ಮಡಿಕೇರಿ, ಫೆ. ೭: ಚೆಕ್‌ಬೌನ್ಸ್ ಪ್ರಕರಣದ ಆರೋಪಿಗಳಿಗೆ ಕರ್ನಾಟಕ ಉಚ್ಚನ್ಯಾಯಾಲಯ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ಗೋಣಿಕೊಪ್ಪದ ನಿವಾಸಿ ಆರ್.ಆರ್. ಮಧು ಮತ್ತು ಎಂ.ಜಿ. ವಸಂತಿ ಎಂಬವರು ಶಿಕ್ಷೆಗೆ ಒಳಗಾದವರು. ಬಿಳೂರು ಗ್ರಾಮದ ಪ್ರೇಮಕುಮಾರಿ ಎಂಬವರಿAದ ರೂ. ೨.೫೦ ಲಕ್ಷ ಸಾಲ ಪಡೆದು ಆ ಮೊತ್ತಕ್ಕೆ ಮಧು ಹಾಗೂ ವಸಂತಿ ಅವರ ಬ್ಯಾಂಕ್ ಖಾತೆಯ ಚೆಕ್ ನೀಡಿದ್ದರು. ಆದರೆ, ಚೆಕ್ ಅಮಾನ್ಯಗೊಂಡ ಹಿನ್ನೆಲೆ ಪೊನ್ನಂಪೇಟೆ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳು ನಿರಪರಾಧಿ ಎಂದು ಪ್ರಕರಣವನ್ನು ವಜಾಗೊಳಿಸಿತ್ತು. ಈ ಆದೇಶ ವಿರುದ್ಧ ಪ್ರೇಮಕುಮಾರಿ ಕರ್ನಾಟಕ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್. ರಾಚಯ್ಯ ಅವರು ಪೊನ್ನಂಪೇಟೆ ನ್ಯಾಯಾಲಯದ ಆದೇಶ ವಜಾಗೊಳಿಸಿ ಇಬ್ಬರು ಆರೋಪಿಗಳಿಗೆ ತಲಾ ರೂ. ೧.೫೦ ಲಕ್ಷ ದಂಡ ತಪ್ಪಿದರೆ ೬ ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ. ಜೊತೆಗೆ ದೂರುದಾರರಿಗೆ ರೂ. ೨.೮೦ ಲಕ್ಷ ಪಾವತಿ ಮಾಡುವಂತೆ, ರೂ. ೨೦ ಸಾವಿರವನ್ನು ಸರಕಾರಕ್ಕೆ ಪಾವತಿಸುವಂತೆ ಮತ್ತು ತಪ್ಪಿದ್ದಲ್ಲಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.

ಪೊನ್ನಂಪೇಟೆ ನ್ಯಾಯಾಲಯದಲ್ಲಿ ವಕೀಲ ಮಚ್ಚಾಮಾಡ ಟಿ ಕಾರ್ಯಪ್ಪ ಮತ್ತು ಹೈಕೋರ್ಟ್ನಲ್ಲಿ ಬಿ.ಕೆ. ಮೋಹನ್ ವಾದ ಮಂಡಿಸಿದರು.