ಮಡಿಕೇರಿ, ಫೆ. ೨೨: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂತಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ನಗರದ ಗಾಂಧಿ ಭವನದಲ್ಲಿ ಆಚರಿಸಲಾಯಿತು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರು ಸಂತಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ ಸಂತ ಕವಿ ಶ್ರೇಷ್ಠ ದಾರ್ಶನಿಕ ಕವಿ ಸರ್ವಜ್ಞ ಅವರು ಕನ್ನಡದಲ್ಲಿ ತ್ರಿಪದಿ ಸಾಲುಗಳ ಪದ್ಯ ಬರೆಯುವ ಮೂಲಕ ಮನೆ ಮಾತಾಗಿದ್ದಾರೆ ಎಂದು ತಿಳಿಸಿದರು.
ಕವಿ ಸರ್ವಜ್ಞ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಈ ಎಲ್ಲಾ ಮಹನೀಯರ ಜೀವನ ಸಂದೇಶಗಳನ್ನು ತಿಳಿದುಕೊಂಡು ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರು ಹೇಳಿದರು.
ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ವೆಂಕಟನಾಯಕ್ ಮಾತನಾಡಿ, ಕವಿ ಸರ್ವಜ್ಞ ಅವರು ಸಾವಿರಕ್ಕೂ ಹೆಚ್ಚು ತ್ರಿಪದಿಗಳನ್ನು ಬರೆದಿದ್ದಾರೆ. ಇವರ ಬರಹಗಳು ಇಂದಿಗೂ ಸಹ ಪ್ರಸ್ತುತವಾಗಿದೆ ಎಂದರು. ಜನ ಸಾಮಾನ್ಯರಿಗೆ ಅರ್ಥ ವಾಗುವ ರೀತಿಯಲ್ಲಿ ಅದ್ಭುತ ತ್ರಿಪದಿಗಳನ್ನು ರಚಿಸಿದ್ದಾರೆ. ಕವಿ ಸರ್ವಜ್ಞ ಅವರ ಪದ್ಯಗಳನ್ನು ಮಕ್ಕಳಿಗೆ ತಿಳಿಸಬೇಕು. ಕವಿ ಸರ್ವಜ್ಞ ಅವರು ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ.
ತ್ರಿಪದಿ ಸಾಲುಗಳ ಮೂಲಕ ವೈಚಾರಿಕತೆ ಮತ್ತು ವೈಜ್ಞಾನಿಕತೆ ಮೂಲಕ ಜಾಗೃತಿ ಮೂಡಿಸಿದ್ದಾರೆ ಎಂದು ಹೇಳಿದರು. ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟçದಲ್ಲಿ ತಮ್ಮದೇ ಆದ ಪ್ರಭಾವ ಬೀರಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಕುಲಾಲ-ಕುಂಬಾರ ಮಡಿಕೆ ತಯಾರಿಕರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಪಿ. ದಿನೇಶ್ ಅವರು ಮಾತನಾಡಿ ಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಅವರ ವಿಚಾರಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಕವಿ ಸರ್ವಜ್ಞರು ಜನ ಸಾಮಾನ್ಯರಿಗೆ ಒಪ್ಪಿಗೆ ಆಗುವ ರೀತಿಯಲ್ಲಿ ತ್ರಿಪದಿಗಳನ್ನು ಬರೆದು ಜಾಗೃತಿ ಮೂಡಿಸಿದ್ದಾರೆ ಎಂದು ಹೇಳಿದರು.
ಮರಾಠ ಸಮಾಜದ ಜಿಲ್ಲಾಧ್ಯಕ್ಷರಾದ ಎಸ್.ಆರ್.ಅರುಣ್ ರಾವ್ ಅವರು ಮಾತನಾಡಿ ಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಸಮಾಜಕ್ಕೆ ನೀಡಿರುವ ಸಂದೇಶ ಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದರು. ಛತ್ರಪತಿ ಶಿವಾಜಿ ಮಹಾ ರಾಜರು ಮಹಿಳೆಯರಿಗೆ ಸಮಾನ ಅವಕಾಶ ಮತ್ತು ರಕ್ಷಣೆಗೆ ಒತ್ತು ನೀಡಿದ್ದರು. ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯದ ದೊರೆ ಯಾಗಿದ್ದಾರೆ ಎಂದು ಹೇಳಿದರು. ಕುಂಬಾರ ಕುಲಾಲ ಸಂಘದ ಮಾಜಿ ಅಧ್ಯಕ್ಷ ನಾಣಯ್ಯ ಪ್ರಮುಖರಾದ ಕುಶಾಲಪ್ಪ, ಚಂದ್ರಶೇಖರ್, ದಾಮೋದರ, ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ನಿವೃತ್ತ ಅಧ್ಯಾಪಕ ಬಿ.ಸಿ. ಶಂಕರಯ್ಯ ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.