ಪಾಲಿಬೆಟ್ಟ, ಫೆ. ೨೨: ರಕ್ತದಾನ ಶ್ರೇಷ್ಠ ದಾನ. ರಕ್ತದಾನ ಮಾಡಿ ಇನ್ನೊಂದು ಜೀವ ಉಳಿಸಿದರೆ ಪುಣ್ಯದ ಫಲ ಸಿಗುತ್ತದೆ ಎಂದು ಪಾಲಿಬೆಟ್ಟ ಆರೋಗ್ಯ ಸಮುದಾಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ವಿಶ್ವಾಸ್ ಅವರು ಹೇಳಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ, ಸಮುದಾಯ ಆರೋಗ್ಯ ಕೇಂದ್ರ ಪಾಲಿಬೆಟ್ಟ, ಕೊಡಗು ಹಿಂದೂ ಮಾಲಯಾಳಿ ಸಮಾಜ ಪಾಲಿಬೆಟ್ಟ, ಗ್ರಾಮ ಪಂಚಾಯಿತಿ ಪಾಲಿಬೆಟ್ಟ ಮತ್ತು ಜೈ ಭಾರತ್ ಪುರುಷರ ಸ್ವ ಸಹಾಯ ಸಂಘ ಪಾಲಿಬೆಟ್ಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಕ್ತಿಯ ಜೀವ ಕಾಪಾಡುವುದಕ್ಕೆ ತುರ್ತು ಸಂದರ್ಭ ರಕ್ತದ ಅವಶ್ಯಕತೆ ಇದೆ. ಅದು ಕೃತಕ ಉತ್ಪಾದನೆ ಸಾಧ್ಯವಿಲ್ಲದ ಕಾರಣ ರಕ್ತದಾನಿ ಗಳಿಂದಲೇ ಸಂಗ್ರಹಿಸಬೇಕು. ಇದಕ್ಕಾಗಿ ಪ್ರತಿಯೊಬ್ಬ ಆರೋಗ್ಯವಂತ ಪುರುಷ, ಮಹಿಳೆಯರು ರಕ್ತದಾನ ಮಾಡುವುದಕ್ಕೆ ಮುಂದಾಗಬೇಕು ಎಂದು ಡಾ. ವಿಶ್ವಾಸ್ ಅವರು ಹೇಳಿದರು.

ಈ ವೇಳೆ ೩೫ಕ್ಕೂ ಅಧಿಕ ಸಾರ್ವಜನಿಕರು ರಕ್ತದಾನ ಮಾಡಿದರು. ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕರುಂಬಯ್ಯ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎ.ಜೆ. ಶೀಬಾ, ವೈದ್ಯರಾದ ಸುನಿಲ್, ಪಾಲಿಬೆಟ್ಟ ಕೊಡಗು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಬಿ. ರಿನೀಶ್, ಜೈ ಭಾರತ್ ಪುರುಷರ ಸಂಘದ ಅಧ್ಯಕ್ಷ ರೇಣು ರೈ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್‌ನ ಕುಸುಮಾ, ಮೋಹಿನಿ ರೈ ಮತ್ತು ತನೀಶ್ ಅವರುಗಳು ಹಾಜರಿದ್ದರು.