ಕುಶಾಲನಗರ, ಫೆ. ೨೨: ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಕೊಳವೆ ಬಾವಿ ನಿರ್ಮಾಣ ಮಾಡುವ ಬಗ್ಗೆ ಅರಣ್ಯ ಇಲಾಖೆ ಚಿಂತನೆ ಹರಿಸಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಭಾಸ್ಕರ್ ತಿಳಿಸಿದ್ದಾರೆ.
ಅವರು ಮಡಿಕೇರಿ ತಮ್ಮ ಕಚೇರಿಯಲ್ಲಿ ‘ಶಕ್ತಿ’ಯೊಂದಿಗೆ ಮಾತನಾಡಿ, ಬೇಸಿಗೆ ಬಿಸಿಲಿನ ನಡುವೆ ಕೆಲವು ಕಡೆ ಕೆರೆಗಳು ಬತ್ತಿ ಹೋಗುತ್ತಿವೆ. ವಿಶೇಷವಾಗಿ ಅತ್ತೂರು ಮೀಸಲು ಅರಣ್ಯ ಮತ್ತು ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳ ಓಡಾಟ ಅಧಿಕವಾಗಿದ್ದು ವನ್ಯಜೀವಿಗಳಿಗೆ ಅರಣ್ಯದ ಅಂಚಿನಲ್ಲಿ ಅಗತ್ಯ ನೀರಿನ ಸೌಲಭ್ಯ ಕಲ್ಪಿಸಲು ವಿಶೇಷ ತಂತ್ರಜ್ಞಾನದೊAದಿಗೆ ಸೋಲಾರ್ ವಿದ್ಯುತ್ ಬಳಸಿ ಕೊಳವೆ ಬಾವಿ ನಿರ್ಮಾಣ ಸೌಲಭ್ಯ ಕಲ್ಪಿಸಲಾಗುವುದು.
ಈ ಮೂಲಕ ಬೇಸಿಗೆಯಲ್ಲಿ ಅರಣ್ಯದ ಒಳಭಾಗದಲ್ಲಿರುವ ಕೆರೆಗಳನ್ನು ತುಂಬಿಸುವುದು ಹಾಗೂ ಕಾಡಿಗೆ ಆಕಸ್ಮಿಕ ಬೆಂಕಿ ತಗಲಿದ ಸಂದರ್ಭ ಉಂಟಾಗುವ ಹಾನಿ ತಪ್ಪಿಸಲು ಈ ನೀರಿನ ಬಳಕೆ ಮಾಡಲಾಗುವುದು ಎಂದು ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.
ಅವರು ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ಬತ್ತಿ ಹೋಗುತ್ತಿರುವ ಕೆರೆಗಳು’ ವರದಿ ಬಗ್ಗೆ ಸ್ಪಂದಿಸಿದ್ದು, ಅತ್ತೂರು ಅರಣ್ಯದಲ್ಲಿ ಪ್ರಮುಖ ಕೆರೆಯೊಂದು ಹಲವು ವರ್ಷಗಳಿಂದ ವನ್ಯಜೀವಿಗಳಿಗೆ ನಿರಂತರವಾಗಿ ನೀರಿನ ಆಶ್ರಯ ಕಲ್ಪಿಸುತ್ತಿದೆ. ಕೆರೆಯಲ್ಲಿ ನೀರಿನ ಸಂಗ್ರಹ ಇದ್ದರೂ ಅದರಿಂದ ಕೆಳಭಾಗದ ಕೆರೆಗಳಿಗೆ ನೀರಿನ ಹರಿವು ಕ್ಷೀಣಗೊಂಡಿದೆ. ಈ ಹಿನ್ನೆಲೆ ತಕ್ಷಣ ಯೋಜನೆಯನ್ನು ಕಾರ್ಯಗತಗೊಳಿಸಲಾಗುವದು ಎಂದು ಅವರು ಭರವಸೆ ನೀಡಿದ್ದಾರೆ. ಪ್ರಸಕ್ತ ಬೇಸಿಗೆ ಅವಧಿಯಲ್ಲಿ ಕಾಡ್ಗಿಚ್ಚು ಹಬ್ಬದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅವರು ತಿಳಿಸಿದರು. ಅರಣ್ಯದ ಅಂಚಿನಲ್ಲಿ ಬೆಂಕಿ ಅನಾಹುತ ಸಂಭವಿಸದAತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ಮರಗಳ ಹನನ’ ವರದಿಗೆ ಪ್ರತಿಕ್ರಿಯಿಸಿದ ಭಾಸ್ಕರ್ ಅವರು, ಈ ಸಂಬAಧ ಇಲಾಖೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಅಧಿಕಾರಿಗಳು ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ನದಿ ತಟಗಳಲ್ಲಿ ಮರ ಗಿಡಗಳನ್ನು ಬೆಳೆಸುವ ಸಂಬAಧ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದ ಭಾಸ್ಕರ್, ಕಾವೇರಿ ನದಿ ಹಾಗೂ ಜಲಮೂಲಗಳು ನೇರವಾಗಿ ಕಲುಷಿತಗೊಳ್ಳದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕಾಗಿದೆ ಎಂದರು.