ಪೊನ್ನಂಪೇಟೆ, ಫೆ. ೧೨: ಪೊನ್ನಂಪೇಟೆ ಸಮೀಪದ ಜೋಡುಬೀಟಿ ನೆಹರು ನಗರ ಡೈಮಂಡ್ ಸ್ಟಾರ್ಸ್ ತಂಡದ ವತಿಯಿಂದ ಮೂರ್ನಾಡುವಿನ ಬಾಚೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕೆಂಬಟ್ಟಿ ಕಪ್ ಕ್ರಿಕೆಟ್ ಪಂದ್ಯಾವಳಿಯ ಚಾಂಪಿಯನ್ ಆಗಿ ಅರಮೇರಿ ಎ.ವೈ.ಸಿ.ಸಿ ತಂಡ ಹೊರಹೊಮ್ಮಿತು. ಜೋಡುಬೀಟಿ ಡೈಮಂಡ್ ಸ್ಟಾರ್ಸ್ ತಂಡ ರನ್ನರ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರೆ, ಹುದಿಕೇರಿ ವಾರಿಯರ್ಸ್ ೩ನೇ ಸ್ಥಾನ ಹಾಗೂ ಕರಡ ಡಬ್ಲೂö್ಯ.ಎಸ್.ಕೆ ತಂಡ ೪ನೇ ಸ್ಥಾನ ಪಡೆದುಕೊಂಡಿತು.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜೋಡುಬೀಟಿ ಡೈಮಂಡ್ ಸ್ಟಾರ್ಸ್ ತಂಡ ನಿಗದಿತ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೬೭ ರನ್ ಗಳಿಸಿತು. ತಂಡದ ಪರ ಪ್ರಮೋದ್ ೪ ಸಿಕ್ಸರ್ ಸಮೇತ ೩೦ ರನ್ ಗಳಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಅರಮೇರಿ ತಂಡದ ಸುಜನ್ ೨, ದೀಪು ೨, ಶಿಲ್ಪನ್ ೧ ವಿಕೆಟ್ ಗಳಿಸಿದರು.

೬೮ ರನ್‌ಗಳ ಗುರಿ ಬೆನ್ನಟ್ಟಿದ ಅರಮೇರಿ ಎ.ವೈ.ಸಿ.ಸಿ ತಂಡ ೩ ವಿಕೆಟ್ ಕಳೆದುಕೊಂಡು ಇನ್ನೂ ೭ ಎಸೆತಗಳು ಬಾಕಿ ಇರುವಂತೆಯೇ ಗುರಿ ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ತಂಡದ ಪರ ಭರ್ಜರಿ ಪ್ರದರ್ಶನ ನೀಡಿದ ದಿಲನ್ ೫ ಸಿಕ್ಸರ್ ಸಮೇತ ೩೩ ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸುಜನ್ ೧೮ ರನ್ ಗಳಿಸಿದರು. ಜೋಡು ಬೀಟಿ ತಂಡದ ಪರ ಪ್ರಮೋದ್ ೨, ಜಗನ್ ೧ ವಿಕೆಟ್ ಪಡೆದುಕೊಂಡರು.

ಸೆಮಿಫೈನಲ್ : ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅರಮೇರಿ ಎ.ವೈ.ಸಿ.ಸಿ ತಂಡ ಮೊದಲು ಬ್ಯಾಟ್ ಮಾಡಿ ೩ ವಿಕೆಟ್ ನಷ್ಟಕ್ಕೆ ೭೬ ರನ್ ಕಲೆ ಹಾಕಿತು. ಗೆಲ್ಲಲು ೭೭ ರನ್‌ಗಳ ಗುರಿ ಪಡೆದ ಹುದಿಕೇರಿ ವಾರಿಯರ್ಸ್ ತಂಡ ನಿಗದಿತ ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ೬೧ ರನ್ ಗಳಿಸಿ ಸೋಲಿಗೆ ಶರಣಾಯಿತು.

(ಮೊದಲ ಪುಟದಿಂದ) ಕರಡ ಮತ್ತು ಜೋಡುಬೀಟಿ ತಂಡಗಳ ನಡುವೆ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜೋಡುಬೀಟಿ ತಂಡ ಕುಟ್ಟಪ್ಪ ಅವರ ಅಜೇಯ ೭೬ ರನ್‌ಗಳ ನೆರವಿನಿಂದ ೬ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೯೯ ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಕರಡ ತಂಡ ೩ ವಿಕೆಟ್ ನಷ್ಟಕ್ಕೆ ೪೩ ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಸೆಮಿಫೈನಲ್‌ನಲ್ಲಿ ಸೋತ ಹುದಿಕೇರಿ ವಾರಿಯರ್ಸ್ ಮತ್ತು ಕರಡ ತಂಡಗಳ ನಡುವೆ, ೩ನೇ ಮತ್ತು ೪ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುದಿಕೇರಿ ವಾರಿಯರ್ಸ್ ನಿಗದಿತ ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ೬೨ ರನ್ ಗಳಿಸಿ, ಕರಡ ತಂಡವನ್ನು ೨ ವಿಕೆಟ್ ನಷ್ಟಕ್ಕೆ ೪೬ ರನ್ ಗಳಿಗೆ ಕಟ್ಟಿ ಹಾಕುವ ಮೂಲಕ ೩ನೇ ಸ್ಥಾನ ಪಡೆದುಕೊಂಡಿತು. ಕರಡ ೪ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ವೈಯಕ್ತಿಕ ಪಶಸ್ತಿ

ಬೆಸ್ಟ್ ಬ್ಯಾಟ್ಸ್ಮನ್ ಆಗಿ ಅರಮೇರಿ ತಂಡದ ದಿಲನ್, ಬೆಸ್ಟ್ ಬೌಲರ್ ಆಗಿ ಹುದಿಕೇರಿ ತಂಡದ ನಂದೀಶ್, ಬೆಸ್ಟ್ ವಿಕೆಟ್ ಕೀಪರ್ ಆಗಿ ಮೂರ್ನಾಡು ತಂಡದ ದಿನೇಶ್, ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಅರಮೇರಿ ತಂಡದ ದಿಲನ್, ಮ್ಯಾನ್ ಆಫ್ ದಿ ಸಿರೀಸ್ ಆಗಿ ಜೋಡುಬೀಟಿ ತಂಡದ ಪ್ರಮೋದ್ ಪ್ರಶಸ್ತಿ ಪಡೆದುಕೊಂಡರು.

ಮೊದಲ ಸೆಮಿ ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಅರಮೇರಿ ತಂಡದ ದೀಪಕ್, ಎರಡನೇ ಸೆಮಿಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಜೋಡುಬೀಟಿ ತಂಡದ ಕುಟ್ಟಪ್ಪ ಪಡೆದುಕೊಂಡರು.

ಹಗ್ಗ ಜಗ್ಗಾಟ

ಮಹಿಳೆಯರಿಗಾಗಿ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಒಟ್ಟು ೧೦ ತಂಡಗಳು ಭಾಗವಹಿಸಿದ್ದವು. ಅತ್ಯಂತ ರೋಚಕವಾಗಿದ್ದ ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳೂ ಸಮಬಲದ ಹೋರಾಟ ನೀಡಿದರೂ, ಅಂತಿಮ ವಾಗಿ ಕೋತೂರು ಶ್ರೀ ನೀಲಮ್ಮ ತಂಡ ಎದುರಾಳಿ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದು ಕೊಂಡರೆ, ಪೆರ್ನಾಡ್ (ನಾಂಗಾಲ) ತಂಡ ದ್ವಿತೀಯ ಸ್ಥಾನ ಪಡೆದು ಕೊಂಡಿತು.

ಸಮಾರೋಪ

ಪೆಮ್ಮಡಿಕುಟ್ಟಡ ನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ, ಪ್ರಮುಖರಾದ ಚಟ್ಟಕುಟ್ಟಡ ಹ್ಯಾರಿ ಭೀಮಯ್ಯ, ಬಿಲ್ಲರಿಕುಟ್ಟಡ ಯತೀನ್, ತೂಚಕುಟ್ಟಡ ಸುನೀಲ್, ಬಿಲ್ಲರಿಕುಟ್ಟಡ ಅಜಿತ್, ಮೂರ್ನಾಡು ಗ್ರಾ. ಪಂ. ಅಧ್ಯಕ್ಷ ಕುಶನ್ ರೈ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಾಜಿ ಅಚ್ಯುತನ್, ಪೊನ್ನಂಪೇಟೆ ಗ್ರಾ.ಪಂ. ಸದಸ್ಯೆ ಅಮ್ಮತ್ತೀರ ಆರತಿ ಸುರೇಶ್, ಮಾಜಿ ಸದಸ್ಯ ಅಮ್ಮತೀರ ಸುರೇಶ್, ವಕೀಲರಾದ ಮೂಕುಟ್ಟಡ ಬೋಪಣ್ಣ, ಕೆಂಬಟ್ಟಿ ಸಮಾಜ ಕಾರ್ಯದರ್ಶಿ ಮೊಳ್ಳೆಕುಟ್ಟಡ ದಿನು ಬೋಜಪ್ಪ, ಕ್ರೀಡಾಕೂಟದ ಸ್ಥಾಪಕ ಹರೀಶ್, ಕುಟ್ಟಪ್ಪ, ಸಮಾಜ ಸೇವಕ ಮತ್ರಂಡ ದಿಲ್ಲು, ಪೊನ್ನಂಪೇಟೆ ವಲಯ ಅಲ್ಪಸಂಖ್ಯಾತ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಹುಸೇನ್, ಕ್ರೀಡಾಕೂಟ ಸಂಚಾಲಕ ಮೂಳೆಕುಟ್ಟಡ ದಿನೇಶ್ ಪೆಗ್ಗೋಲಿ, ಪ್ರಮುಖರಾದ ಚೋಕುಟ್ಟಂಡ ಉತ್ತಪ್ಪ, ಬಿಲ್ಲರಿಕುಟ್ಟಡ ಮಂಜೇಶ್, ಬಿಲ್ಲರಿಕುಟ್ಟಡ ಪ್ರಶಾಂತ್, ಬಿಲ್ಲರಿಕುಟ್ಟಡ ಡಿಕ್ಕಿ, ಬಿಲ್ಲರಿಕುಟ್ಟಡ ಧನು, ಚೋಕುಟ್ಟಂಡ ಚಿಮ್ಮ ಅಯ್ಯಪ್ಪ, ಮೂಕುಟ್ಟಡ ವೇಣುಗೋಪಾಲ್, ಬಿಲ್ಲರಿಕುಟ್ಟಡ ಶಾಂತಿ, ತೂಚಕುಟ್ಟಡ ಅರುಣ್, ಯಾರಕುಟ್ಟಡ ವಿನೋದ್, ಜೋಡುಬೀಟಿ ನೆಹರು ನಗರದ ಯುವಕರು, ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ಆನಂದ್, ಪ್ರತಾಪ್, ಅಭಿಷೇಕ್ ಕಾರ್ಯ ನಿರ್ವಹಿಸಿದರು. ನಾಗೇಶ್, ರಾಹುಲ್, ದಿನೇಶ್ ವೀಕ್ಷಕ ವಿವರಣೆ ನೀಡಿದರು.

-ಚನ್ನನಾಯಕ