ಮಡಿಕೇರಿ, ಫೆ. ೨೨: ಹತ್ತು ಹೆಚ್.ಪಿ. ತನಕದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದನ್ನು ವಿರೋಧಿಸಿ ನಿನ್ನೆ ದಿನ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ರೈತರು ಚೆಸ್ಕಾಂ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಇಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮನು ಸೋಮಯ್ಯ ಹಾಗೂ ಸದಸ್ಯರು ಪಾಲ್ಗೊಂಡರು. ಪ್ರತಿಭಟನೆಯ ಪರಿಣಾಮವಾಗಿ ಮುಂದಿನ ಆದೇಶದವರೆಗೆ ರೈತರ ೧೦ ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಮರು ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮೇಲಾಧಿಕಾರಿಗಳಿಂದ ಜಿಲ್ಲಾ ಚೆಸ್ಕಾಂ ಇಇ ಅವರಿಗೆ ನಿರ್ದೇಶನ ನೀಡಲಾಗಿದೆ.

ಚೆಸ್ಕಾಂನ ಮುಖ್ಯ ಅಭಿಯಂತರರಾದ ಮಹದೇವಸ್ವಾಮಿ ಪ್ರಸನ್ನ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಚೆಸ್ಕಾಂನ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ

(ಮೊದಲ ಪುಟದಿಂದ) ಮಹದೇವಸ್ವಾಮಿ ಪ್ರಸನ್ನ ಅವರು ಕೂಡಲೇ ಪಂಪ್‌ಸೆಟ್‌ಗಳಿಗೆ ಮರು ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಜಿಲ್ಲೆಯ ಚೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮನು ಸೋಮಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ. ಅಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸಂದರ್ಭ ಕೆಲವೆಡೆ ಪಂಪ್‌ಸೆಟ್‌ಗಳು ಸುಟ್ಟು ಹೋಗಿರುವ ಬಗ್ಗೆಯೂ ಮುಖ್ಯ ಅಭಿಯಂತರರ ಗಮನ ಸೆಳೆದಾಗ ಈ ಬಗ್ಗೆ ಪರಿಶೀಲಿಸಿ ಸಂಬAಧಿಸಿದವರ ವಿರುದ್ಧ ಕ್ರಮಕೈಗೊಳ್ಳುವುದಾಗಿಯೂ ಹಾಗೂ ಸದ್ಯದಲ್ಲಿಯೇ ಈ ಎಲ್ಲಾ ವಿಚಾರಗಳ ಬಗ್ಗೆ ಉನ್ನತಾಧಿಕಾರಿಗಳು, ಜನಪ್ರತಿನಿಧಿಗಳ ಸಭೆ ನಡೆಸುವುದಾಗಿಯೂ ಭರವಸೆ ನೀಡಿದ್ದಾರೆ ಎಂದು ಮನು ಸೋಮಯ್ಯ ಹೇಳಿದರು.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಚೆಸ್ಕಾಂ ಕಾರ್ಯಪಾಲಕ ಅಭಿಯಂತರರಾದ ಅನಿತಾ ಬಾಯಿ, ಮುಂದಿನ ಆದೇಶದವರೆಗೆ ರೈತರ ೧೦ ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಮರುವಿದ್ಯುತ್ ಸಂಪರ್ಕ ಒದಗಿಸುವಂತೆ ಮೇಲಾಧಿಕಾರಿಗಳಿಂದ ಆದೇಶ ಬಂದಿದ್ದು, ಅದರನ್ವಯ ಜಿಲ್ಲೆಯ ಎಇಇ, ಸೆಕ್ಷನ್ ಅಧಿಕಾರಿಗಳಿಗೆ ಮರುವಿದ್ಯುತ್ ಸಂಪರ್ಕ ಒದಗಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ವಿದ್ಯುತ್ ಮರು ಸಂಪರ್ಕ ಒದಗಿಸುವ ಕಾರ್ಯ ಸಂಪೂರ್ಣವಾಗಿ ಮುಗಿಯುವವರೆಗೂ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಮನು ಸೋಮಯ್ಯ ಹೇಳಿದ್ದಾರೆ.