ಸೋಮವಾರಪೇಟೆ, ಫೆ. ೨೦: ಪ್ರಾಪರ್ಟಿ ಕಾರ್ಡ್ ಮಾಡಿಕೊಡುವ ಸಂಬAಧ ಜಾಗದ ಸರ್ವೆ ನಡೆಸಲು ರೂ. ೫ ಸಾವಿರಕ್ಕೆ ಬೇಡಿಕೆಯಿಟ್ಟಿದ್ದ ಸೋಮವಾರಪೇಟೆ ಸರ್ವೆ ಇಲಾಖೆಯ ಸರ್ವೆಯರ್ ಮಹದೇವಗೌಡ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಅರ್ಜಿದಾರರಿಂದ ೫ ಸಾವಿರಕ್ಕೆ ಬೇಡಿಕೆಯಿಟ್ಟು, ಮುಂಗಡವಾಗಿ ೧ ಸಾವಿರ ಪಡೆದುಕೊಂಡು, ಉಳಿದ ೪ ಸಾವಿರವನ್ನು ಸ್ವೀಕರಿಸುತ್ತಿದ್ದ ಸಂದರ್ಭ ಲೋಕಾಯುಕ್ತದ ಖೆಡ್ಡಾಕ್ಕೆ ಬಿದ್ದಿದ್ದಾರೆ. ಸರ್ವೆ ಇಲಾಖೆಯ ವಿರುದ್ಧ ಸಾರ್ವಜನಿಕರಿಂದ ಹಲವಷ್ಟು ದೂರುಗಳು ಕೇಳಿಬರುತ್ತಿರುವ ಸಂದರ್ಭವೇ ಈ ಲೋಕಾಯುಕ್ತ ದಾಳಿ ನಡೆದಿದೆ.

ಕಳೆದ ಎರಡು ವರ್ಷಗಳ ಹಿಂದೆಯೇ ಅರ್ಜಿ ಬಂದಿದ್ದರೂ ವಿಲೇವಾರಿ ಮಾಡದೇ ಹಾಗೆಯೇ ಉಳಿಸಿಕೊಂಡು, ಅರ್ಜಿದಾರರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಅಧಿಕಾರಿ, ಇದೀಗ ಲೋಕಾಯುಕ್ತ ದಾಳಿಗೆ ಒಳಗಾಗಿ ನ್ಯಾಯಾಂಗ ಬಂಧನಕ್ಕೆ ಒಳಪಡುವಂತಾಗಿದೆ.

ಘಟನೆಯ ವಿವರ: ಶನಿವಾರಸಂತೆ ಹೆಮ್ಮನೆ ಲೈನ್‌ನ ನಿವಾಸಿ, ವ್ಯಾಪಾರ ವೃತ್ತಿ ಮಾಡಿಕೊಂಡಿರುವ ಅಕ್ರಂ ಪಾಷಾ ಅವರಿಗೆ ಸರ್ವೇ ನಂಬರ್ ೪೬ ರಲ್ಲಿ ಪಿತ್ರಾರ್ಜಿತವಾಗಿ ನಿವೇಶನ ಲಭಿಸಿತ್ತು. ಈ ನಿವೇಶನಕ್ಕೆ ಪ್ರಾಪರ್ಟಿ ಕಾರ್ಡ್ ಮಾಡಿಕೊಡುವ ಸಂಬAಧ ಲಂಚಕ್ಕೆ ಬೇಡಿಕೆಯಿಟ್ಟ ಸರ್ವೆಯರ್ ಮಹದೇವ ಗೌಡ ಅವರು ಇದೀಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕಳೆದ ೨೦೦೯ರಲ್ಲಿ ನಾಲ್ಕು ಜನ ಸಹೋದರರು ಜಾಗವನ್ನು ಭಾಗ ಮಾಡಿಕೊಂಡಿದ್ದರು. ಭಾಗ ಪತ್ರದ ಮೂಲಕ ೧೨ ಸೆಂಟ್ ನಿವೇಶನವು ಅಕ್ರಂ ಪಾಷಾ ಅವರಿಗೆ ಬಂದಿದ್ದು ನಿವೇಶನವು ಇವರ ಸ್ವಾಧೀನದಲ್ಲಿದೆ. ವಿಭಾಗ ಪತ್ರದ ನಂತರ ನೆರೆಮನೆಯವರು ಸುಳ್ಳು ದಾಖಲೆಗಳನ್ನು

(ಮೊದಲ ಪುಟದಿಂದ) ಎ.ಡಿ.ಎಲ್.ಆರ್. ಕಚೇರಿಗೆ ಕೊಟ್ಟು ತಮ್ಮ ಹೆಸರಿಗೆ ಪ್ರಾಪರ್ಟಿ ಕಾರ್ಡ್-೧೧೭೧ ರಂತೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಕ್ರಂ ಪಾಷ ಅವರು ಮೈಸೂರು ವಿಭಾಗದ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರಿಗೆ ದೂರು ಸಲ್ಲಿಸಿದ್ದು, ಅದರನ್ವಯ ನಿವೇಶನದ ಹೊಸ ಪ್ರಾಪರ್ಟಿ ಕಾರ್ಡ್ ಮಾಡಿಕೊಡಲು ಸೋಮವಾರಪೇಟೆ ಎ.ಡಿ.ಎಲ್.ಆರ್. ರವರಿಗೆ ಆದೇಶಿಸಲಾಗಿದೆ.

ಸೋಮವಾರಪೇಟೆ ತಹಶೀಲ್ದಾರ್ ಕಚೇರಿಯಿಂದ ಅರ್ಜಿಯು ಎ.ಡಿ.ಎಲ್.ಆರ್. ಕಚೇರಿಗೆ ಎರಡು ವರ್ಷದ ಹಿಂದೆ ಬಂದಿದ್ದು, ಕಡತವು ಸರ್ವೇಯರ್ ಹೆಚ್.ಕೆ.ಮಹದೇವಗೌಡ ಅವರ ಬಳಿ ಇತ್ತು. ಸರ್ವೆ ಸಂಬAಧಿತ ಕಡತ ವಿಲೇವಾರಿಗೆ ತಾ.೧೯ ರಂದು ಅರ್ಜಿದಾರ ಅಕ್ರಂ ಪಾಷಾ ಅವರಿಗೆ ರೂ. ೫ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ರೂ. ೧ ಸಾವಿರವನ್ನು ಮುಂಗಡವಾಗಿ ಪಡೆದುಕೊಂಡಿದ್ದರು ಎನ್ನಲಾಗಿದೆ. ಉಳಿದ ರೂ. ೪ ಸಾವಿರ ಲಂಚದ ಹಣಕ್ಕೆ ಮತ್ತೆ ಒತ್ತಾಯಿಸಿದ ಹಿನ್ನೆಲೆ ಅರ್ಜಿದಾರರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು, ಇಂದು ಅಪರಾಹ್ನ ೩ ಗಂಟೆಗೆ ಸರ್ವೆ ಇಲಾಖಾ ಕಚೇರಿಯಲ್ಲಿ ಅರ್ಜಿದಾರರಿಂದ ರೂ. ೪ ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ವಶಕ್ಕೆ ಪಡೆದುಕೊಂಡಿದ್ದಾರೆ.

ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಎಂ. ಎಸ್. ಪವನ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ, ಮಡಿಕೇರಿ ಪೊಲೀಸ್ ನಿರೀಕ್ಷಕ ಲೋಕೇಶ್, ಸಿಬ್ಬಂದಿಗಳಾದ ಲೋಹಿತ್, ಮುಖ್ಯಪೇದೆ ಲೋಕೇಶ್, ಮಂಜುನಾಥ್, ಪ್ರವೀಣ್, ಶಶಿಕುಮಾರ್, ಅರುಣ್, ದೀಪಿಕ, ಸಲಾವುದ್ದೀನ್, ಪೃಥ್ವೀಶ್ ಅವರುಗಳು ಭಾಗವಹಿಸಿದ್ದರು.