ನಾಪೋಕ್ಲು, ಫೆ. ೨೦: ಕೊಟ್ಟಮುಡಿ ಭಾಗದಲ್ಲಿ ಚಿರತೆ ಹಾವಳಿ ಮಿತಿಮೀರಿದ್ದು, ನಾಲ್ಕು ಹಸುಗಳು ನಾಪತ್ತೆಯಾಗಿವೆ. ಒಂದು ಹಸುವಿನ ಕಳೇಬರ ಪತ್ತೆಯಾಗಿದೆ.
ಹೊದವಾಡ ಗ್ರಾಮದ ಕೊಟ್ಟಮುಡಿಯ ಕಾಳಪ್ಪಮಾಡು ಎಂಬಲ್ಲಿ ಯೂಸುಫ್ ಹಾಜಿ ಅವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದ ಸಂದರ್ಭ ಚಿರತೆ ದಾಳಿ ನಡೆಸಿದೆ. ಹಸುವಿನ ದೇಹದ ಮೇಲೆ ಪರಚಿದ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದೆ. ಕಳೆದ ಒಂದು ವಾರದಿಂದ ೪ ಹಸುಗಳು ನಾಪತ್ತೆಯಾಗಿದ್ದು, ಹುಡುಕಲು ತೆರಳಿದ ಯೂಸುಫ್ ಅವರಿಗೆ ಚಿರತೆಯ ಹೆಜ್ಜೆ ಗುರುತು ಕಾವೇರಿ ನದಿ ದಡದಲ್ಲಿ ಕಂಡು ಬಂದಿದೆ. ಮಾತ್ರವಲ್ಲದೆ ಒಂದು ಹಸುವಿನ ಕಳೇಬರ ಪತ್ತೆಯಾಗಿದೆ.
ಅರಣ್ಯ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದೆ. ಪಶು ಇಲಾಖೆ ಸಿಬ್ಬಂದಿಗಳು ಗಾಯಗೊಂಡ ಹಸುವಿಗೆ ಚಿಕಿತ್ಸೆ ನೀಡಿದ್ದಾರೆ.