ನಾಪೋಕ್ಲು, ಫೆ. ೧೧: ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ ಸಕಲ ಜೀವಾತ್ಮಗಳಿಗೆ ಒಳಿತಾಗಬೇಕು ಎಂಬುದು ಎಲ್ಲಾ ಧರ್ಮಗಳ ಮೂಲವಾಗಿದ್ದು, ಸಮಾಜದಲ್ಲಿ ಎಲ್ಲರೂ ಒಳ್ಳೆಯವರಾಗಿ ಉತ್ತಮ ಪ್ರಪಂಚವನ್ನು ಕಟ್ಟಬೇಕು ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಚೆರಿಯಪರಂಬು ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಬ್ದುಲ್ ರಾಹ್ಮಾನ್ ವಲಿಯುಲ್ಲಾಹಿ ಅವರ ಉರೂಸ್ ಸಮಾರಂಭದ ಪ್ರಯುಕ್ತ ಶನಿವಾರ ಆಯೋಜಿಸಲಾಗಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ವೈಯಕ್ತಿಕ ದ್ವೇಷಕ್ಕಾಗಿ ಇಡೀ ಸಮಾಜ, ಸಮುದಾಯವನ್ನು ಒಡೆಯುವ ಕೆಲಸವನ್ನು ಯಾರೂ ಮಾಡಬಾರದು. ನಾವು ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡುವಂತಾಗಬೇಕು. ಸೌಹಾರ್ಧಯುತ ಜೀವನ ನಡೆಸಲು ಸಂದೇಶ ನೀಡಿದ ಗುರುಗಳ, ಮಹನೀಯರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಸ್ಥಳೀಯ ಮೇರಿ ಮಾತೆ ದೇವಾಲಯದ ಧರ್ಮಗುರುಗಳಾದ ಜ್ಞಾನ ಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಮಹನೀಯರ ಮೌಲ್ಯಗಳನ್ನು ಜೀವನದಲ್ಲಿ ರೂಡಿಸಿಕೊಂಡಾಗ ಸುಂದರ ಸಮಾಜವನ್ನು ಕಟ್ಟಿಕೊಳ್ಳಲು ಸಾಧ್ಯ. ಮನುಷ್ಯತ್ವವನ್ನು ಕಳೆದುಕೊಂಡಾಗ ಸಮಾಜ ಹಾಳಾಗುತ್ತದೆ ಎಂದರು.

ಕಾಫಿ ಬೆಳೆಗಾರ ಕುಂಡ್ಯೋಳAಡ ರಮೇಶ್ ಮಾತನಾಡಿ, ಎಲ್ಲಾ ಧರ್ಮಗಳು ಉತ್ತಮವಾದದ್ದನ್ನೇ ಬೋಧಿಸುತ್ತವೆ. ನಮ್ಮ ತಪ್ಪುಗಳನ್ನು ತಿದ್ದಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದರು. ಕೊಡಗು ಖಾಝಿ ಅಬ್ದುಲ್ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ ಪ್ರತಿಪ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಮಾತನಾಡಿದರು. ಕನ್ಯಾನದ ಸಿರಾಜುದ್ದೀನ್ ಸಖಾಫಿ ಧಾರ್ಮಿಕ ಮುಖ್ಯ ಪ್ರಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ,ಮೇರಿ ಮಾತೆ ದೇವಾಲಯದ ಧರ್ಮ ಗುರುಗಳಾದ ಜ್ಞಾನ ಪ್ರಕಾಶ್, ಕೊಡಗು ಖಾಝಿ ಅಬ್ದುಲ್ ಫೈಝಿ, ಕಾಫಿ ಬೆಳೆಗಾರ ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ, ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ. ಪ್ರತಿಪ, ಲಕ್ಷಿö್ಮವೆಂಕಟೇಶ್ವರ ದೇವಾಲಯದ ಅಧ್ಯಕ್ಷ ಟಿ. ಎಸ್. ಮಂಜಯ್ಯ, ಕಾಂಗ್ರೆಸ್‌ನ ಪಿ.ಎ. ಹನೀಫ್ ಇವರುಗಳನ್ನು ಜಮಾಅತ್ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಯತ್ ಆಡಳಿತ ಮಂಡಳಿ ಅಧ್ಯಕ್ಷ ಪರವಂಡ ಜುಬೇರ್ ವಹಿಸಿದ್ದರು. ವೇದಿಕೆಯಲ್ಲಿ ಚೆರಿಯಪರಂಬು ಮಸೀದಿಯ ಖತೀಬರಾದ ಹಂಝ ರಹ್ಮಾನಿ, ಚೆರಿಯಪರಂಬು ಜಮಾಅತ್‌ನ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಜಮಾಅತ್ ಪದಾಧಿಕಾರಿಗಳು, ಊರಿನ ಹಿರಿಯರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಜಮಾಅತ್ ಕಾರ್ಯದರ್ಶಿ ಪರವಂಡ ಸಿರಾಜ್ ಸ್ವಾಗತಿಸಿ ಕೋಶಾಧಿಕಾರಿ ಬಶೀರ್ ಪಿ ಎಚ್ ವಂದಿಸಿದರು.