ಆನೆ ದಾಳಿಗೆ ಮೃತಪಟ್ಟ ಕೇರಳದ ವ್ಯಕ್ತಿಗೆ ಕರ್ನಾಟಕ ಸರ್ಕಾರದಿಂದ ಪರಿಹಾರ
ಬೆಂಗಳೂರು, ಫೆ. ೨೦: ರಾಜ್ಯದಲ್ಲಿ ಸೆರೆಹಿಡಿಯಲಾದ ಆನೆಯಿಂದ ಸಾವಿಗೀಡಾದ ಕೇರಳದ ವ್ಯಕ್ತಿಯ ಕುಟುಂಬಕ್ಕೆ ಕರ್ನಾಟಕ ಸರ್ಕಾರವು ಪರಿಹಾರ ಹಣದ ರೂಪವಾಗಿ ರೂ. ೧೫ ಲಕ್ಷವನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಯನಾಡು ಸಂಸದರಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ತೆರಿಗೆದಾರರ ಹಣವನ್ನು ಕಾಂಗ್ರೆಸ್ ದುರುಪ ಯೋಗಪಡಿಸಿಕೊಳ್ಳುತ್ತಿದೆ. ಅಲ್ಲದೇ ಕರ್ನಾಟಕದಲ್ಲಿ ಸೆರೆಹಿಡಿಯಲಾದ ಆನೆಯ ತುಳಿತಕ್ಕೊಳಗಾಗಿ ಕೇರಳದ ಅಜೀಶ್ ಮೃತಪಟ್ಟಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಬರಗಾಲದಿಂದ ರಾಜ್ಯದಾದ್ಯಂತ ನೂರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ತುರ್ತು ಅಗತ್ಯಗಳ ಬಗ್ಗೆ ಗಮನಹರಿಸುವ ಬದಲು ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ ಎಂದರು.
ಸಹಕಾರ ಸಂಘಗಳ ತಿದ್ದುಪಡಿ ಮಸೂದೆ ಅಂಗೀಕಾರ
ಬೆAಗಳೂರು, ಫೆ. ೨೦: ಎಸ್ಸಿ/ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಯನ್ನು ಖಾತ್ರಿಪಡಿಸುವ ಮೂಲಕ ರಾಜ್ಯದ ಅಪೆಕ್ಸ್ ಬ್ಯಾಂಕ್ ಸೇರಿದಂತೆ ಪ್ರಮುಖ ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲಿ ಮೀಸಲಾತಿ ಆಧಾರದ ಮೇಲೆ ಸರ್ಕಾರದ ನಾಮನಿರ್ದೇಶಿತರ ಸಂಖ್ಯೆಯನ್ನು ಮೂರಕ್ಕೆ ಹೆಚ್ಚಿಸುವ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ, ೨೦೨೪ ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಸಹಕಾರ ಸಂಘಗಳ ತಿದ್ದುಪಡಿ ಮಸೂದೆಯನ್ನು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕರಿಸಿದ್ದು, ಎಸ್ಸಿ/ಎಸ್ಟಿ ಸಮುದಾಯದಿಂದ ಒಬ್ಬರು, ಮಹಿಳೆ ಮತ್ತು ಸಾಮಾನ್ಯ ವರ್ಗದ ಒಬ್ಬರು ನಿರ್ದೇಶಕರಾಗಿರುತ್ತಾರೆ. ಈಗ ೨೨ ಇರುವ ಅಪೆಕ್ಸ್ ಬ್ಯಾಂಕ್ನ ಆಡಳಿತ ಮಂಡಳಿಯ ಸಂಖ್ಯೆ ಇನ್ನುಮುಂದೆ ೨೫ಕ್ಕೆ ಏರಲಿದ್ದು, ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಸರ್ಕಾರ ಮೇಲುಗೈ ಸಾಧಿಸಬಹುದು. ಕೆಲವು ಬಿಜೆಪಿ ಶಾಸಕರು ಮಸೂದೆಯನ್ನು ತೀವ್ರವಾಗಿ ವಿರೋಧಿಸಿದರು. ಸರ್ಕಾರ ಸಹಕಾರಿ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಆದರೆ ಸಹಕಾರ ಸಚಿವ ಕೆಎನ್ ಎನ್ ರಾಜಣ್ಣ ಅವರು, ಅಂತಿಮವಾಗಿ ಕೆಲವು ಲೋಪದೋಷಗಳು ಇದ್ದರೆ, ಸರಿಪಡಿಸಲಾಗುವುದು ಎಂದು ಭರವಸೆ ನೀಡಿ ಮಸೂದೆಯನ್ನು ಅಂಗೀಕರಿಸಿದರು.
ಹಿಮಾಚಲ ಪ್ರದೇಶದ ೨೨೮ ರಸ್ತೆಗಳಲ್ಲಿ ಸಂಚಾರ ಸ್ಥಗಿತ
ಶಿಮ್ಲಾ, ಫೆ. ೨೦: ಹಿಮಾಚಲ ಪ್ರದೇಶದ ಬುಡಕಟ್ಟು ಪ್ರದೇಶಗಳು ಮತ್ತು ಎತ್ತರದ ಬೆಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಹಿಮಪಾತದಿಂದಾಗಿ ನಾಲ್ಕು ರಾಷ್ಟಿçÃಯ ಹೆದ್ದಾರಿಗಳು ಸೇರಿದಂತೆ ಕನಿಷ್ಟ ೨೨೮ ರಸ್ತೆಗಳ ಸಂಚಾರ ನಿರ್ಬಂಧಿಸಲಾಗಿದೆ. ಇದೇ ವೇಳೆ ರಾಜ್ಯದ ಕೆಲವೆಡೆ ಭಾರಿ ಮಳೆಯೂ ಆಗಿದೆ. ಕಳೆದ ೨೪ ಗಂಟೆಗಳಲ್ಲಿ ರೋಹ್ಮಾಂಗ್ ಪಾಸ್ ಪ್ರದೇಶದಲ್ಲಿ ಅತಿ ಹೆಚ್ಚು ೧೩೫ ಸೆಂ.ಮೀ ಹಿಮಪಾತವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಿಲ್ಲರ್ (ಪಾಂಗಿ) ೯೦ ಸೆಂ.ಮೀ, ಚಿತ್ಕುಲ್ ಮತ್ತು ಜಲೋರಿ ಜೋಟ್ ೪೫ ಸೆಂ.ಮೀ, ಕುಕುಮೇರಿ ೪೪ ಸೆಂ.ಮೀ ಮತ್ತು ಗೊಂಡ್ಲಾದಲ್ಲಿ ೩೯ ಸೆಂ.ಮೀ ಹಿಮಪಾತವಾಗಿದೆ. ರಾಜ್ಯದ ಡಾಲ್ಹೌಸಿ, ಸೋಲನ್, ಶಿಮ್ಲಾ ಮತ್ತು ಧರ್ಮಶಾಲಾ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಹಮೀರ್ಪುರ ಜಿಲ್ಲೆಯ ಹಲವು ಭಾಗಗಳಲ್ಲಿ ಮಂಗಳವಾರ ಬೆಳಿಗ್ಗೆ ಗುಡುಗು ಸಹಿತ ಭಾರಿ ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ. ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ ಒಟ್ಟು ೧೬೫ ರಸ್ತೆಗಳನ್ನು ಮತ್ತು ಚಂಬಾದ ೫೨ ರಸ್ತೆಗಳನ್ನು ಮುಚ್ಚಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ. ಹಿಮಪಾತದಿಂದಾಗಿ ಶಿಮ್ಲಾ ಜಿಲ್ಲೆಯ ದೊಡ್ರಾ ಕ್ವಾರ್ ಕೂಡ ರಾಜ್ಯದ ಇತರ ಭಾಗಗಳಿಂದ ಸಂಪರ್ಕ ಕಳೆದುಕೊಂಡಿದೆ.
ಯಾತ್ರೆ ವೇಳೆ ಕಪ್ಪು ಬಾವುಟ ಪ್ರದರ್ಶನ
ಲಖನೌ, ಫೆ. ೨೦: ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೊ ನ್ಯಾಯ ಯಾತ್ರೆ ಸಾಗುತ್ತಿದ್ದ ವೇಳೆ ಕಿಡಿಗೇಡಿಗಳು ಕಪ್ಪು ಬಾವುಟ ಪ್ರದರ್ಶಿ ಸಿದ್ದಾರೆ. ಯಾತ್ರೆ ಸಾಗುತ್ತಿದ್ದ ದಾರಿಯಲ್ಲಿ ಕಟ್ಟಡವೊಂದರ ಮೇಲೆ ನಿಂತಿದ್ದ ಇಬ್ಬರು ವ್ಯಕ್ತಿಗಳು ಕಪ್ಪು ಬಾವುಟ ಪ್ರದರ್ಶಿಸುತ್ತಿರುವ ವೀಡಿಯೋ ಹರಿದಾಡುತ್ತಿದೆ.
ನ್ಯಾಯಾಲಯದಲ್ಲಿ ಮತ ಎಣಿಕೆ - ಫಲಿತಾಂಶ ಘೋಷಣೆ
ನವದೆಹಲಿ, ಫೆ. ೨೦: ಚಂಡೀಗಢ ಮೇಯರ್ ಚುನಾವಣೆಯ ಮತ ಎಣಿಕೆಗೆ ಸಾಕ್ಷಿಯಾಗಿದ್ದಲ್ಲದೆ, ಫಲಿತಾಂಶವನ್ನೂ ಘೋಷಿಸುವ ಮೂಲಕ ಸುಪ್ರೀಂ ಕೋರ್ಟ್ ಇಂದು ಹೊಸ ಇತಿಹಾಸ ನಿರ್ಮಿಸಿದೆ. ತಾ. ೨೦ ರ ಬೆಳಿಗ್ಗೆ ಮತಪತ್ರಗಳನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ, ಎಂಟು ಮತಪತ್ರಗಳನ್ನು ವಿರೂಪಗೊಳಿಸಿ ಅಮಾನ್ಯಗೊಳಿಸಿದ ಚುನಾವಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿತು. ನಂತರದ ಪ್ರಕ್ರಿಯೆಯನ್ನು ಚುನಾವಣಾ ಆಯೋಗಕ್ಕೆ ನೀಡಲು ನಿರಾಕರಿಸಿತು. ಹೊಸದಾಗಿ ಚುನಾವಣೆ ನಡೆಸುವಂತೆ ಕೋರಿದ್ದ ಬಿಜೆಪಿಯ ಮನವಿಯನ್ನೂ ತಿರಸ್ಕರಿಸಿತು. ಮತ ಎಣಿಕೆಯ ಬಳಿಕ ಅರ್ಜಿದಾರ ಎಎಪಿಯ ಕುಲದೀಪ್ ಕುಮಾರ್ ಚಂಡೀಗಢ ಮುನ್ಸಿಪಲ್ ಕಾರ್ಪೋರೇಷನ್ನ ಮೇಯರ್ ಹುದ್ದೆಗೆ ಮಾನ್ಯವಾಗಿ ಚುನಾಯಿತರಾಗಿದ್ದಾರೆ ಎಂದು ನ್ಯಾಯಾಧೀಶರು ಘೋಷಿಸಿದರು. ಚುನಾವಣೆಯಲ್ಲಿ ಅಕ್ರಮವೆಸಗಿದ ಬಿಜೆಪಿಯ ಅಲ್ಪ ಸಂಖ್ಯಾತ ಘಟಕದ ಮಾಜಿ ಸದಸ್ಯರೂ ಆಗಿರುವ ಅನಿಲ್ ಮಾಸಿಹ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಸೂಚಿಸಿದರು.