ಬಲೂಚಿಸ್ಥಾನದಲ್ಲಿ ಬಾಂಬ್ ಸ್ಫೋಟ-೨೫ ಸಾವು
ನವದೆಹಲಿ, ಫೆ. ೭: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೂ ಒಂದು ದಿನ ಮುನ್ನ ಬಲೂಚಿಸ್ಥಾನದ ಪ್ರಾಂತ್ಯದಲ್ಲಿ ಎರಡು ಬಾಂಬ್ ಸ್ಫೋಟ ಸಂಭವಿಸಿದ್ದು, ೨೫ ಮಂದಿ ಸಾವನ್ನಪ್ಪಿದ್ದಾರೆ. ಪಿಶಿನ್ ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಕಚೇರಿ ಎದುರು ಮೊದಲ ಸ್ಫೋಟ ಸಂಭವಿಸಿದ್ದು ೧೭ ಮಂದಿ ಸಾವನ್ನಪ್ಪಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದ್ದು, ಖಿಲ್ಲಾ ಸೈಫ್ ಉಲ್ಲಾಹ್ ಜಿಲ್ಲೆಯಲ್ಲಿ ೮ ಮಂದಿ ಸಾವನ್ನಪ್ಪಿದ್ದಾರೆ. ೨ ಸ್ಫೋಟಗಳಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಅಬ್ದುಲ್ಲಾ ಝೆಹ್ರಿ ಮಾತನಾಡಿ, ಪಕ್ಷೇತರ ಅಭ್ಯರ್ಥಿ ಅಸ್ಫಂದ್ಯರ್ ಖಾನ್ ಕಾಕರ್ ನಿವಾಸದ ಎದುರು ಬ್ಯಾಗ್ ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿದೆ. ೫ ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ದೆಹಲಿ ಚಲೋ ವಿರೋಧಿಸಿ ಬೆಳಗಾವಿಯಲ್ಲಿ ಬಿಜೆಪಿ ಪ್ರತಿಭಟನೆ
ಬೆಳಗಾವಿ, ಫೆ. ೭: ಕಾಂಗ್ರೆಸ್ಸಿನ ‘ದೆಹಲಿ ಚಲೋ’ ಕಾರ್ಯಕ್ರಮ ವಿರೋಧಿಸಿ ಕರ್ನಾಟಕ ಬಿಜೆಪಿ ಘಟಕ ಬುಧವಾರ ಪ್ರತಿಭಟನೆ ನಡೆಸಿ ಬೆಳಗಾವಿಯ ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿತು. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಎದುರು ಹಾಕಿದ್ದ ಬ್ಯಾರಿಕೇಡ್ಗಳನ್ನು ಪಕ್ಕಕ್ಕೆ ತಳ್ಳಿ ಬಿಜೆಪಿ ಧ್ವಜ ಹಿಡಿದುಕೊಂಡು ಒಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಕಚೇರಿಗೆ ನುಗ್ಗದಂತೆ ತಡೆದು ೩೦ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷ ದೇಶ ವಿರೋಧಿ ಎಂದು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ಬೀಗ ಹಾಕಲು ಯತ್ನಿಸಿದ ಬಿಜೆಪಿ ಶಾಸಕ ಆರ್.ಅಶೋಕ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ ಹುಕ್ಕಾ ನಿಷೇಧ
ಬೆಂಗಳೂರು, ಫೆ. ೭: ರಾಜ್ಯದಲ್ಲಿ ಎಲ್ಲ ಬಗೆಯ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಅವುಗಳ ಪರ ಜಾಹೀರಾತು, ಸೇವನೆಗೆ ಪ್ರಚೋದನೆ ಮತ್ತು ಸಂಗ್ರಹಣೆಯನ್ನು ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಸಾರ್ವಜನಿಕರ ಆರೋಗ್ಯ ಕಾಪಾಡುವುದಕ್ಕೆ ಸಂವಿಧಾನದ ೪೭ನೇ ವಿಧಿಯಲ್ಲಿ ರಾಜ್ಯ ಸರ್ಕಾರಕ್ಕೆ ಲಭ್ಯವಿರುವ ಅಧಿಕಾರವನ್ನು ಬಳಸಿ ಈ ಆದೇಶ ಹೊರಡಿಸಲಾಗಿದೆ. ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಹುಕ್ಕಾ, ತಂಬಾಕು ರಹಿತ ಮತ್ತು ನಿಕೋಟಿನ್ ರಹಿತ ಹುಕ್ಕಾ, ಸ್ವಾದಭರಿತ, ಮೊಲಾಸಿಸ್, ಶಿಶಾ ಒಳಗೊಂಡ ಹುಕ್ಕಾಗಳನ್ನು ನಿಷೇಧಿಸಲಾಗಿದೆ.
ಅರವಿಂದ್ ಕೇಜ್ರಿವಾಲ್ಗೆ ಸಮನ್ಸ್
ದೆಹಲಿ, ಫೆ. ೭: ಜಾರಿ ನಿರ್ದೇಶನಾಲಯ ನೀಡಿದ ದೂರಿನ ಆಧಾರದಲ್ಲಿ ದೆಹಲಿ ಕೋರ್ಟ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ತಾ. ೧೭ಕ್ಕೆ ಸಮನ್ಸ್ ಜಾರಿಗೊಳಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಸಮನ್ಸ್ಗೆ ಕೇಜ್ರಿವಾಲ್ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಕೋರ್ಟ್ ಮೊರೆ ಹೋಗಿತ್ತು. ದೂರನ್ನು ಪರಿಗಣಿಸಲಾಗಿದೆ ಮತ್ತು ತಾ. ೧೭ ರಂದು ಹಾಜರಾಗುವಂತೆ ಕೇಜ್ರಿವಾಲ್ಗೆ ಸಮನ್ಸ್ ನೀಡಲಾಗುತ್ತಿದೆ ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟೆçÃಟ್ ದಿವ್ಯಾ ಮಲ್ಹೋತ್ರಾ ಹೇಳಿದ್ದಾರೆ.
ಕಟ್ಟಡ ಕುಸಿದು ೬ ಮಹಿಳಾ ಕಾರ್ಮಿಕರ ಸಾವು
ಉದಕಮಂಡಲ, ಫೆ. ೭: ಊಟಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಪಕ್ಕದಲ್ಲಿರುವ ಮನೆಯೊಂದು ಕುಸಿದ ಪರಿಣಾಮ, ಕೆಲಸ ಮಾಡುತ್ತಿದ್ದ ೬ ಮಹಿಳಾ ಕಾರ್ಮಿಕರು ಅವಶೇಷಗಳಡಿ ಸಿಲುಕಿ ಜೀವಂತ ಸಮಾಧಿಯಾಗಿದ್ದಾರೆ. ಶಕೀಲಾ (೩೦), ಸಂಗಿತಾ (೩೫), ಭಾಗ್ಯಾ (೩೬), ಉಮಾ (೩೫), ಮುತ್ತುಲಕ್ಷಿö್ಮ (೩೬) ಹಾಗೂ ರಾಧಾ (೩೮) ಮೃತರು ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಟ್ಟಡದ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಶಂಕೆ ಇದೆ. ಕಾರ್ಮಿಕರು ಎಂದಿನAತೆ ತಾವು ಕಾರ್ಯ ನಿರ್ವಹಿಸುವ ನಿವೇಶನದಲ್ಲಿ ಮಣ್ಣನ್ನು ತೆಗೆದು ಸಾಗಿಸುತ್ತಿದ್ದರು. ಆದರೆ ಇದೇ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಮನೆಯೊಂದು ಏಕಾಏಕಿ ಕುಸಿದಿದೆ. ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಳಿಯಲ್ಲಿ ಗುಂಡು-ನಿವೃತ್ತ ಸೈನಿಕನ ಬಂಧನ
ಬೆAಗಳೂರು, ಫೆ. ೭: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಮದ್ಯದ ಅಮಲಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಆರೋಪದ ಮೇಲೆ ೬೫ ವರ್ಷದ ಭಾರತೀಯ ಸೇನೆಯ ನಿವೃತ್ತ ಸೈನಿಕನನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದಾರೆ. ಅಬ್ಬಿಗೆರೆ ನಿವಾಸಿ ಪರಶುರಾಮ್ ಮಾಜಿ ಸೈನಿಕ. ಇವರ ಕೃತ್ಯದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಸೂರಜ್ ಎಂಬವರ ಮನೆಗೆ ಹೋಗಿ ಆತನ ಕುಟುಂಬ ಸದಸ್ಯರೊಂದಿಗೆ ಜಗಳವಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮತ್ತು ಸೂರಜ್ ಕುಟುಂಬ ಸ್ನೇಹಿತರಾಗಿದ್ದು ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ ನಂತರ ಕೆಲವು ವಿವಾದಗಳಿಂದ ಅವರ ಸಂಬAಧವು ಹಳಸಿತ್ತು ಎಂದು ಅವರು ಹೇಳಿದರು. ನಂತರ ಆರೋಪಿ ಗಾಳಿಯಲ್ಲಿ ಗುಂಡು ಹಾರಿಸಿದಾಗ ಭಯಭೀತರಾಗಿದ್ದಾರೆ ನಂತರ, ಅಕ್ಕಪಕ್ಕದವರು ಪರಶುರಾಮನನ್ನು ಸಮಾಧಾನಪಡಿಸಿದರು. ಅಷ್ಟರಲ್ಲಿ ಸೂರಜ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಶುರಾಮ್ನನ್ನು ಬಂಧಿಸಿ ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ.