ಕೂಡಿಗೆ, ಫೆ. ೨೨: ಹಾರಂಗಿಯಲ್ಲಿರುವ ಜಿಲ್ಲೆಯ ಎರಡನೇ ಸಾಕಾನೆ ಶಿಬಿರ ಹಾಗೂ ಟ್ರೀ ಪಾರ್ಕ್ ಅಭಿವೃದ್ಧಿಪಡಿಸುವ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಅರಣ್ಯ ಇಲಾಖೆಯ ವತಿಯಿಂದ ಕೇಂದ್ರದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಇಲಾಖೆಯ ವತಿಯಿಂದ ಈಗಾಗಲೇ ರೂ. ೮೪ ಲಕ್ಷ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ವಿವಿಧ ಕಾಮಗಾರಿಗಳ ಆರಂಭಕ್ಕೆ ಚಾಲನೆ ನೀಡಲಾಗಿದೆ.
ಪ್ರಮುಖವಾಗಿ ಸಾಕಾನೆ ಶಿಬಿರದಲ್ಲಿ ೧೫ ಲಕ್ಷ ವೆಚ್ಚದಲ್ಲಿ ಶಿಬಿರದಲ್ಲಿ ಕೊಠಡಿಗಳ ನಿರ್ಮಾಣ, ನಂತರ ನೀರಿನ ಸೌಲಭ್ಯ ವ್ಯವಸ್ಥೆಗೆ ಅನುಕೂಲವಾಗುವಂತೆ ಕೊಳವೆ ಬಾವಿಗಳ ಕೊರೆಸುವಿಕೆ, ಕೇಂದ್ರದಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಕೇಂದ್ರದ ಸುತ್ತಲೂ ಸೋಲಾರ್ ಬೇಲಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಎಂ. ಎ. ರತನ್ ಕುಮಾರ್ ತಿಳಿಸಿದ್ದಾರೆ.
೮೪ ಲಕ್ಷ ರೂ. ವೆಚ್ಚದಲ್ಲಿ ಪ್ರಮುಖವಾಗಿ ಸಾಕಾನೆ ಶಿಬಿರ ಕೇಂದ್ರಕ್ಕೆ ತೆರಳುವ ಮುಖ್ಯ ದ್ವಾರದ ಸಮೀಪದಲ್ಲಿ ತಾತ್ಕಾಲಿಕವಾಗಿ ಸಾಕಾನೆಗಳ ತಂಗುದಾಣವನ್ನು ನಿರ್ಮಾಣ ಮಾಡಲಾಗುವುದು, ಸಾಕಾನೆಗಳ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಬಿಸಿಲು ಮತ್ತು ಮಳೆಯಿಂದಾಗಿ ಆನೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಗಳು ಅಗುದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ಇಲಾಖೆಯ ಸೂಚನೆ ಅನ್ವಯ ತಾತ್ಕಾಲಿಕ ಆನೆ ತಂಗುದಾಣವನ್ನು ನಿರ್ಮಾಣ ಮಾಡಲಾಗುವುದು.
ಶಿಬಿರದ ಕೇಂದ್ರಕ್ಕೆ ಬರುವ ರಾಜ್ಯ ಮತ್ತು ಅಂತರರಾಜ್ಯ ಪ್ರವಾಸಿಗರಿಗೆ ಅನುಕೂಲವಾಗುವಂತೆ ವಿವಿಧ ಹಂತಗಳಲ್ಲಿ ವಿವಿಧ ಕಾಮಗಾರಿಗಳನ್ನು ಆರಂಭ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಇಲಾಖೆಯ ನಿಯಮಾನುಸಾರ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ವಾಹನದ ವ್ಯವಸ್ಥೆ ಮತ್ತು ಇತರೆ ಸೌಲಭ್ಯಗಳ ಬಗ್ಗೆ ರಾಜ್ಯಮಟ್ಟಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ, ಇಲಾಖೆಯು ನಿಯಮಾನುಸಾರ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳುವ ಮೂಲಕ ಪ್ರವಾಸಿಗರಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಎಂ.ಎ. ರತನ್ ಕುಮಾರ್ ತಿಳಿಸಿದ್ದಾರೆ.