ಮಡಿಕೇರಿ, ಫೆ. ೮: ಉಪ್ಪಿನ ಕಾಡು ಎಂದೇ ಹೆಸರಾದ ಗುಜರಾತಿನ ಕಚ್ ಜಿಲ್ಲೆಯಲ್ಲಿ ಜಾಲಿಮುಳ್ಳು ಮತ್ತು ಹುಲ್ಲುಗಳು ಸ್ವಾಭಾವಿಕವಾಗಿ ಬೆಳೆದು ಅವು ಅಲ್ಲಿ ವಾಸವಿರುವ ೨೨೦ ವಿವಿಧ ಪಕ್ಷಿಗಳಿಗೆ ಆಹಾರವನ್ನು ನೀಡುತ್ತವೆ, ಅಲ್ಲಿಗೆ ಪ್ರತಿವರ್ಷವೂ ೪೦ ನಾನಾ ಜಾತಿಗಳ ಹಕ್ಕಿಗಳು ವಲಸೆ ಬರುತ್ತವೆ. ಇಲ್ಲಿ ಮರುಭೂಮಿಯ ತೋಳ, ಚಾತಕಪಕ್ಷಿ, ಕೃಷ್ಣಮೃಗ, ಮೊಲ, ಉಡಗಳ ಜೊತೆಯಲ್ಲಿ ಗೂಬೆಗಳೂ ವಾಸಮಾಡುತ್ತಿವೆ. ಸುಮಾರು ೫,೦೦೦ ಚದರ ಕಿಲೋಮೀಟರ್ ಜಾಗವನ್ನು ಆಕ್ರಮಿಸಿರುವ ಈ ಸ್ಥಳದಲ್ಲಿ ವಾಸಿಸುವ ಇಷ್ಟೊಂದು ವೈವಿಧ್ಯಮಯ ಜೀವಸಂಕುಲಗಳು ಬೇರೆಲ್ಲೂ ಕಾಣಲು ಸಿಗದು” ಎಂದು ಡಾ. ಹೆಚ್.ವಿ. ನರಸಿಂಹನ್ ವಿವರಿಸಿದರು. ಅವರು ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದಲ್ಲಿ ಜರುಗಿದ ೨೧೬ನೇ ತತ್ವ ಚಿಂತನಾಗೋಷ್ಠಿಯಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿ, ಸುಮಾರು ೫೦೦೦ ವರ್ಷಗಳ ಹಿಂದೆ ಇಲ್ಲಿದ್ದ ದ್ವಾರಕ ನಗರವು ಈಗ ಸಮುದ್ರದಲ್ಲಿ ಮುಳುಗಿದೆ. ಕಚ್‌ನ ಬಹುಭಾಗವು ಸಮುದ್ರದ ದಾಳಿಯಿಂದ ಉಪ್ಪಿನ ಭೂಮಿಯಾಗಿದೆ ಎಂದು ವಿವರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಶಿವಪ್ಪ ಅವರು, ಇಂತಹ ತತ್ವ ಚಿಂತನಾಗೋಷ್ಠಿಗಳು ಹಲವು ವಿಚಾರಗಳನ್ನು ತಿಳಿಸಿ ಆಸಕ್ತ ಸಭಿಕರ ಚಿಂತನಾ ಮಟ್ಟವನ್ನು ವೃದ್ಧಿಸಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶ್ರೀಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು ಆಶೀರ್ವಚನವನ್ನು ನೀಡುತ್ತ ಜಗತ್ತಿನಲ್ಲಿ ಗೋಚರಿಸುವ ಹಲವಾರು ವಿಷಯಗಳು ಅನನ್ಯವಾಗಿದ್ದು ಅವು ವೈಚಿತ್ರö್ಯಗಳಿಂದ ಕೂಡಿವೆ. ಆಸಕ್ತರು ಅವುಗಳ ಅಧ್ಯಯನವನ್ನು ಮಾಡಿದರೆ ಹಲವಾರು ಕುತೂಹಲಕರವಾದ ವಿಷಯಗಳು ಬೆಳಕಿಗೆ ಬರುತ್ತವೆ ಎಂದು ತಿಳಿಸಿದರು. ವಿದ್ಯಾರ್ಥಿನಿ ಧನಲಕ್ಷಿö್ಮ ಸಭಿಕರನ್ನು ಸ್ವಾಗತಿಸಿದರೆ, ಮಾನ್ಯ ಮುತ್ತಮ್ಮ ಕಾರ್ಯಕ್ರಮ ನಿರೂಪಿಸಿದರು. ವರ್ಷಿಣಿ ಆಹ್ವಾನಿತರನ್ನು ವಂದಿಸಿದರು.