ಶನಿವಾರಸಂತೆ, ಫೆ. ೨೨: ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣದ ಜತೆಗೆ ಸಹಪಠ್ಯ ಚಟುವಟಿಕೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಇದು ಹೆಮ್ಮೆಯ ವಿಚಾರವಾಗಿದೆ ಎಂದು ಸೋಮ ವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮೀಪದ ಕೊಡ್ಲಿಪೇಟೆ ಹೋಬಳಿಯ ದೊಡ್ಡಕೊಡ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಪೋಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಯಲ್ಲಿ ಆಂಗ್ಲ ಮಾಧ್ಯಮ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ನಡೆಸಲು ಅವಕಾಶವಿದೆ. ಎಸ್.ಡಿ.ಎಂ.ಸಿ. ಮತ್ತು ಗ್ರಾಮಸ್ಥರು ಹೆಚ್ಚಿನ ಪ್ರಾಧಾನ್ಯತೆ ನೀಡುವುದಾದರೆ ಸರ್ಕಾರಕ್ಕೆ ಇಲಾಖೆ ಮೂಲಕ ಮನವಿ ಸಲ್ಲಿಸುತ್ತೇವೆ. ಪೋಷಕರು ಶಿಕ್ಷಕರ ಮೇಲೆ ನಂಬಿಕೆ ಇಡಬೇಕು. ಶಿಕ್ಷಕರು ಉನ್ನತ ಶಿಕ್ಷಣ ಮುಗಿಸಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಶಿಕ್ಷಕ ಹುದ್ದೆಗೆ ಬಂದಿರುತ್ತಾರೆ. ಕಾನ್ವೆಂಟ್ ವ್ಯಾಮೋಹದಲ್ಲಿ ಪೋಷಕರು ಎಲ್ಲೋ ಒಂದು ಕಡೆ ಜಾರಿರುತ್ತಾರೆ ಎಂದರು. ಸಮಾರಂಭದಲ್ಲಿ ಮಿಮಿಕ್ರಿ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಶಶಾಂಕ್, ಗಣ್ಯರು ಹಾಗೂ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಠ್ಯ, ಸಹಪಠ್ಯ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಶ್ ಮಾತನಾಡಿ, ಪೋಷಕರು ಮನಸ್ಸು ಮಾಡಿ ಮಕ್ಕಳನ್ನು ದಾಖಲಿಸಿದರೆ ಶಾಲೆಯನ್ನು ಉಳಿಸಬಹುದು ಎಂದು ಮನವಿ ಮಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ತ್ಯಾಗರಾಜ್, ಸದಸ್ಯರಾದ ಕೆ.ಆರ್. ಚಂದ್ರಶೇಖರ್, ನಗೀನಾ ಬಾನು, ಕುಮಾರ್, ನಿವೃತ್ತ ಸೈನಿಕ ದೇವರಾಜ್, ಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ಯೋಗಾನಂದ್, ವಿದ್ಯಾರ್ಥಿ ಸಂಘದ ಅಧ್ಯಕ್ಷ, ಪ್ರಗತಿಪರ ಕೃಷಿಕ ದಿವಾಕರ್, ತಾಲೂಕು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಪಿ. ಕವಿತಾ, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಜೆ.ಡಿ. ಸುರೇಶ್, ಕೊಡ್ಲಿಪೇಟೆ ಸಮೂಕ ಸಂಪನ್ಮೂಲ ವ್ಯಕ್ತಿ ರವೀಶ್, ಶಾಲಾ ಮುಖ್ಯಶಿಕ್ಷಕ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಸಹಶಿಕ್ಷಕ ಫಯಾಜ್, ಶಿಕ್ಷಕರು, ಅಂಗನವಾಡಿ ಶಿಕ್ಷಕಿ ಪಂಕಜಾ, ಅಕ್ಷರ ದಾಸೋಹ ಸಿಬ್ಬಂದಿ ಹಾಜರಿದ್ದರು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು.