ಐಗೂರು, ಫೆ. ೧೨: ಐಗೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಜನ ಜೀವ ಭಯದಲ್ಲಿ ಸಂಚರಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಫಸಲಿಗೆ ಬಂದ ಬೆಳೆ ಹಾಗೂ ವಾಹನಗಳನ್ನು ಜಖಂಗೊಳಿಸಿದ ಪ್ರಕರಣಗಳು ವರದಿಯಾಗಿದ್ದು, ಕಾಡಾನೆ ಉಪಟಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹರಸಾಹಸಪಡುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಪಟಾಕಿಗಳನ್ನು ಸಿಡಿಸುತ್ತಾ ಕಾರ್ಯಚರಣೆಯಲ್ಲಿ ನಡೆಸುತ್ತಿದ್ದಾರೆ. ಜೊತೆಗೆ ಧ್ವನಿವರ್ಧಕದ ಮೂಲಕ ಆನೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪ್ರಚಾರವೂ ನಡೆಸಲಾಗುತ್ತಿದೆ. ಮದವೇರಿದ ಕಾಡಾನೆ ಐಗೂರು ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದು, ಅರಣ್ಯ ಇಲಾಖೆಯ ವಸತಿಗೃಹದ ಮುಂದೆ ನಿಲ್ಲಿಸಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯ ಸ್ಕೂಟರ್ ಅನ್ನು ಜಖಂಗೊಳಿಸಿದೆ. ತೋಟದಲ್ಲಿ ಫಸಲಿಗೆ ಬಂದಿದ್ದ ಬಾಳೆ ಗಿಡ, ಅಡಿಕೆ ಗಿಡ ಮತ್ತು ವಿಜಯನಗರ ಭಾಗದಲ್ಲೂ ಬಾಳೆಯ ಗಿಡಗಳನ್ನು ಧ್ವಂಸಗೊಳಿಸಿದೆ. ಕೆಲವು ದಿನಗಳ ಹಿಂದೆ ಕಾರ್ಯಾಚರಣೆ ನಡೆಸುವ ವೇಳೆ ಆರ್. ಆರ್. ಟಿ. ಸಿಬ್ಬಂದಿ ಮೇಲೂ ಆನೆ ದಾಳಿ ಮಾಡಿಸಲು ಯತ್ನಿಸಿದ್ದು, ಸಿಬ್ಬಂದಿಯ ಬೈಕ್ ಹಾನಿಗೊಳಿಸಿದೆ. - ಸುಕುಮಾರ