ಶನಿವಾರಸಂತೆ, ಫೆ. ೮: ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಕಳೆದ ೧೫ ದಿನಗಳಿಂದ ನಡೆಯುತ್ತಿರುವ ಇತಿಹಾಸ ಪ್ರಸಿದ್ಧ ಗುಡುಗಳಲೆ ಜಯದೇವ ಜಾನುವಾರು ಜಾತ್ರೆ ಜಾನುವಾರುಗಳೇ ಇಲ್ಲದೇ ಕೇವಲ ಜನಗಳ ಮನೋರಂಜನಾ ಜಾತ್ರೆಯಾಗಿ ಮಾರ್ಪಟ್ಟಿದೆ.
೮೦ ವರ್ಷಗಳ ಜಾತ್ರಾ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಜಾನುವಾರುಗಳಿಲ್ಲದ ಜಾತ್ರೆ ನಡೆಯುತ್ತಿವೆ. ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದ ಮಾರಾಟ ಹಾಗೂ ಪ್ರದರ್ಶನಕ್ಕಾಗಿ ಬರುತ್ತಿದ್ದ ಜಾನುವಾರುಗಳಿಂದ ತುಂಬಿ ತುಳುಕುತ್ತಾ ಜನರನ್ನು ಆಕರ್ಷಿಸುತ್ತಿದ್ದ ಜಾತ್ರಾ ಮೈದಾನ ಲೆಕ್ಕಕ್ಕೂ ಒಂದೇ ಒಂದು ಜಾನುವಾರು ಇಲ್ಲದೇ ಭಣಗುಡುತ್ತಿದೆ. ನಾಲ್ಕೆöÊದು ವರ್ಷಗಳ ಹಿಂದೆ ಜಾತ್ರೆಯಲ್ಲಿ ಜಾನುವಾರಗಳ ಮಾರಾಟ ಚೆನ್ನಾಗಿ ನಡೆಯುತ್ತಿದ್ದು ರೂ.೧೫ ಸಾವಿರದ ಹೋರಿ ಕರುವಿನಿಂದ ರೂ.೧ ಲಕ್ಷಕ್ಕೂ ಅಧಿಕ ಬೆಲೆಗೆ ಸುಂದರ ಜೋಡಿ ಎತ್ತುಗಳ ಮಾರಾಟವಾಗುತ್ತಿತ್ತು. ಪ್ರದರ್ಶನದಲ್ಲಿ ಪ್ರಥಮ ಬಹುಮಾನವನ್ನೂ ಗಿಟ್ಟಿಸುತ್ತಿದ್ದವು. ಇಂದು ಆ ದೃಶ್ಯ ಕೇವಲ ಕನಸಾಗಿ ಕಾಡುತ್ತಿದೆ. ಪ್ರಸ್ತುತ ಜಾತ್ರಾ ಮೈದಾನ ವಾಹನಗಳು ನಿಲ್ಲುವ ಸ್ಥಳವಾಗಿದೆ. ಜಾನುವಾರುಗಳಿಗಾಗಿ ತೊಟ್ಟಿಯಲ್ಲಿ ತುಂಬಿಸಿಟ್ಟಿರುವ ಕುಡಿಯುವ ನೀರು ಪಕ್ಷಿಗಳು ಕುಡಿದು ದಣಿವಾರಿಸಿಕೊಳ್ಳುತ್ತಿವೆ. ಯಾಕೆ ಜಾನುವಾರುಗಳು ಜಾತ್ರೆಗೆ ಬರಲಿಲ್ಲ? ಜಾನಪದ ಸೊಗಡಿನ ಜಾತ್ರೆಗೆ ಜಾನುವಾರುಗಳೇ ಭೂಷಣ. ಜಾನಪದ ಸಂಸ್ಕೃತಿ ಮರೆಯಾಗುತ್ತಿದೆಯೇ? ಎಂಬೆಲ್ಲಾ ಪ್ರಶ್ನೆಗಳು ಚಿಂತಕರಲ್ಲಿ ಮೂಡುವುದು ಸಹಜ. ಜಾತ್ರಾ ಸಮಿತಿಯ ಕಾರ್ಯದರ್ಶಿ ಎನ್.ಎಂ. ಬಸವರಾಜ್ ಪ್ರತಿಕ್ರಿಯಿಸಿ, ಗ್ರಾಮೀಣ ಪ್ರದೇಶಗಳಲ್ಲಿ ನಾಟಿ ದನಗಳ ಪಶುಪಾಲನೆಯೇ ಕಣ್ಮರೆಯಾಗಿ ಹೋಗಿದೆ. ವ್ಯಾಪಾರ ದೃಷ್ಟಿಯಿಂದ ಹಾಲು ಮಾರಾಟಕ್ಕಾಗಿ ಕೆಲವು ರೈತರು ವಿದೇಶಿ ತಳಿಗಳ ಜಾನುವಾರುಗಳನ್ನು ಸಾಕುತ್ತಿದ್ದಾರೆ. ಗದ್ದೆಗಳಲ್ಲಿ ಉಳುಮೆಗೆ ಟ್ರಾö್ಯಕ್ಟರ್, ಟಿಲ್ಲರ್, ಭತ್ತದ ಬೆಳೆಯ ಕೊಯ್ಲಿಗೆ ಯಂತ್ರಗಳ ಮೊರೆ ಹೋಗಿರುವ ರೈತರು ಪಶುಪಾಲನೆಯ ಬಗ್ಗೆ ಒಲವು ತೋರುತ್ತಿಲ್ಲ. ಜಾತ್ರೆಯಲ್ಲಿ ಮಾರಾಟ ಹಾಗೂ ಪ್ರದರ್ಶನಕ್ಕಾಗಿ ಬರುವ ಜಾನುವಾರುಗಳಿಗೆ ಹುಲ್ಲು-ನೀರು ಕೊಡುವ ಹಾಗೂ ರೈತರಿಗೆ ಊಟೋಪಚಾರ ನೀಡುವುದಾಗಿ ಪ್ರಚಾರ ಮಾಡಿದರೂ ಈ ಬಾರಿಯ ಜಾತ್ರೆಗೆ ಒಂದೇ ಒಂದು ಜಾನುವಾರು ಬರಲಿಲ್ಲ. ಜಾತ್ರಾ ಮುಕ್ತಾಯ ಸಮಾರಂಭದ ದಿನ ದೂರದ ಹಳ್ಳಿಯ ರೈತರೊಬ್ಬರು ಸಾಂಕೇತಿಕವಾಗಿ ನಾಲ್ಕೆöÊದು ದನಗಳನ್ನು ತರುವುದಾಗಿ ತಿಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಜಾನುವಾರುಗಳಿಲ್ಲದ ಜಾತ್ರೆಯನ್ನು ರಂಗೇರಿಸಲು, ಮೆರಗು ಹೆಚ್ಚಿಸಲು ಹಾಗೂ ಜನರನ್ನು ಆಕರ್ಷಿಸಲು ಜಾತ್ರಾ ಸಮಿತಿ ಸಾರ್ವಜನಿಕರಿಗೆ ಕ್ರೀಡಾಕೂಟಗಳನ್ನು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವೈವಿಧ್ಯಮಯ ಆಟಿಕೆ ಅಂಗಡಿಗಳು, ಶೃಂಗಾರ ಸಾಧನಗಳ, ಚಪ್ಪಲಿ, ಬಟ್ಟೆ, ಪಾತ್ರೆ, ಪ್ಲಾಸ್ಟಿಕ್ ಇತ್ಯಾದಿ ಗೃಹೋಪಯೋಗಿ ವಸ್ತುಗಳ ಮಳಿಗೆಗಳಿವೆ. ಹೊಟೇಲ್, ಚಾಟ್ಸ್ ಅಂಗಡಿ, ಹಣ್ಣು-ಜ್ಯೂಸ್ ಅಂಗಡಿಗಳು ತೆರೆಯಲ್ಪಟ್ಟಿದ್ದು ಜನರನ್ನು ಸೆಳೆಯುತ್ತಿವೆ. ಹಗಲಲ್ಲಿ ವಿರಳ ಜನಸಂಖ್ಯೆಯಿAದ ಜಾತ್ರೆ ಕಳೆಗುಂದಿದರೂ ಸಂಜೆ ಕಳೆದು ರಾತ್ರಿಯಾಗುತ್ತಿದ್ದಂತೆ ಝಗಮಘಿಸುವ ವಿದ್ಯುತ್ ದೀಪಾಲಂಕಾರದಿAದ ರಂಗೇರುತ್ತಿದೆ. ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಮಂದಿ ಜಾತ್ರೆಗೆ ಆಗಮಿಸಿ ಕೊಲಂಬಸ್, ಜೈಂಟ್ ವೀಲ್, ಬ್ರೇಕ್ ಡ್ಯಾನ್ಸ್ ಮುಂತಾದ ಆಟಗಳ ಮೂಲಕ ಮನೋರಂಜನೆ ಪಡೆಯುತ್ತಿದ್ದಾರೆ. ಆದರೂ ಜಾನುವಾರುಗಳ ಜಾತ್ರೆಯಲ್ಲಿ ಜಾನುವಾರುಗಳಿಲ್ಲದ ಕೊರತೆ ಕಣ್ಣುಗಳಿಗೆ ರಾಚುತ್ತಾ ಗತ ವೈಭವ ಮೆಲುಕು ಹಾಕುವಂತಾಗಿದೆ.
ಯುವ ರೈತರು ಭೂತಾಯಿಯನ್ನು ನಂಬಿ ಕೃಷಿಯತ್ತ, ಹೈನುಗಾರಿಕೆಯತ್ತ ಒಲವು ಮೂಡಿಸಿಕೊಂಡರೆ ಗತವೈಭವ ಮರುಕಳಿಸಬಹುದು. ೧೯೪೫ರಲ್ಲಿ ಚಿತ್ರದುರ್ಗದ ಜಯದೇವ ಮುರುಘ ರಾಜೇಂದ್ರ ಸ್ವಾಮೀಜಿ ಅವರ ಆಶಯದಂತೆ ವೀರಶೈವ ಧರ್ಮ ಸಮ್ಮೇಳನದ ನೆನಪಿಗಾಗಿ ಅಂದಿನಿAದ ಪ್ರತಿವರ್ಷ ಗುಡುಗಳಲೆ ಜಾತ್ರಾ ಮೈದಾನದಲ್ಲಿ ನಡೆಸಿಕೊಂಡು ಬಂದ ಜಯದೇವ ಜಾನುವಾರುಗಳ ಜಾತ್ರೆ ಮತ್ತೆ ಜಾನುವಾರುಗಳ ಆಕರ್ಷಣೆಯ ಜಾತ್ರೆಯಾಗಿಯೇ ಭವಿಷ್ಯ ಕಾಲಕ್ಕೂ ಮುಂದುವರೆಯಲಿ. ಮುಂದಿನ ಪೀಳಿಗೆಯೂ ಅನುಭವಿಸುವಂತಾಗಲಿ ೧೭ ದಿನಗಳ ಜಾತ್ರಾ ಮಹೋತ್ಸವಕ್ಕೆ ಫೆ.೯ ರಂದು ಶುಕ್ರವಾರ ಮಧ್ಯಾಹ್ನ ೨ ಗಂಟೆಗೆ ನಡೆಯುವ ಮುಕ್ತಾಯ ಸಮಾರಂಭದೊAದಿಗೆ ತೆರೆ ಬೀಳಲಿದೆ. -ಶ.ಗ.ನಯನತಾರಾ