ಚೆಟ್ಟಳ್ಳಿ, ಫೆ. ೨೩: ಪ್ರತಿನಿತ್ಯ ಸಂಜೆಯಾದೊಡನೆ ಕಾಡಾನೆಗಳ ಹಿಂಡು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಹಣ್ಣಿನ ತೋಟಗಳಿಗೆ ಲಗ್ಗೆ ಇಟ್ಟು ನಾಶಪಡಿಸುತ್ತಿರುವ ಹಿನ್ನೆಲೆ ಇಂತಹ ಕೆಲವೊಂದು ಬ್ಲಾಕ್ಗಳನ್ನು ಎಲಿಫೆಂಟ್ (ಆನೆ) ಬ್ಲಾಕ್ ಎಂದು ಅಭಿವೃದ್ಧಿಪಡಿಸದೇ ಹಾಗೇ ಬಿಡಲಾಗಿದೆ. ತೋಟಗಾರಿಕಾ ಕ್ಷೇತ್ರದಲ್ಲಿ ಸಾಮಾನ್ಯವಾಗಿ ವಿವಿಧ ಬಗೆಗಳ ಹಣ್ಣುಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ. ಉದಾಹರಣೆ ಪಪ್ಪಾಯ ಬೆಳೆಯುವ ಪ್ರದೇಶವನ್ನು ಪಪ್ಪಾಯ ಬ್ಲಾಕ್, ಹಾಗೆಯೇ ಸಪೋಟ ಬೆಳೆಯುವ ಪ್ರದೇಶವನ್ನು ಸಪೋಟ ಬ್ಲಾಕ್ ಎಂದು ಗುರುತಿಸಲಾಗಿದೆ. ಇದೀಗ ಆನೆಗಳು ಪ್ರತಿನಿತ್ಯ ಲಗ್ಗೆ ಇಟ್ಟು ತಮ್ಮ ಹೊಟ್ಟೆಪಾಡಿಗೆ ಧ್ವಂಸ ಮಾಡುವ ಪ್ರದೇಶವನ್ನು ಕೇಂದ್ರದ ವತಿಯಿಂದ ಅಭಿವೃದ್ಧಿಪಡಿಸದೆ ಹಾಗೆಯೇ ಬಿಡಲಾಗಿದೆ. ಅಲ್ಲಿನ ಸಿಬ್ಬಂದಿ ಇದನ್ನು ‘ಎಲಿಫೆಂಟ್ ಬ್ಲಾಕ್’ ಎಂದು ಕರೆಯುತ್ತಾರೆ.
ಮೀನುಕೊಲ್ಲಿ ಕಾಡಾನೆಗಳದ್ದೇ ಉಪಟಳ
ಬೇಸಿಗೆಯ ಸಮಯದಲ್ಲಿ ಕಾಡಾನೆಗಳು ಆಹಾರ ಅರಸಿ ಪಕ್ಕದ ತೋಟಗಳಿಗೆ ಲಗ್ಗೆ ಇಡುವುದರ ಜೊತೆಗೆ ಮೀನುಕೊಲ್ಲಿ ಉಪಮೀಸಲು ಅರಣ್ಯದ ಸಮೀಪದ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಕ್ಕೆ ದಾಳಿ ಮಾಡಿ ನಿತ್ಯವೂ ಉಪಟಳ ನೀಡುತ್ತಿದ್ದು, ವಿವಿಧ ಹಣ್ಣಿನ ಗಿಡಗಳನ್ನು ನಾಶಪಡಿಸುತ್ತಿವೆ.
ಕೇಂದ್ರೀಯ ತೋಟಗಾರಿಕಾ ಕೇಂದ್ರವು ೨೪೦ ಎಕರೆ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ದೇಶಿ-ವಿದೇಶಿ ಹಣ್ಣುಗಳಿವೆÀ. ವಿವಿಧ ಸಂಶೋಧಿತ ತಳಿಗಳು ಹಾಗೂ ತರಕಾರಿ ಬೆಳೆಗಳನ್ನು ಪ್ರಾಯೋಗಿಕವಾಗಿ ಬೆಳೆಸಲಾಗುತ್ತಿದೆ. ೫ ಬ್ಲಾಕ್ಗಳಲ್ಲಿ ಸುಮಾರು ೪೦ ವರ್ಷಗಳ ಸಪೋಟ ಗಿಡಗಳಿವೆ. ಜನವರಿ ತಿಂಗಳಿನಲ್ಲಿ ಇವು ಫಸಲಿಗೆ ಬರುತ್ತವೆ.
ಕಾಡಾನೆಗಳು ಹುಲುಸಾಗಿ ಬೆಳೆದು ನಿಂತ ಸಪೋಟ ಹಣ್ಣಿನ ಗಿಡಗಳನ್ನು ಮುರಿದು ಹಣ್ಣನೆಲ್ಲ ತಿಂದು ನಾಶಪಡಿಸುತ್ತಿವೆ ಎಂದು ಕೇಂದ್ರದ ಮೇಲ್ವಿಚಾರಕ ಡಾ.ರಾಜೇಂದ್ರನ್ ಅವರು ಮಾಹಿತಿ ಇತ್ತಿದ್ದಾರೆ. ಕಾಡಾನೆಗಳು ಹೆಚ್ಚಾಗಿ ನಾಶಪಡಿಸುವ ಹಣ್ಣಿನ ತೋಟವಿರುವ ಬ್ಲಾಕ್ಗಳನ್ನು ಎಲಿಫೆಂಟ್ ಬ್ಲಾಕೆಂದು ಪರಿಗಣಿಸಿ ಅಭಿವೃದ್ಧಿಪಡಿಸದೇ ಹಾಗೇ ಬಿಡಲಾಗಿದ್ದು, ಕಾಡಾನೆಗಳು ಅದೇ ಬ್ಲಾಕಿಗೆ ಬಂದು ಹಣ್ಣಿನ ಗಿಡಗಳನೆಲ್ಲ ಮುರಿದು ಫಸಲನ್ನು ನಾಶ ಪಡಿಸಿ ಕಾಡಿಗೆ ಹಿಂದಿರುಗುತ್ತಿವೆ.
ಕಾಡಾನೆಗೆ ನಿತ್ಯವೂ ಕಾವಲು
ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗುವ ಗಿಡಗಳನೆಲ್ಲ ಕಾಡಾನೆಗಳು ನಾಶಪಡಿಸದಂತೆ ಸಿಬ್ಬಂದಿಗಳು ರಾತ್ರಿಯಿಡೀ ಕಾವಲು ಕಾಯುತ್ತಾ ಕಾಡಾನೆಗಳನ್ನು ಅರಣ್ಯಕ್ಕೆ ಎಷ್ಟೇ ಓಡಿಸಿದರು. ಮತ್ತೊಂದೆಡೆಯಿAದ ಬಂದು ತೋಟದೊಳಗೆಲ್ಲ ಓಡಾಡಿ ಹಣ್ಣಿನ ಗಿಡಗಳನೆಲ್ಲ ನಾಶಪಡಿಸುತ್ತಿವೆ.
-ಪುತ್ತರಿರ ಕರುಣ್ ಕಾಳಯ್ಯ