ಮಡಿಕೇರಿ, ಫೆ. ೨೩: ೧೦ ಹೆಚ್.ಪಿ. ತನಕದ ಪಂಪ್ಸೆಟ್ಗಳಿಗೆ ವಿದ್ಯುತ್ ಕಡಿತಗೊಳಿಸಿರುವುದನ್ನು ವಿರೋಧಿಸಿ ಕಳೆದ ೩ ದಿನಗಳಿಂದ ನಗರದ ಚೆಸ್ಕಾಂ ಕಚೇರಿ ಎದುರು ಹಮ್ಮಿಕೊಂಡಿದ್ದ ರೈತರ ಹೋರಾಟ ಇಂದು ಮುಕ್ತಾಯಗೊಂಡಿತು.
ಸುಂಟಿಕೊಪ್ಪ ಹೋಬಳಿ ರೈತರು ಹಾಗೂ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಕಡಿತಗೊಳಿಸಿದ ವಿದ್ಯುತ್ ಸಂಪರ್ಕವನ್ನು ಮರು ಒದಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು. ತಾ. ೨೨ ರಂದು ಮರು ಸಂಪರ್ಕದ ಭರವಸೆ ನೀಡಿದರೂ ರೈತರು ಸಂಪರ್ಕ ಒದಗಿಸುವ ತನಕ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಹೋರಾಟ ಮುಂದುವರೆಸಿದ್ದರು.
ಮೈಸೂರಿನ ಮುಖ್ಯ ಅಭಿಯಂತರ ಮಹದೇವ ಪ್ರಸನ್ನ ಇಂದು ಸ್ಥಳಕ್ಕಾಗಮಿಸಿ ಈ ಬಗ್ಗೆ ಮಾಹಿತಿ ನೀಡಿ, ಮರು ಸಂಪರ್ಕ ಕಲ್ಪಿಸಿದ ಬಗ್ಗೆ ತಿಳಿಸಿದ ಮೇರೆ ರೈತರು ಪ್ರತಿಭಟನೆ ಸ್ಥಗಿತಗೊಳಿಸಿದರು.
ರೈತ ಸಂಘ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಈ ಬಗ್ಗೆ ಪ್ರತಿಕ್ರಿಯಿಸಿ ರೈತರಿಗೆ ವಿನಾಕಾರಣ ಕಿರುಕುಳ ನೀಡಬಾರದು. ಉಚಿತ ವಿದ್ಯುತ್ ಒದಗಿಸಬೇಕು. ಮುಂದೆ ಇದೇ ರೀತಿ ಸಮಸ್ಯೆ ನೀಡಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.