ಸೋಮವಾರಪೇಟೆ, ಫೆ. ೧೨: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆ ಸಮೀಪ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿ ರುವ ಶೌಚಾಲಯ, ನಿರ್ವಹಣೆ ಕೊರತೆಯಿಂದ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.

ಶೌಚಾಲಯ ಪಾಳು ಬಿದ್ದಿದ್ದು, ಇದರ ಪಕ್ಕದಲ್ಲಿರುವ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹಗೊAಡು ಗಬ್ಬೆದ್ದು ನಾರುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿಯಿದ್ದರೂ ಸಹ ಪಟ್ಟಣ ಪಂಚಾಯ್ತಿ ಆಡಳಿತ ಕಣ್ಮುಚ್ಚಿ ಕುಳಿತಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿದ್ದರೂ ನಿರ್ವಹಣೆಯ ಕೊರತೆಯಿಂದಾಗಿ ಪ್ರಸ್ತುತ ಪಾಳು ಬಿದ್ದಿದೆ. ಇದರ ಮುಂಭಾಗವೇ ತ್ಯಾಜ್ಯದ ರಾಶಿಯಿದ್ದು, ಎದುರು ಇರುವ ಭಾಗದ ಚರಂಡಿಯಲ್ಲಿ ಕೊಳಚೆ ನೀರು ತುಂಬಿಕೊAಡು ಗಬ್ಬೆದ್ದು ನಾರುತ್ತಿದೆ. ಶೌಚಾಲಯದ ಎದುರೇ ಮದ್ಯದ ಖಾಲಿ ಬಾಟಲ್, ಟೆಟ್ರಾ ಪ್ಯಾಕ್, ಮೊಟ್ಟೆಯ ತ್ಯಾಜ್ಯ, ಕಸಕಡ್ಡಿಗಳನ್ನು ರಾಶಿ ಹಾಕಿ ಅಲ್ಲಿಯೇ ಬೆಂಕಿ ಹಚ್ಚಲಾಗುತ್ತಿದೆ. ಇದರೊಂದಿಗೆ ಚರಂಡಿಯಲ್ಲೂ ತ್ಯಾಜ್ಯ ತುಂಬಿರುವುದರಿAದ ನೀರಿನ ಸರಾಗ ಹರಿವಿಗೆ ತಡೆಯಾಗಿ, ಕೊಳಚೆ ಶೇಖರಣೆಯಾಗುವ ಮೂಲಕ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಅಂತೆಯೇ ಅಕ್ಕಪಕ್ಕದ ಅಂಗಡಿಯ ವರ್ತಕರು ಮೂಗು ಮುಚ್ಚಿಕೊಂಡು ವ್ಯಾಪಾರ ನಡೆಸಬೇಕಾಗಿದೆ.

ಈ ಬಗ್ಗೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಲಾಗಿದೆ. ವಾರ್ಡ್ ಸದಸ್ಯರ ಗಮನಕ್ಕೂ ತರಲಾಗಿದೆ. ಆದರೆ ಈವರೆಗೆ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಳೆದ ಸಾಲಿನ ಸರ್ಕಾರ ನಗರೋತ್ಥಾನ ಯೋಜನೆಯಡಿ ಪ.ಪಂ.ಗೆ ೫ ಕೋಟಿ ಅನದಾನವನ್ನು ಒದಗಿಸಿದ್ದು, ಅಧಿಕಾರಿಗಳು ಹಾಗೂ ಜನ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಗತ್ಯವಿರುವ ಕಡೆಗಳಲ್ಲಿ ಸದ್ಬಳಕೆಯಾಗದೆ ನೆನೆಗುದಿಗೆ ಬಿದ್ದಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ ಸುಸ್ಥಿತಿಯಲ್ಲಿದ್ದ ಇಂಟರ್ಲಾಕನ್ನು ತೆಗೆದು ಹೊಸ ಇಂಟರ್ಲಾಕ್ ಅಳವಡಿಸಲಾಗಿದೆ. ಉತ್ತಮ ಸ್ಥಿತಿಯಲ್ಲಿದ್ದ ಹಳೆಯ ಇಂಟರ್‌ಲಾಕನ್ನು ಸಿ.ಕೆ. ಸುಬ್ಬಯ್ಯ ರಸ್ತೆಯ ಶೌಚಾಲಯದ ಮುಂದೆ ಅಳವಡಿಸಬಹುದಿತ್ತು. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಪೂರ್ವ ಯೋಜನೆಯಿಲ್ಲದ ಹಿನ್ನೆಲೆ ಇಂತಹ ಅಧ್ವಾನಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.