ಮುಳ್ಳೂರು, ಫೆ. ೮: ಸಮೀಪದ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಿದ ನಿಡ್ತ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಬೆಲೆ ಅಂಗಡಿಯಲ್ಲಿ ಸಮರ್ಪಕವಾಗಿ ಪಡಿತರ ಆಹಾರ ವಿತರಣೆಯಾಗದ ಹಿನ್ನೆಲೆ ನ್ಯಾಯಬೆಲೆ ಅಂಗಡಿಯನ್ನು ರದ್ದುಗೊಳಿಸುವಂತೆ ಕೋರಿ ಗ್ರಾಮದ ಇಬ್ಬರು ಸೋಮವಾರಪೇಟೆ ತಹಶೀಲ್ದಾರ್ಗೆ ಗ್ರಾಮಸ್ಥರ ನಕಲಿ ಸಹಿ ಹಾಕಿ ಮನವಿ ಮಾಡಿದ್ದರು.
ಈ ಕುರಿತು ನಿಡ್ತ ಗ್ರಾಮಸ್ಥರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರುಗಳು ಸೇರಿಕೊಂಡು ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎದುರು ನ್ಯಾಯಬೆಲೆ ಅಂಗಡಿಯಲ್ಲಿ ಸಮರ್ಪಕವಾಗಿ ಪಡಿತರ ಆಹಾರ ವಿತರಣೆಯಾಗುತ್ತಿದ್ದರೂ ಗ್ರಾಮದ ಒಂದಿಬ್ಬರು ವ್ಯಕ್ತಿಗಳು ಗ್ರಾಮಸ್ಥರ ನಕಲಿ ಸಹಿ ಸೃಷ್ಟಿಸಿ ಅಂಗಡಿಯನ್ನು ರದ್ದುಗೊಳಿಸುವಂತೆ ದೂರು ನೀಡಿದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಫಲಾನುಭವಿಗಳಿಗೆ ಸರಿಯಾಗಿ ಪಡಿತರ ಆಹಾರ ವಿತರಣೆಯಾಗುತ್ತಿದೆ ಹೀಗಿದ್ದರೂ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಆಹಾರ ವಿತರಣೆಯಾಗುತ್ತಿಲ್ಲ ಎಂದು ಆರೋಪ ಮಾಡಿರುವ ನಕಲಿ ದೂರುದಾರರ ವಿರುದ್ಧ ಕ್ರಮಕೈಗೊಳ್ಳಬೇಕು. ನ್ಯಾಯಬೆಲೆ ಅಂಗಡಿಯನ್ನು ರದ್ದುಗೊಳಿಸಬಾರದೆಂದು ಒತ್ತಾಯಿಸಿದ ಗ್ರಾಮಸ್ಥರು ತಹಶೀಲ್ದಾರರಿಗೆ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಮೂಲಕ ಮನವಿ ಪತ್ರ ನೀಡಿದರು.
ನಂತರ ಸಂಘದ ಸಭಾಂಗಣದಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿಯವರು ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಗ್ರಾಮದ ಅನಿಲ್, ಪುಟ್ಟಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.