*ಸಿದ್ದಾಪುರ, ಫೆ. ೨೧: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಡಿಕೇರಿ ರಸ್ತೆಯಲ್ಲಿ ವಾಸವಿರುವ ವಿಶೇಷಚೇತನರಾದ ನಿಖಿಲ್ ಹಾಗೂ ನೂರ್ ಮಹಮ್ಮದ್ ಎಂಬವರಿಗೆ ಸೋಲಾರ್ ದೀಪ ನೀಡದೆ ಹಣ ಡ್ರಾ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಗ್ರಾಮಸಭೆಯಲ್ಲಿ ಮಾತನಾಡಿರುವ ಸಿಪಿಐಎಂ ಮುಖಂಡ ರಮೇಶ್, ಇಬ್ಬರು ಫಲಾನುಭವಿಗಳಿಗೆ ಸೋಲಾರ್ ದೀಪ ನೀಡಿರುವುದಾಗಿ ಹೇಳಿ ಗ್ರಾ.ಪಂ. ತಲಾ ೨೪,೮೯೯ ರೂ.ಗಳನ್ನು ಬಿಡುಗಡೆ ಮಾಡಿದೆ. ಆದರೆ ನಿಖಿಲ್ ಹಾಗೂ ನೂರ್ ಮಹಮ್ಮದ್ ಅವರುಗಳು ನಮಗೆ ಸೋಲಾರ್ ದೀಪ ಸಿಕ್ಕಲ್ಲವೆಂದು ದೂರಿಕೊಂಡಿದ್ದಾರೆ. ಈ ಬಗ್ಗೆ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ನೋಡಲ್ ಅಧಿಕಾರಿ ನಾಗರಾಜು ಅವರು ಪ್ರಕರಣದ ಕುರಿತು ತನಿಖೆ ನಡೆಸುವ ಭರವಸೆ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಮೇಶ್, ಪ್ರತಿ ಪ್ರಕರಣ ಬೆಳಕಿಗೆ ಬಂದಾಗಲೂ ತನಿಖೆ ನಡೆಸುವುದಾಗಿ ಭರವಸೆ ದೊರೆಯುತ್ತದೆ. ಆದರೆ ತನಿಖಾ ವರದಿಯ ನಂತರ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲವೆಂದು ಆರೋಪಿಸಿದರು.
ಕಳೆದ ಆಡಳಿತ ಮಂಡಳಿಯಲ್ಲಿ ಸ್ಟೇಷನರಿ ಖರ್ಚು ವೆಚ್ಚವೆಂದು ಸುಮಾರು ರೂ. ೧೦ ಲಕ್ಷ ಡ್ರಾ ಮಾಡಲಾಗಿದೆ. ಇದರ ಬಗ್ಗೆ ತಾನು ದೂರಿಕೊಂಡಾಗಲೂ ತನಿಖೆಯ ಭರವಸೆ ದೊರೆತಿತ್ತು. ಆದರೆ ಇಲ್ಲಿಯವರೆಗೆ ರೂ. ೧೦ ಲಕ್ಷ ಏನಾಯಿತು ಎನ್ನುವ ಬಗ್ಗೆ ಲೆಕ್ಕಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲಾ ಪ್ರಕರಣಗಳ ಬಗ್ಗೆ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ರಮೇಶ್ ತಿಳಿಸಿದರು. ಗ್ರಾ.ಪಂ. ಅಧ್ಯಕ್ಷೆ ಪ್ರೇಮ ಗೋಪಾಲ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದರು.