ಡಾ. ಶ್ರೀಕುಮಾರ್ ಸಲಹೆ
ಮಡಿಕೇರಿ, ಫೆ. ೮: ಯೋಗ ಹಾಗೂ ಸರಿಯಾದ ಆಹಾರ ಕ್ರಮ ಪಾಲನೆಯಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯ ಎಂದು ಪ್ರಸನ್ನ ಆಯುರ್ವೇದ ಕಾಲೇಜಿನ ಮುಖ್ಯ ಪ್ರಾಧ್ಯಾಪಕ ಡಾ. ಶ್ರೀಕುಮಾರ್ ಸಲಹೆ ನೀಡಿದರು. ನ್ಯಾಷನಲ್ ಇಂಟಿಗ್ರಿಟಿ ಮೆಡಿಕಲ್ ಅಸೋಸಿಯೇಷನ್ನ (ನೀಮಾ) ವಾರ್ಷಿಕ ಮಹಾಸಭೆಯಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಕೇವಲ ಔಷಧಿ ಮಾತ್ರವಲ್ಲದೆ ಯೋಗ ಹಾಗೂ ಆಹಾರ ಪದ್ಧತಿಗಳ ನಿಯಂತ್ರಣದಿAದ ಸಕ್ಕರೆ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಮತ್ತು ಅದರಿಂದ ಮುಕ್ತಿ ಹೊಂದಲು ಹಲವಾರು ಹೊಸ ವಿಧಾನಗಳನ್ನು ತಿಳಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸದಸ್ಯರಿಗೆ ವಿಶೇಷ ಮಾಹಿತಿ ಶಿಬಿರವನ್ನು ಏರ್ಪಡಿಸಲಾಗಿತ್ತು. ನೀಮಾ ಅಧ್ಯಕ್ಷ ಡಾ. ರಾಜಾರಾಮ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ.ಬಿ.ವಿ. ಶೆಣೈ, ಡಾ. ಸುದೀಷ್ ಹೆಗ್ಡೆ, ಡಾ. ಉದಯಶಂಕರ್ ಎನ್, ಡಾ. ರಾಜೇಂದ್ರ ಎಸ್, ಮಹಿಳಾ ಘಟಕದ ಅಧ್ಯಕ್ಷೆ ಡಾ. ಶೈಲಜಾ ರಾಜೇಂದ್ರ ಪಾಲ್ಗೊಂಡಿದ್ದರು.
ಹೊಸದಾಗಿ ಸೇರ್ಪಡೆಗೊಂಡ ಆಯುಷ್ ವೈದ್ಯರನ್ನು ಸ್ವಾಗತಿಸುವ ಕಾರ್ಯಕ್ರಮ, ವೈದ್ಯರಿಗೆ ವೈವಿಧ್ಯಮಯ ಸ್ಪರ್ಧೆ ಕೂಡ ಈ ಸಂದರ್ಭದಲ್ಲಿ ನಡೆಸಲಾಯಿತು. ಡಾ. ಸೌಮ್ಯ ಸ್ವಾಗತಿಸಿ, ಡಾ. ಅನುಷಾ ವಂದಿಸಿದರು. ಡಾ. ನಿಧಿ ಅತಿಥಿ ಪರಿಚಯ ಮಾಡಿದರು.