರ ಗೃಹ ನಿರ್ಮಾಣ ಯೋಜನೆ ಸ್ಥಗಿತಗೊಂಡಿದೆ. ದಲಿತ ಕುಟುಂಬದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವೂ ಸ್ಥಗಿತಗೊಂಡಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ನೀಡುತ್ತಿದ್ದ ರೂ. ೪ ಸಾವಿರಕ್ಕೂ ಕತ್ತರಿ ಹಾಕಲಾಗಿದೆ. ದಲಿತ ಉದ್ಯಮಿಗಳನ್ನು ರೂಪಿಸುವಲ್ಲಿ ಸರಕಾರ ಆಸಕ್ತಿವಹಿಸಿಲ್ಲ. ಸರಕಾರ ಸಂವಿಧಾನ ಆಶಯ ಪಾಲಿಸುತ್ತಿಲ್ಲ ಸೇರಿದಂತೆ ಇನ್ನಿತರ ಆರೋಪ ಮುಂದಿಟ್ಟು ಪ್ರತಿಭಟನೆ ನಡೆಸಿತು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಮತಬ್ಯಾಂಕ್‌ಗೆ ಮಾತ್ರ ದಲಿತ ಪರ ಎಂದು ಸರಕಾರ ಬಿಂಬಿಸಿಕೊಳ್ಳುತ್ತಿದೆ. ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ರೂ. ೧೧ ಸಾವಿರ ಕೋಟಿ ಅನುದಾನ ಗ್ಯಾರಂಟಿಗಾಗಿ ಬಳಸಲಾಗುತ್ತಿದೆ. ದಲಿತ ವಿರೋಧಿ ನೀತಿಯನ್ನು ಖಂಡಿಸಿ ರಾಜ್ಯ ವ್ಯಾಪಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಉದ್ದೇಶಿತ ಅನುದಾನವನ್ನು ದಲಿತರ ಏಳಿಗೆಗೆ ಬಳಸಬೇಕೆಂದು ಆಗ್ರಹಿಸಿದರು.

ಎಸ್.ಸಿ. ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ. ರವಿ ಮಾತನಾಡಿ, ಸಿದ್ದರಾಮಯ್ಯ ಸರಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಯಾವುದೇ ಇಲಾಖೆಯಲ್ಲಿಯೂ ಅನುದಾನವಿಲ್ಲ. ಇದರಿಂದ ಜನಾಂಗದ ಶ್ರೇಯೋಭಿವೃದ್ಧಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರುಗಳಾದ ಪಳೆಯಂಡ ರಾಬಿನ್ ದೇವಯ್ಯ, ಬಿ.ಬಿ. ಭಾರತೀಶ್, ಜಿಲ್ಲಾ ವಕ್ತಾರ ಸುಬ್ರಮಣ್ಯ ಉಪಾಧ್ಯಯ, ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ನೆಲ್ಲೀರ ಚಲನ್, ಎಸ್.ಟಿ. ಮೋರ್ಚಾದ ರಾಜ್ಯ ಉಪಾಧ್ಯಕ್ಷೆ ಕೆ.ಆರ್. ಮಂಜುಳಾ, ಎಸ್.ಟಿ. ಮೋರ್ಚಾದ ಜಿಲ್ಲಾಧ್ಯಕ್ಷ ಪರಮೇಶ್ವರ್, ವೀರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾ ಉಪಾಧ್ಯಕ್ಷ ಮನು ರೈ ಹಾಜರಿದ್ದರು.